ಬೆಂಗಳೂರು: ಸಾಕುಪ್ರಾಣಿ ಮತ್ತು ಬೀದಿ ನಾಯಿಗಳ ರಕ್ಷಣೆಗೆ ಸಂಬಂಧಿಸಿ ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ (AWBI) ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ದೇಶನ ಕೋರಿ ಹೈ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಪರಿಗಣಿಸಿದ ನ್ಯಾಯಾಲಯ ರಾಜ್ಯ ಸರಕಾರಕ್ಕೆ ನೋಟಿಸ್ ನೀಡಿದೆ.
ತುಮಕೂರು ಮೂಲದ ವಕೀಲ ರಮೇಶ್ ನಾಯ್ಕ್ಲ್ ಎಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರನ್ನೊಳಗೊಂಡ ವಿಭಾಗೀಯ ಪೀಠ ನೋಟಿಸ್ ನೀಡುವಂತೆ ಸೂಚಿಸಿದೆ.
ಪ್ರಾಣಿಗಳ ಕಲ್ಯಾಣ ಮಂಡಳಿ ಮಾರ್ಗಸೂಚಿಗಳ ಪಾಲನೆಯಿಂದ ಮಾನವ-ನಾಯಿಗಳ ಸಂಘರ್ಷವನ್ನು ತಪ್ಪಿಸಬಹುದು ಮತ್ತು ಬೀದಿ ನಾಯಿಗಳ ಮೇಲಿನ ಕ್ರೌರ್ಯವನ್ನು ತಡೆಯಬಹುದು ಎಂದು ಅರ್ಜಿದಾರರು ಹೇಳಿದ್ದಾರೆ. ಮಾರ್ಗಸೂಚಿ ಪಾಲನೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದರಿಂದ ಮನುಷ್ಯ ಮತ್ತು ನಾಯಿ ಇಬ್ಬರಿಗೂ ತೊಂದರೆ ಆಗುತ್ತಿದೆ ಎಂದು ವಾದಿಸಿದ್ದಾರೆ.
ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ 4 ವರ್ಷದ ಮಗು ಬೀದಿ ನಾಯಿಗಳ ದಾಳಿಯಿಂದ ಸಾವನ್ನಪ್ಪಿರುವುದು, ಬೆಂಗಳೂರಿನ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಬೀದಿ ನಾಯಿಯ ಮೇಲೆ ಒಬ್ಬ ರಾಜಕಾರಣಿಯ ಮೊಮ್ಮಗ ತನ್ನ ಕಾರನ್ನು ಚಲಾಯಿಸಿ ಆ ನಾಯಿಯನ್ನು ಸಾಯಿಸಿದ ಘಟನೆಯನ್ನು ಸಹ ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕಾರಿಗೆ ಸಿಕ್ಕಿ ನರಳಾಡಿ ನರಳಾಡಿ ಸತ್ತ ಶ್ವಾನ: ಬೆಂಗಳೂರಿನಲ್ಲಿ ಅಮಾನವೀಯ ಘಟನೆ