Site icon Vistara News

Azaan controversy | ಶಾಲಾ ಕ್ರೀಡಾಕೂಟ ನೃತ್ಯದಲ್ಲಿ ಹಿಂದು ಮಕ್ಕಳಿಂದ ಆಜಾನ್‌; ವ್ಯಾಪಕ ಆಕ್ರೋಶ, ಪ್ರತಿಭಟನೆ

udupi kundapura protest

ಉಡುಪಿ: ಶಾಲಾ ಕ್ರೀಡಾಕೂಟದ ಸ್ವಾಗತ ನೃತ್ಯದಲ್ಲಿ ಹಿಂದು ಮಕ್ಕಳಿಂದ ಆಜಾನ್‌ (Azaan controversy) ಮಾಡಿಸಿದ ಪ್ರಕರಣವು ತೀವ್ರ ಕಾವು ಪಡೆದುಕೊಂಡಿದ್ದು, ಹಿಂದು ಪರ ಸಂಘಟನೆಯವರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಈ ಸಂಬಂಧ ಶಂಕರನಾರಾಯಣದ ಮದರ್ ಥೆರೇಸಾ ಮೆಮೋರಿಯಲ್ ಶಾಲೆಯಲ್ಲಿ ಕ್ರೀಡಾಕೂಟ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮೊದಲು ನಡೆದಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಸ್ವಾಗತ ನೃತ್ಯವನ್ನು ಮಕ್ಕಳಿಂದ ಮಾಡಿಸಲಾಗಿದೆ. ಅದ್ಧೂರಿ ವೇದಿಕೆ ಹಾಕಿ ನೃತ್ಯವನ್ನು ಮಾಡಿಸಲಾಗಿದೆ. ಆದರೆ, ಈ ನೃತ್ಯದ ವೇಳೆ ಮಕ್ಕಳಿಂದ ಹಿಂದು, ಕ್ರೈಸ್ತ, ಇಸ್ಲಾಂ ಮತದ ಹಾಡುಗಳಿಗೆ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿದ್ದಾರೆ. ಹಿಂದು ವಿದ್ಯಾರ್ಥಿಗಳಿಂದ ಆಜಾನ್‌ (ಅಲ್ಲಾಹು ಅಕ್ಬರ್) ಮಾಡಿಸಲಾಗಿತ್ತು ಎಂಬುದು ಈಗ ಎಲ್ಲರ ಆಕ್ರೋಶಕ್ಕೆ ತುತ್ತಾಗಿದೆ.

ಹಿಂದು ಜಾಗರಣಾ ವೇದಿಕೆ ಪ್ರತಿಭಟನೆ
ಆಜಾನ್‌ಗೆ ವಿದ್ಯಾರ್ಥಿನಿಯರು ನೃತ್ಯ ಮಾಡಿದ ದೃಶ್ಯದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದೆ. ಕೆಲವೇ ಸಮಯದಲ್ಲಿ ಇದು ವೈರಲ್‌ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಆದರೆ, ನೃತ್ಯದ ವೇಳೆ ಆಜಾನ್‌ ಟ್ಯೂನ್‌ ಬಂದಿದ್ದು, ಆಗ ವಿದ್ಯಾರ್ಥಿನಿಯರು ಮುಸ್ಲಿಂ ಸಂಪ್ರದಾಯದ ಮಾದರಿಯಲ್ಲಿ ಭಂಗಿ, ಹಾವಭಾವನ್ನು ಮಾಡಿದ್ದಾರೆ. ಇದು ಹಿಂದು ಪರ ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿದ್ದು, ಸ್ಥಳೀಯ ಹಿಂದು ಜಾಗರಣಾ ವೇದಿಕೆಯವರು ಪ್ರತಿಭಟನೆ ಮಾಡಿ ಮತ್ತೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳುವಂತೆ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ | Azaan controversy | ಕ್ರೀಡಾಕೂಟದಲ್ಲಿ ಹಿಂದೂ ಮಕ್ಕಳಿಂದ ಆಜಾನ್‌, ಶಾಲೆಯ ಬಗ್ಗೆ ಆಕ್ರೋಶ, ಕ್ಷಮೆಯಾಚನೆ

ಬೃಹತ್‌ ಪ್ರತಿಭಟನಾ ಜಾಥಾ
ಈ ಹಿನ್ನೆಲೆಯಲ್ಲಿ ನಗರದ ವಿವಿಧ ಬೀದಿಗಳಲ್ಲಿ ಜಾಥಾ ನಡೆಸಿದ ಹಿಂದು ಕಾರ್ಯಕರ್ತರು, ಶಾಲೆಯ ಕ್ರಮದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.

ರಾಷ್ಟ್ರಗೀತೆಯನ್ನೇ ಹಾಕಬಹುದಿತ್ತು
ನಿಮಗೆ ಸರ್ವಧರ್ಮಕ್ಕೆ ಸಮಾನತೆ ಕೊಡಬೇಕು ಎಂದಿದ್ದರೆ ರಾಷ್ಟ್ರಗೀತೆಯನ್ನು ಮಾತ್ರವೇ ಹಾಕಬಹುದಿತ್ತಲ್ಲವೇ ಎಂದು ಹಿಂದು ಸಂಘಟನೆಯವರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಲಾ ಶಿಕ್ಷಕಿ, “ನಾವು ರಾಷ್ಟ್ರಗೀತೆಯನ್ನೂ ಹಾಕಿದ್ದೇವೆ. ನಿಮ್ಮ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆಯಾಚಿಸುತ್ತೇವೆ” ಎಂದು ಹೇಳಿದರು.

ಕ್ಷಮೆಯಾಚನೆ
ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಕ್ಷಮೆ ಯಾಚಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯವರು ಪ್ರತಿಕ್ರಿಯೆ ನೀಡಿ, “ಕ್ರೀಡಾಕೂಟದ ಸ್ವಾಗತದ ವೇಳೆಯಲ್ಲಿ ಸರ್ವಧರ್ಮಗಳನ್ನೂ ಗೌರವಿಸುವ ಗೀತೆಯನ್ನು ಹಾಡಿ ನೃತ್ಯ ಮಾಡಲಾಗಿದೆ. ಯಾವುದೇ ಮತಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿಲ್ಲ ಅಥವಾ ಯಾರನ್ನೂ ಕಡೆಗಣಿಸಿಲ್ಲʼʼ ಎಂದು ತಿಳಿಸಿದೆ.

ಇದನ್ನೂ ಓದಿ | Weather Report | ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ; ರಾಜ್ಯಾದ್ಯಂತ ಭಾರಿ ಮಳೆ ಎಚ್ಚರಿಕೆ

Exit mobile version