Site icon Vistara News

Rain News : ಎಲ್ಲೆಡೆ ವಾರ್‌ ರೂಂ; ಜೀವಹಾನಿ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್

CM holds video conference with Deputy Commissioners Zilla Panchayat CEO

ಬೆಂಗಳೂರು: ರಾಜ್ಯದಲ್ಲಿ ಪ್ರತಿ ಮಳೆಗಾಲದಲ್ಲಿಯೂ (Rain News) ಸಾವು-ನೋವುಗಳ ಆಗುತ್ತಲೇ ಇವೆ. ಇದನ್ನು ತಪ್ಪಿಸಲು ಆಗುವುದಿಲ್ಲವೇ? ಹಿಂದಿನ ಪ್ರವಾಹದ ಅನುಭವದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಜೀವಹಾನಿ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಖಡಕ್ ಸೂಚನೆ ನೀಡಿದ್ದಾರೆ.

ಅವರು ಬುಧವಾರ ರಾಜ್ಯದ ಹವಾಮಾನ (Karnataka Weather), ಮಳೆ ಹಾಗೂ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿದ್ದು, ರಾಜ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.

ಪ್ರವಾಹ ಬಂದಾಗ ಬಹಳ ರೈತರನ್ನು ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪ್ರವಾಹದ ಮುನ್ಸೂಚನೆ ಬಂದ ಕೂಡಲೇ ಸ್ಥಳಾಂತರಕ್ಕೆ ಕ್ರಮ ವಹಿಸಿ. ಹಿಂದಿನ ಸರ್ಕಾರದ ವತಿಯಿಂದ ಪರ್ಯಾಯವಾಗಿ ಕಟ್ಟಲಾಗಿರುವ ಮನೆಗಳು ಯಾರೂ ವಾಸ ಮಾಡಲು ಕೂಡ ಯೋಗ್ಯವಲ್ಲ ಎನ್ನುವ ದೂರುಗಳು ಜನರಿಂದ ವ್ಯಾಪಕವಾಗಿ ಬರುತ್ತಿವೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳ ಕಡೆಗೆ ಹೆಚ್ಚು ಒತ್ತು ನೀಡಿ ಎಂದು ಸ್ಪಷ್ಟ ಎಚ್ಚರಿಕೆಯನ್ನು ನೀಡಿದರು.

ಇದನ್ನೂ ಓದಿ: Lok Sabha Election 2024 : ಬಿಜೆಪಿಯಿಂದ ಹೊರಗೆ ಕಾಲಿಟ್ಟರೇ ಸುಮಲತಾ?

ಜನರಿಗೆ ಎಚ್ಚರಿಕೆ ನೀಡಿ ಪ್ರಾಣ ಹಾನಿ ತಪ್ಪಿಸಿ

ಅನಾಹುತಗಳನ್ನು ತಪ್ಪಿಸಲು ಹೆಚ್ಚಿನ ಗಮನ ನೀಡಬೇಕು. ಜಿಲ್ಲಾಧಿಕಾರಿಗಳು ಪದೇ ಪದೆ ಪ್ರವಾಹವಾಗುವ ಸ್ಥಳಗಳಲ್ಲಿ ಜನರಿಗೆ ಮನವರಿಕೆ ಮಾಡಿ ಸ್ಥಳಾಂತರ ಮಾಡಿ ಜೀವಹಾನಿ ತಪ್ಪಿಸಬೇಕು. ನೆರೆ ಬಂದು ನೀರು ಹೆಚ್ಚಾದರೆ ಅದರ ಬಳಿ ಜನರು ಹೋಗದಂತೆ ಜಿಲ್ಲಾಡಳಿತ ಕ್ರಮ ವಹಿಸಲು ಸೂಚಿಸಿದರು. ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡುವುದು ಹಾಗೂ ಅರಿವು ಮೂಡಿಸುವ ಕೆಲಸ ಮಾಡಿ ಪ್ರಾಣಹಾನಿಯನ್ನು ತಪ್ಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

CM holds video conference with Deputy Commissioners Zilla Panchayat CEO

ಭೂ ಕುಸಿತದ ಸಾಧ್ಯತೆ ಮೊದಲೇ ಗೊತ್ತಿರುತ್ತದೆ

ಭೂ ಕುಸಿತ ಆಗಬಹುದಾದ ಸ್ಥಳಗಳ ಬಗ್ಗೆ ಒಂದು ಹಂತಕ್ಕೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇರುತ್ತದೆ. ಪೊಲೀಸ್, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮಧ್ಯೆ ಸಮನ್ವಯವಿದ್ದರೆ ಸಾಕಷ್ಟು ಜೀವಹಾನಿ ತಪ್ಪಿಸಬಹುದು. ಮಣ್ಣು ಕುಸಿತವಾಗುವ ಸ್ಥಳಗಳ ಬಗ್ಗೆ ಇಲಾಖೆಗಳಿಗೆ ಮಾಹಿತಿ ಇರುತ್ತದೆ. ಕಾಳಜಿಯಿಂದ ವರ್ತಿಸಿ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಎಲ್ಲ ಕಡೆ ವಾರ್‌ ರೂಂ ತೆರೆಯಿರಿ

ಉಡುಪಿ ಜಿಲ್ಲೆಯಲ್ಲಿ ಬಹಳ ಮೊದಲೇ ವಾರ್ ರೂಂಗಳನ್ನು ತೆಗೆಯಲಾಗಿತ್ತು. ಇದರಿಂದ ಸಾಕಷ್ಟು ಅನಾಹುತಗಳನ್ನು ತಪ್ಪಿಸಿದ್ದೇವೆ. ಆದರೆ, ಕೈ ಸಂಕದಿಂದ ಹಾಗೂ ಇತರೆ ಮಳೆ ಅಪಘಾತಗಳಿಂದ 9 ಸಾವು ಸಂಭವಿಸಿದೆ ಎಂದು ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ವೇಳೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಮುಂಜಾಗ್ರತಾ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ, ಇದೇ ಕ್ರಮ ಎಲ್ಲ ಜಿಲ್ಲೆಗಳಲ್ಲೂ ಅಗತ್ಯ ಎಂದರು.

ಇದನ್ನೂ ಓದಿ: Udupi Toilet Video : ಟಾಯ್ಲೆಟ್ಟಲ್ಲಿ ಹೆಣ್ಮಕ್ಕಳ ವಿಡಿಯೊ ಮಾಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ FIR

ಪ್ರತಿದಿನ ಸುದ್ದಿಗೋಷ್ಠಿ ನಡೆಸಿ

ಜನವರಿ ಒಂದರಿಂದ ಜುಲೈ 25 ರವರೆಗೆ 64 ಜನ ಮರಣಹೊಂದಿದ್ದಾರೆ. ಇವರಿಗೆ ತುರ್ತಾಗಿ ಪರಿಹಾರ ಒದಗಿಸಲಾಗಿದೆ. ಆದರೆ, ಜಿಲ್ಲಾಡಳಿತ ಅಲರ್ಟ್ ಆಗಿದ್ದರೆ ಈ ಅನಾಹುತಗಳಲ್ಲಿ ಸಾಕಷ್ಟನ್ನು ತಪ್ಪಿಸಬಹುದಿತ್ತಲ್ಲವೇ? ಸಂಬಂಧಪಟ್ಟ ಅಧಿಕಾರಿಗಳು ಮಳೆ ಸಾಧ್ಯತೆ, ಮಳೆಯ ಬಿರುಸಿನ ಬಗ್ಗೆ ಪ್ರತಿದಿನ ಪತ್ರಿಕಾಗೋಷ್ಠಿ ನಡೆಸಬೇಕು. ಕಾಲು ಜಾರುವ ಕಡೆಗಳಲ್ಲಿ ಹೋಗಬಾರದು, ತುಂಬಿ ಹರಿವ ನದಿಗಳನ್ನು ದಾಟಬಾರದು ಎಂದು ಸೂಚಿಸಬೇಕು. ಸಾವು ತಡೆಗಟ್ಟಲು ಹೆಚ್ಚಿನ ಶ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಅಂಗನವಾಡಿ, ಶಾಲಾ ಕಟ್ಟಡಗಳು, ಆಸ್ಪತ್ರೆಗಳ ಕಟ್ಟಡ ಶಿಥಿಲ ಆಗಿವೆ ಎನ್ನುವ ಮಾಹಿತಿ ಮೊದಲೇ ಗೊತ್ತಿರುತ್ತದೆ. ಯಾವ ಕಟ್ಟಡಗಳಲ್ಲಿ ಸೋರಿಕೆ ಆಗುತ್ತಿದೆ ಎನ್ನುವ ಮಾಹಿತಿಯೂ ಮೊದಲೇ ಗೊತ್ತಿರುತ್ತದೆ. ದುರಸ್ತಿ, ಸ್ಥಳಾಂತರ, ರಿಪೇರಿಗೆ ಸಾಕಷ್ಟು ಹಣ ಮೀಸಲಿಟ್ಟಿದ್ದರೂ ಈ ಬಗ್ಗೆ ಮೊದಲೇ ಕ್ರಮ ಏಕೆ ಕೈಗೊಳ್ಳುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು ಇಂತಹ ಉದಾಸೀನ ಮತ್ತು ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಜಿ.ಪರಮೇಶ್ವರ್, ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಎಂ.ಸಿ. ಸುಧಾಕರ್, ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ್‌ ಖರ್ಗೆ, ಈಶ್ವರ್ ಖಂಡ್ರೆ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ , ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಡಿಯೋ ಸಂವಾದದ ಮುಖ್ಯಾಂಶಗಳು

ಸಮನ್ವತೆಯಿಂದ ಅನಾಹುತ ತಡೆಯಿರಿ

ಹಿಂದಿನ ವರ್ಷಗಳ ಅನುಭವ ಮತ್ತು ಅನಾಹುತಗಳಿಂದ ಬಹಳಷ್ಟು ಸಾವಿನ, ಅವಘಡ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಜಿಲ್ಲಾಡಳಿತ, ಪೊಲೀಸ್ ಹಾಗೂ ಇನ್ನಿತರೆ ಇಲಾಖೆಗಳ ನಡುವಿನ ಸಮನ್ವಯತೆಯಿಂದ ಸಾವು, ಮಳೆ ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ. ಈ ದಿಕ್ಕಿನಲ್ಲಿ ಸೂಕ್ತ ಕ್ರಮ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.

ಇದನ್ನೂ ಓದಿ: DJ Halli case : ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನ?: ತೇಜಸ್ವಿ ಸೂರ್ಯ, ಸಿ.ಟಿ. ರವಿ ಕಿಡಿ

ಅನುದಾನದ ಕೊರತೆ ಇಲ್ಲ

ಪ್ರತಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಅನುದಾನ ಲಭ್ಯವಿದೆ. ಎಸ್.ಡಿ.ಆರ್.ಎಫ್ ನ ಅಡಿಯೂ ಅನುದಾನದ ಲಭ್ಯತೆ ಇದೆ . ದುರಸ್ತಿಗೆ ತಕ್ಷಣ ಕ್ರಮ ವಹಿಸಿ. ಹೆಚ್ಚಿನ ಅನುದಾನ ಅಗತ್ಯವಿದ್ದರೆ ಮನವಿ ಕಳುಹಿಸಿ. ಜಿಲ್ಲೆಯ ಎಲ್ಲ ಆಗುಹೋಗುಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ನಿಗಾ ವಹಿಸಿ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ಉಳಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

Exit mobile version