ಬೆಂಗಳೂರು: ಆಯುಧ ಪೂಜೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಟ್ವೀಟ್ ಮೂಲಕ ಸ್ಪಷ್ಟನೆ (Clarification) ನೀಡಿದ್ದಾರೆ. ವಿಧಾನಸೌಧ (Vidhana Soudha), ವಿಕಾಸಸೌಧ (Vikasa Soudha) ಹಾಗೂ ಎಂಎಸ್ ಬಿಲ್ಡಿಂಗ್‌ನಲ್ಲಿ ಆಯುಧ ಪೂಜೆ (Ayudha Puja) ವೇಳೆ ಅರಿಶಿನ ಕುಂಕುಮ ಬಳಸುವುದನ್ನು ನಿಷೇಧಿಸಿ ಸುತ್ತೋಲೆ ನೀಡಲಾಗಿತ್ತು.
ಆಯುಧ ಪೂಜೆ ವೇಳೆ ಕೆಲ ಪೂಜಾ ಸಾಮಗ್ರಿಗೆ ನಿರ್ಬಂಧ ವಿಧಿಸಲಾಗಿದ್ದು, ಅರಿಶಿನ-ಕುಂಕುಮ, ಬೂದು ಕುಂಬಳಕಾಯಿ ಹಾಗೂ ದೀಪಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು. ಆಯುಧ ಪೂಜೆಗೆ ರಾಜ್ಯ ಸರ್ಕಾರ ನಿಯಮ ರೂಪಿಸಿದ್ದು, ಕಡ್ಡಾಯವಾಗಿ ಸಿಬ್ಬಂದಿ ಪಾಲಿಸಬೇಕು. ಇಲ್ಲದಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಚ್ಚರಿಕೆ ನೀಡಿದೆ. ವಿಧಾನಸೌಧ ವಿಕಾಸಸೌಧ, ಬಹುಮಹಡಿ ಕಟ್ಟಡದ ನೆಲಹಾಸುಗಳ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ಕಾರಣದಿಂದ ಪೂಜೆಯಲ್ಲಿ ರಾಸಾಯನಿಕ ಮಿಶ್ರಿತ ಅರಿಶಿನ-ಕುಂಕುಮ, ರಂಗೋಲಿಯನ್ನು ಬಳಸಬಾರದು ಎಂದು ಸೂಚಿಸಲಾಗಿದೆ.
ಸಿಎಂ ಹೇಳಿರುವುದೇನು?
ʼʼಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಜನತೆಯಲ್ಲಿ ಮನವಿ ಮಾಡುತ್ತೇನೆʼʼ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ (ಟ್ವೀಟ್) ಪೋಸ್ಟ್ ಮಾಡಿದ್ದಾರೆ.
ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ… pic.twitter.com/GkLPOP4Iqw
— CM of Karnataka (@CMofKarnataka) October 19, 2023
ಸುತ್ತೋಲೆಯಲ್ಲಿ ಏನಿದೆ?
ವಿಧಾನಸೌಧ ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ಸಮಯದಲ್ಲಿ ಕಚೇರಿಗಳ ಒಳಗೆ ಮತ್ತು ಕಾರಿಡಾರ್‌ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ ಹಾನಿಕಾರಕ ಬಣ್ಣವು ನೆಲಹಾಸುವಿನ ಮೇಲೆ ಬಿದ್ದು, ಸುಮಾರು ತಿಂಗಳುಗಳ ಕಾಲ ಹಾಗೆಯೇ ಅಂಟಿಕೊಂಡು ಉಳಿಯುತ್ತದೆ. ಇದರಿಂದ ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ.
ಆಯುಧ ಪೂಜೆ ಮಾಡುವಾಗ ಕಚೇರಿಯ ಒಳಗೆ, ಕಾರಿಡಾರ್‌ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ, ಕುಂಕುಮ, ಅರಿಶಿನ, ಸುಣ್ಣ ಹಾಗೂ ಇನ್ನಿತರ ವಸ್ತುಗಳನ್ನು ಬಳಸಬಾರದು. ಇನ್ನು ಪೂಜಾ ದಿನದಂದು ಕಚೇರಿಯಿಂದ ಹೊರಡುವ ಮುನ್ನ ಪೂಜೆಯ ದೀಪಗಳು ಹಾಗೂ ವಿದ್ಯುತ್ ದೀಪಗಳನ್ನು ನಂದಿಸಿ ತೆರಳಬೇಕು. ಹಾಗೆಯೇ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕು ಎಂದು ಸಿಬ್ಬಂದಿಗೆ ಸೂಚಿಸಲಾಗಿದೆ.
ಪಾರಂಪರಿಕ ಕಟ್ಟಡಗಳ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿ, ನೌಕರರ ಅದ್ಯ ಕರ್ತವ್ಯವಾಗಿದ್ದು, ಸೂಚನೆಗಳನ್ನು ಸ್ವಯಂ ಪ್ರೇರಿತರಾಗಿ ಪಾಲಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ಅನಿವಾರ್ಯವಾಗಿ ಜವಾಬ್ದಾರಿಯನ್ನು ನಿಗದಿಪಡಿಸಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Ayudha Puja: ವಿಧಾನಸೌಧದಲ್ಲಿ ಅರಿಶಿನ-ಕುಂಕುಮ ಬಳಸಬೇಡಿ; ಸರ್ಕಾರದಿಂದ ವಿವಾದಾತ್ಮಕ ಸುತ್ತೋಲೆ!