ಮೈಸೂರು: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Rama Mandir) ಶ್ರೀರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠೆ (Prana Prathishte) ನಡೆಯುವ ಹೊತ್ತಿಗೆ ರಾಮನ ಮೂರ್ತಿಗೆ (Rama Statue) ಮೂಲವಾದ ಕೃಷ್ಣ ಶಿಲೆ ಸಿಕ್ಕ ಅದೇ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ (Rama Mandir where Rama Shila Found) ನಡೆಯಲಿದೆ. ಇದನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಜೆಡಿಎಸ್‌ನ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ (MLA GT Devegowda) ಪ್ರಕಟಿಸಿದರು.
ಮೈಸೂರಿನ ಶಿಲ್ಪಿ ಅರುಣ್ ಯೋಗಿ ರಾಜ್ ಅವರು ಕೆತ್ತಿದ ರಾಮನ ಮೂರ್ತಿ ಜನವರಿ 22ರಂದು ಪ್ರತಿಷ್ಠಾಪನೆಗೊಳ್ಳಲಿದೆ. ಈ ಮೂರ್ತಿಯನ್ನು ಕೆತ್ತಲು ಬಳಸಿದ ಕಲ್ಲು ಮೈಸೂರು ತಾಲೂಕು ಹಾರೋಹಳ್ಳಿಯ ಜಮೀನಿನಲ್ಲಿ ಸಿಕ್ಕಿದ್ದು. ಅಲ್ಲಿನ ರಾಮದಾಸ್ ಎಂಬವರ ಜಮೀನಿನಲ್ಲಿದ್ದ ಶಿಲೆಯೇ ಈಗ ರಾಮನ ಮೂರ್ತಿಯಾಗಿ ಅರಳಿ ನಿಂತು ಪ್ರಾಣ ಪ್ರತಿಷ್ಠೆಗೆ ಕಾಯುತ್ತಿದೆ. ಹೀಗಾಗಿ ರಾಮ ಶಿಲೆ ಸಿಕ್ಕ ಜಾಗದಲ್ಲೂ ಮಂದಿರ ನಿರ್ಮಾಣ ಮಾಡಬೇಕು ಎಂದು ಜಾಗದ ಮಾಲೀಕರು ಮತ್ತು ಊರಿನವರು ಚಿಂತನೆ ನಡೆಸಿದ್ದರು. ಕೆಲವು ದಿನದ ಹಿಂದೆ ಅಲ್ಲಿ ಪೂಜೆ ಕೂಡಾ ನಡೆಸಲಾಗಿತ್ತು.
ಇದೀಗ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಇದರ ಬಗ್ಗೆ ಮುತುವರ್ಜಿ ವಹಿಸಿದ್ದು, ಜನವರಿ 22ರಂದೇ ಮಂದಿರಕ್ಕೆ ಭೂಮಿ ಪೂಜೆ ನಡೆಸಲು ನಿರ್ಧರಿಸಲಾಗಿದೆ. ಇದನ್ನು ಸ್ವತಃ ಜಿ.ಟಿ ದೇವೇಗೌಡರೇ ಪ್ರಕಟಿಸಿದ್ದಾರೆ.
ʻʻಕೃಷ್ಣ ಶಿಲೆ ಸಿಕ್ಕಿದ ಹಾರೋಹಳ್ಳಿ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮವಾಗಿದೆ. ದಲಿತ ಬಂಧು ರಾಮದಾಸ್ ಜಮೀನಿನಲ್ಲಿ ಶಿಲೆ ಸಿಕ್ಕಿದೆ. ನಾನು ಹೈಸ್ಕೂಲ್ ಓದುವಾಗ ರಾಮದಾಸ್ ಅಟೆಂಡರ್ ಆಗಿದ್ದದವರು. ಪ್ರಧಾನಿ ನರೇಂದ್ರ ಮೋದಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅರ್ಧಗಂಟೆ ಪೂಜೆ ಮಾಡಿದ್ದರು. ಚಾಮುಂಡೇಶ್ವರಿ ಆಶೀರ್ವಾದದಿಂದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ರಾಮನಿಗೆ ಮೂರ್ತಿಯಾಗುವ ಶಿಲೆ ಸಿಕ್ಕಿದೆ.”” ಎಂದು ಜಿ.ಟಿ. ದೇವೇಗೌಡರು ಹೇಳಿದರು.
ʻʻಜ.22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲಿ ನಾವೂ ಪೂಜೆ ಮಾಡುತ್ತೇವೆ. ಕೃಷ್ಣ ಶಿಲೆ ಸಿಕ್ಕಿದ ಜಾಗದಲ್ಲಿ ಬೆಳಗ್ಗೆ 6ರಿಂದ 8ರವರೆಗೆ ಭೂಮಿಪೂಜೆ ಮಾಡಿಸುತ್ತೇವೆ. ಗ್ರಾಮಸ್ಥರನ್ನು ಸೇರಿಸಿ ಭಜನೆ ಮಾಡುತ್ತೇವೆʼʼ ಎಂದು ಹೇಳಿದ ಜಿ.ಟಿ. ದೇವೇಗೌಡರು, ʻʻನಾವು ಚಿಕ್ಕವನಿದ್ದಾಗ ರಾಮನ ಫೋಟೋ ಹಿಡಿದು ಧನುರ್ಮಾಸದಲ್ಲಿ ರಾಮನ ಭಜನೆ ಮಾಡುತ್ತಿದ್ದೆವು. ಆ ರೀತಿಯ ಸೌಭಾಗ್ಯ ನನಗೆ ಮತ್ತೆ ಸಿಕ್ಕಿದೆʼʼ ಎಂದು ಖುಷಿಪಟ್ಟರು.
ಇದನ್ನೂ ಓದಿ: Ayodhya Ram Mandir: ಅಯೋಧ್ಯೆಯ ರಾಮ್‌ಲಲ್ಲಾ ಮೂರ್ತಿಗೆ ಮೈಸೂರಿನಿಂದ ಗುಪ್ತವಾಗಿ ತೆರಳಿದ ಶಿಲೆ
ಕೃಷ್ಣ ಶಿಲೆ ಸಿಕ್ಕ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ನಾವೇ ಶ್ರೀರಾಮ ಮಂದಿರ ನಿರ್ಮಾಣ ಮಾಡುತ್ತೇವೆ. ಅದಕ್ಕಾಗಿ ಜ.22ರಂದು ಭೂಮಿ ಪೂಜೆ ಮಾಡುತ್ತೇವೆ. ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಲು ಎಷ್ಟೋ ವರ್ಷ ತೆಗೆದುಕೊಂಡಿತ್ತು. ಆದರೆ, ಇಲ್ಲಿ ಎಲ್ಲ ಗ್ರಾಮಸ್ಥರ ಜತೆಗೆ ಸೇರಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಜಿ.ಟಿ. ದೇವೇಗೌಡರು ಹೇಳಿದರು.