Site icon Vistara News

Azaadi sat| ಗಗನಕೆ ಚಿಮ್ಮಿತು ಪುಟ್ಟ SSLV, 750 ಹೆಣ್ಮಕ್ಕಳ ವೈಜ್ಞಾನಿಕ ಸಾಧನೆಯ ಕನಸನು ಹೊತ್ತು!

isro

ನವ ದೆಹಲಿ: ಬೆಳಗ್ಗೆ ೯ ಗಂಟೆ ೧೮ ನಿಮಿಷ. ೧೦..೯..೮.. ೩..೨.. ೧.. ಸ್ಟಾರ್ಟ್‌ ಎನ್ನುತ್ತಿದ್ದಂತೆಯೇ ಆಂಧ್ರ ಪ್ರದೇಶದ ಶ್ರೀಹರಿ ಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಮಿಂಚಿನ ಪ್ರಭೆಯೊಂದಿಗೆ ಧಿಗ್ಗನೆದ್ದು ಆಕಾಶಮುಖಿಯಾಗಿ ಹೊರಟಿತು ಪುಟ್ಟದೊಂದು ರಾಕೆಟ್‌. ಅದರ ಒಡಲಿನಲ್ಲಿತ್ತು ದೇಶದ ೭೫ ಗ್ರಾಮೀಣ ಸರಕಾರಿ ಶಾಲೆಗಳ ೭೫೦ ವಿದ್ಯಾರ್ಥಿನಿಯರ ವೈಜ್ಞಾನಿಕ ಸಾಧನೆಯ ಕೋಟಿ ಕನಸುಗಳು. ಹೇಮ ವರ್ಣದ ಧೂಮವನ್ನು ಚೆಲ್ಲುತ್ತಾ ನಭೋಮಮಂಡಲವನ್ನು ಬೇಧಿಸುತ್ತಾ ಸಾಗಿದ ಈ ರಾಕೆಟ್‌ ಭಾರತದ ಆಗಸ ಮಾತ್ರವಲ್ಲ, ಬಾಹ್ಯಾಕಾಶದಲ್ಲೂ ಹೆಣ್ಮಕ್ಕಳ ಸಾಧನೆ, ಹಳ್ಳಿಯ ಹುಡುಗಿಯರ ಸಂಕಲ್ಪ ಶಕ್ತಿಯನ್ನು ದಾಖಲಿಸುತ್ತಾ ಇತಿಹಾಸದ ಹೊಸ ಪುಟವನ್ನು ತೆರೆಯಿತು.

ಹಾಗೆ ಹೊರಟಿದ್ದು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇಸ್ರೋ ಸಿದ್ಧಪಡಿಸಿರುವ ಅತಿ ಸಣ್ಣ ವಾಣಿಜ್ಯ ರಾಕೆಟ್‌ ಎಸ್‌ಎಸ್‌ಎಲ್‌ವಿ (Small Satellite Launch Vehicle (SSLV). ಮುಂಜಾನೆ ೨.೧೮ಕ್ಕೆ ಆರಂಭವಾದ ಏಳು ಗಂಟೆಗಳ ಅಂತಿಮ ಕ್ಷಣಗಣನೆ ೯.೧೮ಕ್ಕೆ ಪೂರ್ಣಗೊಂಡು ಎಸ್‌ಎಸ್‌ಎಲ್‌ವಿ ಆಕಾಶಕ್ಕೆ ನೆಗೆದ ಆ ಕ್ಷಣವನ್ನು ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಮಕ್ಕಳು, ಹೆತ್ತವರು ಕಣ್ಣಾಲಿ ಮಂಜು ಮಾಡಿಕೊಂಡು ನೋಡಿದರು. ಅದರಲ್ಲೂ ಕಲ್ಪನಾತೀತವಾದ ಸಾಧನೆಯನ್ನು ಮಾಡಿದ ಹೆಮ್ಮೆಯೊಂದಿಗೆ ಆ ೭೫೦ ಹೆಣ್ಮಕ್ಕಳು ವಸ್ತುಶಃ ಆನಂದಬಾಷ್ಪ ಸುರಿಸಿದರು. ಆ ಉಪಗ್ರಹದೊಳಗೆ ಈ ಹೆಣ್ಮಕ್ಕಳು ವೈಜ್ಞಾನಿಕ ಮಾರ್ಗದರ್ಶನದೊಂದಿಗೆ ರೂಪಿಸಿದ ಐವತ್ತೈವತ್ತೇ ಗ್ರಾಂ ತೂಕದ ಪುಟ್ಟ ಪುಟ್ಟ ಪೇಲೋಡ್‌ಗಳಿದ್ದವು. ಅದರೊಳಗೆ ಒಂದು ಸೆಲ್ಫಿ ಕ್ಯಾಮರಾ ಮತ್ತು ದೂರದವರೆಗೂ ಗಮನಿಸಬಲ್ಲ ಟ್ರಾನ್ಸ್‌ಪಾಂಡರ್‌ಗಳಿದ್ದವು. ಅಂಥ ೭೫೦ ಪುಟ್ಟ ಪೇಲೋಡ್‌ಗಳು ಭೂಮಿಯ ಸನಿಹದ ನಿಗದಿತ ಕಕ್ಷೆಯಲ್ಲಿ ಕೆಲವು ಕಾಲ ತಿರುಗುತ್ತಾ ಮಾಹಿತಿಯನ್ನು ರವಾನಿಸಲಿವೆ.

ಇಂಥಹುದೊಂದು ಕನಸು ಹುಟ್ಟಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಭಾಷಣ ಮಾಡುವ ವೇಳೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಾಹ್ಯಾಕಾಶದಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸಲಾಗುತ್ತದೆ ಎಂದಿದ್ದರು. ಅದಕ್ಕೆ ಪೂರಕವಾಗಿ ಇಸ್ರೊ ಈ ಯೋಜನೆಯನ್ನು ಸಿದ್ಧಪಡಿಸಿತು. ಅದಕ್ಕೆ ಹೆಸರಿಟ್ಟಿದ್ದು ಆಜಾದಿ ಸ್ಯಾಟ್‌. – ವಿಶ್ವಸಂಸ್ಥೆಯ ಈ ವರ್ಷದ ಥೀಮ್‌ ಕೂಡ ʼಬಾಹ್ಯಾಕಾಶದಲ್ಲಿ ಮಹಿಳೆಯರುʼ. ಇದಕ್ಕೆ ಭಾರತ ಅಪೂರ್ವವಾಗಿ ಸ್ಪಂದಿಸಿದಂತಾಗಿದೆ.

ಇದೇ ವೇಳೆ, ಇಸ್ರೋ ಈ ರೀತಿ ಸಣ್ಣದೊಂದು ರಾಕೆಟ್‌ನ ಮೂಲಕ ಉಪಗ್ರಹಗಳನ್ನು ಹಾರಿಸುತ್ತಿರುವುದು ಇದೇ ಮೊದಲು. ಪಿಎಸ್‌ಎಲ್‌ವಿ ಮೂಲಕ ದೊಡ್ಡ ಉಪಗ್ರಹಗಳನ್ನು ಹಾರಿಸುತ್ತಿದ್ದರೆ ಕಡಿಮೆ ವೆಚ್ಚ್ದದಲ್ಲಿ ಪುಟ್ಟ ಉಪಗ್ರಹಗಳನ್ನು ಹಾರಿಸಬಲ್ಲ ಎಸ್‌ಎಸ್‌ಎಲ್‌ವಿ ಒಂದು ದೊಡ್ಡ ವಾಣಿಜ್ಯಾತ್ಮಕ ಹೆಜ್ಜೆಯೂ ಹೌದು.

ಅಂದ ಹಾಗೆ, ಇಂದು ಹಾರಿಸಿದ ಉಪಗ್ರಹದಿಂದ ಬರುವ ಮೊದಲ ಸಂದೇಶಗಳನ್ನು ದಾಖಲಿಸಲು ಕಾದು ಕುಳಿತಿದ್ದುದು ಕೂಡಾ ಪುಟ್ಟ ಪುಟ್ಟ ಹುಡುಗಿಯರದೇ ತಂಡ. ಈ ಕೆಲಸವನ್ನು ಸ್ಪೇಸ್‌ ಕಿಡ್ಸ್‌ ಇಂಡಿಯಾದ ʻವಿದ್ಯಾರ್ಥಿ ತಂಡಗಳು ನಿಭಾಯಿಸಿದೆ.

ಇದನ್ನೂ ಓದಿ| AzaadiSAT| ಪುಟ್ಟ ಹೆಣ್ಮಕ್ಕಳು ತಯಾರಿಸಿದ, ಪುಟ್ಟ ಪೇಲೋಡ್‌ಗಳ ಹೊತ್ತುಹಾರಲು ರೆಡಿಯಾಗಿದೆ ಪುಟ್ಟ ರಾಕೆಟ್‌

Exit mobile version