Site icon Vistara News

Karnataka Election 2023: ಆಯನೂರು ಹೇಳಿಕೆಗೆ ಪ್ರತಿಕ್ರಿಯಿಸಲ್ಲ; ಮಂಜುನಾಥ್‌ ಕಿಡಿಕಾರಿದರೂ ಬಾಯಿಬಿಡದ ಈಶ್ವರಪ್ಪ

KS Eshwarappa burns congress manifesto and demand arrest of siddamaiah and DKS

KS Eshwarappa burns congress manifesto and demand arrest of siddamaiah and DKS

ಶಿವಮೊಗ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಅವರ ಮಗನಿಗಿಂತ ಹೆಚ್ಚು ಅರ್ಹತೆ ನನಗಿದೆ. ಬೇರೆಯವರಂತೆ ಲಜ್ಜೆ, ನಾಚಿಕೆ ಬಿಡದೆ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದೇನೆ. ಒಂದೇ ಒಂದು ಆಪಾದನೆ ನನ್ನ ಮೇಲೆ ಇಲ್ಲ. ಈಗ ನಾನು ನಂತರ ನನ್ನ ಸಂತತಿ ಅನ್ನೋದು ಸರಿಯಲ್ಲ. ಕಾಂಗ್ರೆಸ್ ಗಟ್ಟಿ ನೆಲ ಹೊಸನಗರದಲ್ಲಿ ಬಿಜೆಪಿ ಧ್ವಜ ಹಾರಿಸಿದ ಹೆಮ್ಮೆ ನನಗಿದೆ. ಬಂಗಾರಪ್ಪ ವಿರುದ್ಧ ಗೆಲುವು ಸಾಧಿಸಿದ ಹೆಮ್ಮೆ ನನಗಿದೆ. ಸವಾಲು ಇದ್ದಲ್ಲಿ ಹೋರಾಡಿ ಗೆದ್ದು ಬಂದಿದ್ದೇನೆ. ಯಾವುದೇ ಆಯಕಟ್ಟಿನ ಸುರಕ್ಷಿತ ಸ್ಥಳ ನೋಡಿ ನಾನಿಲ್ಲ. ಗೂಟ ಹೊಡೆದುಕೊಂಡು ಕೂತಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ವಾಗ್ದಾಳಿ ನಡೆಸಿದ್ದರೂ ಈ ಬಗ್ಗೆ ಈಶ್ವರಪ್ಪ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆಯನೂರು ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಷ್ಟೇ ಹೇಳಿ ಮೌನಕ್ಕೆ ಜಾರಿದ್ದಾರೆ.‌

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯ ಐತಿಹಾಸಿಕ ಮಹಾಸಂಗಮ ಸಮಾವೇಶವು ದಾವಣಗೆರೆಯಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಹಾಸಂಗಮದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ವಿಜಯ ಸಂಕಲ್ಪ ಯಾತ್ರೆ, ನಾಲ್ಕು ತಂಡಗಳಲ್ಲಿ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ನಿರೀಕ್ಷೆ ಮೀರಿ ಯುವಕರು ಉತ್ಸಾಹ ತೋರುತ್ತಿದ್ದಾರೆ. ಮಹಾಜನತೆಯ ಆಶೀರ್ವಾದ ಬಿಜೆಪಿಗೆ ಸಿಕ್ಕಿದೆ. ಮಹಾಸಂಗಮದಲ್ಲಿ 10 ಲಕ್ಷ ಜನ ಸೇರಲಿದ್ದಾರೆ. ಶಿವಮೊಗ್ಗದಿಂದ 25,000 ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಾಜಕೀಯ ಇತಿಹಾಸದಲ್ಲಿ ಈ ಮಟ್ಟದ ದೊಡ್ಡ ಸಮಾವೇಶ ನಡೆದಿಲ್ಲ. ಜೆಡಿಎಸ್‌ನ ಪಂಚರತ್ನ ಯಾತ್ರೆ, ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಗೆ ಹೋಲಿಕೆ ಮಾಡಿದರೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯು ಯಶಸ್ವಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Panchamasali Reservation : ಪಂಚಮಸಾಲಿಗಳಿಗೆ 2ಸಿ, 2ಡಿ ಮೀಸಲಾತಿ ನೀಡಲು ಇದ್ದ ತಡೆ ತೆರವು, ಸಿಎಂಗೆ ಬಿಗ್‌ ರಿಲೀಫ್‌?

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತುದಿ ಬುಡ ಇಲ್ಲದ ಬಸ್ ಪ್ರಯಾಣ ಆರಂಭಿಸಿದ್ದಾರೆ. ಚಾಮುಂಡೇಶ್ವರಿಯಿಂದ ಬಾದಾಮಿ, ಬಾದಾಮಿಯಿಂದ ಕೋಲಾರ, ಕೋಲಾರದಿಂದ ವರುಣದತ್ತ ಮುಖ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ದಿಕ್ಕೇ ತೋಚದ ಹಾಗೆ ಆಗಿದೆ. ಆರಂಭದಲ್ಲಿ ಹೈಕಮಾಂಡ್ ಹೇಳಿದ ಕಡೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು. ನಂತರ ಕುಟುಂಬದವರು ಹೇಳಿದ ಕಡೆ ನಿಲ್ಲುತ್ತೇನೆ ಎಂದು ಹೇಳಿದರು. ಬಸ್ ಯಾತ್ರೆ ಯಾವಾಗ ನಿಲ್ಲಿಸುತ್ತೀರಿ? ಯಾವ ಕ್ಷೇತ್ರವನ್ನು ಆಯ್ಕೆ ಮಾಡುತ್ತೀರಿ? ನಿಮ್ಮ ತೀರ್ಮಾನವನ್ನು ಯಾವಾಗ ಹೇಳುತ್ತೀರಿ? ಎಂದು ಸಿದ್ದರಾಮಯ್ಯ ಅವರಿಗೆ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ನಾನೇ ಮುಖ್ಯಮಂತ್ರಿ ಅಂತ ಹೇಳುವುದು ಕುಟುಂಬದ ಆಸ್ತಿಯಲ್ಲ. ಕೋಮುವಾದಿ ಅಂತ ರಾಷ್ಟ್ರೀಯವಾದಿ ಪಕ್ಷಕ್ಕೆ ಹೇಳುತ್ತಾರೆ. ಅವರು ರಾಷ್ಟ್ರೀಯವಾದಿಯಾಗಿದ್ದಾರೆ ನಾವು ಮಾತನಾಡುತ್ತಿರಲಿಲ್ಲ. ಈಗ ಸ್ಪಷ್ಟವಾಗಿ ಕಾಂಗ್ರೆಸ್ ಜಾತಿ ಪರವಾಗಿ ಹೊರಟಿದೆ. 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಸಿದ್ದರಾಮಯ್ಯ ಅವರನ್ನು ಅವರ ಪಕ್ಷದವರೇ ಸೋಲಿಸುತ್ತಾರೆ. ಎಲ್ಲೇ ನಿಂತರೂ ದಲಿತರು, ಹಿಂದುಳಿದವರು, ಒಕ್ಕಲಿಗರು, ಲಿಂಗಾಯಿತರು ಅವರನ್ನು ಸೋಲಿಸುತ್ತಾರೆ. ಹೀಗಾಗಿ ಅವರು ಅಲ್ಪಸಂಖ್ಯಾತರನ್ನು ಮಾತ್ರ ಅವರು ನೆಚ್ಚಿಕೊಂಡಿದ್ದಾರೆ. ಅತಿ ಹೆಚ್ಚು ಮುಸಲ್ಮಾನರು ಇರುವ ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ಬಿಜೆಪಿ ದಲಿತರ ವಿರೋಧಿಯಲ್ಲ ಲಿಂಗಾಯತರ, ಒಕ್ಕಲಿಗರ ವಿರೋಧಿಯಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಬಾದಾಮಿಯಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಕೋಲಾರದಲ್ಲೂ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೆ. ಜನರ ಪರವಾಗಿ ಇರುವವನು ಕ್ಷಣದಲ್ಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ನನ್ನ ಸ್ಪರ್ಧೆಯನ್ನು ಕೇಂದ್ರ ನಾಯಕರು ನಿರ್ಧರಿಸುತ್ತಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: Karnataka Election 2023: ಈಶ್ವರಪ್ಪ ಮಗನಿಗಿಂತ ನಾನೇ ಅರ್ಹ; ನನಗೇ ಟಿಕೆಟ್‌ ಕೊಡಿ: ಆಯನೂರು ಮಂಜುನಾಥ್‌

ಬಿಜೆಪಿಯಿಂದ ಗೆದ್ದರೆ ಗೆಲುವು ನಿಶ್ಚಿತ- ಮೇಘರಾಜ್

ಬಿಜೆಪಿ ಅಡಿ ಯಾರೇ ಸ್ಪರ್ಧಿಸಿದರೂ ಗೆಲ್ಲುವ ಅವಕಾಶ ಹೆಚ್ಚು. ಹೀಗಾಗಿ ಅನೇಕ ಆಕಾಂಕ್ಷಿಗಳು ಟಿಕೆಟ್ ಬಯಸುವುದು ಸಹಜ. ಪಕ್ಷದ ಘನತೆಗೆ ಧಕ್ಕೆ ತರುವಂಥವರ ಬಗ್ಗೆ ಪಕ್ಷ ಗಮನಿಸುತ್ತದೆ. ಇಲ್ಲಿನ ಘಟನೆಗಳನ್ನು ರಾಜ್ಯದ ಕಮಿಟಿಯ ಗಮನಕ್ಕೆ ತರಲಾಗಿದೆ. ದೊಡ್ಡ ಪಕ್ಷದಲ್ಲಿ ಇಂತಹ ಘಟನೆ ಸಾಮಾನ್ಯ. ಆಯನೂರು ಮಂಜುನಾಥ್ ಹಿರಿಯರು. ಅವರು ನಾಲ್ಕು ಮನೆಗಳನ್ನೂ ಪ್ರವೇಶ ಮಾಡಿದ್ದಾರೆ. ಎಲ್ಲವನ್ನು ಸರಿದಾರಿಗೆ ತರುವ ಕೆಲಸ ಪಕ್ಷದಿಂದ ಆಗುತ್ತದೆ. ನಿಶ್ಚಿತವಾಗಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರವನ್ನೂ ಗೆಲ್ಲುತ್ತೇವೆ. ತಪ್ಪು ತಿಳಿವಳಿಕೆ ಇದ್ದವರನ್ನು ಸರಿ ಮಾಡುತ್ತೇನೆ. ಅಭಿಪ್ರಾಯ ವ್ಯಕ್ತಪಡಿಸುವುದು ಎಲ್ಲರ ಹಕ್ಕು. ಆದರೆ ಅದನ್ನು ಸರಿಯಾದ ಕ್ರಮದಲ್ಲಿ ವ್ಯಕ್ತಪಡಿಸಲಿ ಎಂದು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಹೇಳಿದರು.

Exit mobile version