ಉಡುಪಿ: ಹಿಂದು ಮಕ್ಕಳಿಂದ ಆಜಾನ್‌ಗೆ (Azaan controversy) ನೃತ್ಯ ಮಾಡಿಸುವ ಶಂಕರನಾರಾಯಣದ ಮದರ್ ಥೆರೇಸಾ ಶಾಲೆಯವರು ತಾಕತ್ತಿದ್ದರೆ ಮುಸ್ಲಿಂ ಮಕ್ಕಳಿಂದ ಭಜನೆ ಹಾಡಿಸಲಿ ಎಂದು ಸಾಮಾಜಿಕ ಹೋರಾಟಗಾರ ಆದರ್ಶ್ ಕೇಲಾ ಸವಾಲು ಹಾಕಿದ್ದಾರೆ.
ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟ ಸಂಬಂಧ ಶಂಕರನಾರಾಯಣದ ಮದರ್ ಥೆರೇಸಾ ಶಾಲೆಯವರು ಸ್ವಾಗತ ನೃತ್ಯದಲ್ಲಿ ಹಿಂದು ಮಕ್ಕಳಿಂದ ಮಾಡಿಸಿದ ನೃತ್ಯದಲ್ಲಿ ಆಜಾನ್ ಮಾಡಿಸಲಾಗಿದೆ ಎಂಬ ಕಾರಣಕ್ಕೆ ಶಂಕರನಾರಾಯಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ಹಿಂದು ಪರ, ದೇಶದ ಪರ ಘೋಷಣೆಗಳನ್ನು ಕೂಗಲಾಯಿತು.
ಈ ವೇಳೆ ಮಾತನಾಡಿದ ಆದರ್ಶ್ ಕೇಲಾ, ಯಾವ ನೆಲದಲ್ಲಿ ದೈವ, ದೇವರುಗಳ ಆರಾಧನೆ ಇತ್ತೋ, ಯಾವ ನೆಲದಲ್ಲಿ ಆಜಾದ್ ಮೊಳಗುವುದೇ ಇಲ್ಲವೋ ಅಂಥ ಜಾಗದಲ್ಲಿ ಈ ಶಾಲೆಯವರು ಹಿಂದು ವಿದ್ಯಾರ್ಥಿಗಳಿಂದ ಆಜಾನ್‌ಗೆ ನೃತ್ಯ ಮಾಡಿಸಿದ್ದಾರೆ. ಆದರೆ, ಇದೇ ಶಾಲೆಯವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಂದ ಭಜನೆ ಮಾಡಿಸಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ | Azaan controversy | ಶಾಲಾ ಕ್ರೀಡಾಕೂಟ ನೃತ್ಯದಲ್ಲಿ ಹಿಂದು ಮಕ್ಕಳಿಂದ ಆಜಾನ್; ವ್ಯಾಪಕ ಆಕ್ರೋಶ, ಪ್ರತಿಭಟನೆ
ನಾವು ಕೇಳಿದರೆ ಶಾಂತಿಪ್ರಿಯರು ಎಂದು ಹೇಳುತ್ತೀರಿ, ಅನಕ್ಷರಸ್ಥರು ಎಂದು ಹೇಳುತ್ತೀರಿ. ಆದರೆ, ಇದೇ ಅನಕ್ಷರಸ್ಥರು, ಇದೇ ಶಾಂತಿ ಪ್ರಿಯರು, ಕೆ.ಜಿ. ಹಳ್ಳಿಯಲ್ಲಿ, ಡಿಜೆ ಹಳ್ಳಿಯಲ್ಲಿ ಬೆಂಕಿಯನ್ನು ಹಚ್ಚಿದವರಾಗಿದ್ದಾರೆ. ಅಲ್ಲದೆ, ಲವ್ ಜಿಹಾದ್ ರೂಪದಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಮರಳು ಮಾಡಿ, ಕೊಲೆ ಮಾಡಿ, ಕತ್ತರಿಸಿ, ಕತ್ತರಿಸಿ ಹಾಕಿರುವುದು ಇದೇ ಶಾಂತಿಪ್ರಿಯರೇ ಅಲ್ಲವೇ ಎಂದು ಆದರ್ಶ್ ಕೇಲಾ ಪ್ರಶ್ನಿಸಿದರು.
ಬೃಹತ್ ಪ್ರತಿಭಟನೆ
ಇದಕ್ಕೂ ಮುನ್ನ ಶಂಕರನಾರಾಯಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದು ಪರ ಕಾರ್ಯಕರ್ತರು ಶಾಲೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಆಜಾದ್ ಕೂಗಿಸಿದ ಮದರ್ ಥೆರೇಸಾ ಶಾಲೆಯ ಗಲ್ಲಿ ಗಲ್ಲಿ ತಲುಪುವಂತೆ ಕರೆ ನೀಡಿ, “ಒಂದೇ ಮಾತರಂ, ಭೋಲೋ ಭಾರತ್ ಮಾತಾಕಿ” ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ | Azaan controversy | ಕ್ರೀಡಾಕೂಟದಲ್ಲಿ ಹಿಂದೂ ಮಕ್ಕಳಿಂದ ಆಜಾನ್, ಶಾಲೆಯ ಬಗ್ಗೆ ಆಕ್ರೋಶ, ಕ್ಷಮೆಯಾಚನೆ
ಏನಾಗಿತ್ತು?
ಮಂಗಳವಾರ (ನ.೧೫) ಆಯೋಜಿಸಲಾಗಿದ್ದ ಕ್ರೀಡಾಕೂಟಕ್ಕೂ ಮುನ್ನ ನಡೆದಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಸ್ವಾಗತ ನೃತ್ಯವನ್ನು ಮಕ್ಕಳಿಂದ ಮಾಡಿಸಲಾಗಿದೆ. ಅದ್ಧೂರಿ ವೇದಿಕೆ ಹಾಕಿ ನೃತ್ಯವನ್ನು ಮಾಡಿಸಲಾಗಿದೆ. ಆದರೆ, ಈ ನೃತ್ಯದ ವೇಳೆ ಮಕ್ಕಳಿಂದ ಹಿಂದು, ಕ್ರೈಸ್ತ, ಇಸ್ಲಾಂ ಮತದ ಹಾಡುಗಳಿಗೆ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿದ್ದಾರೆ. ಹಿಂದು ವಿದ್ಯಾರ್ಥಿಗಳಿಂದ ಆಜಾನ್ (ಅಲ್ಲಾಹು ಅಕ್ಬರ್) ಮಾಡಿಸಲಾಗಿತ್ತು ಎಂಬುದು ಈಗ ಎಲ್ಲರ ಆಕ್ರೋಶಕ್ಕೆ ತುತ್ತಾಗಿದೆ.
ಹಿಂದು ಜಾಗರಣಾ ವೇದಿಕೆ ಪ್ರತಿಭಟನೆ
ಆಜಾನ್‌ಗೆ ವಿದ್ಯಾರ್ಥಿನಿಯರು ನೃತ್ಯ ಮಾಡಿದ ದೃಶ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಕೆಲವೇ ಸಮಯದಲ್ಲಿ ಇದು ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಆದರೆ, ನೃತ್ಯದ ವೇಳೆ ಆಜಾನ್ ಟ್ಯೂನ್ ಬಂದಿದ್ದು, ಆಗ ವಿದ್ಯಾರ್ಥಿನಿಯರು ಮುಸ್ಲಿಂ ಸಂಪ್ರದಾಯದ ಮಾದರಿಯಲ್ಲಿ ಭಂಗಿ, ಹಾವಭಾವನ್ನು ಮಾಡಿದ್ದಾರೆ. ಇದು ಹಿಂದು ಪರ ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿದ್ದು, ಸ್ಥಳೀಯ ಹಿಂದು ಜಾಗರಣಾ ವೇದಿಕೆಯವರು ಪ್ರತಿಭಟನೆ ಮಾಡಿ ಮತ್ತೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳುವಂತೆ ತಾಕೀತು ಮಾಡಿದ್ದಾರೆ.
ರಾಷ್ಟ್ರಗೀತೆಯನ್ನೇ ಹಾಕಬಹುದಿತ್ತು
ಮಂಗಳವಾರವೇ ಈ ಬಗ್ಗೆ ಹಲವು ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಶಾಲೆ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. “ನಿಮಗೆ ಸರ್ವಧರ್ಮಕ್ಕೆ ಸಮಾನತೆ ಕೊಡಬೇಕು ಎಂದಿದ್ದರೆ ರಾಷ್ಟ್ರಗೀತೆಯನ್ನು ಮಾತ್ರವೇ ಹಾಕಬಹುದಿತ್ತಲ್ಲವೇ” ಎಂದು ಹಿಂದು ಸಂಘಟನೆಯವರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಲಾ ಶಿಕ್ಷಕಿ, “ನಾವು ರಾಷ್ಟ್ರಗೀತೆಯನ್ನೂ ಹಾಕಿದ್ದೇವೆ. ನಿಮ್ಮ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆಯಾಚಿಸುತ್ತೇವೆ” ಎಂದು ಹೇಳಿದರು.
ಕ್ಷಮೆಯಾಚನೆ
ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಕ್ಷಮೆ ಯಾಚಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯವರು ಪ್ರತಿಕ್ರಿಯೆ ನೀಡಿ, “ಕ್ರೀಡಾಕೂಟದ ಸ್ವಾಗತದ ವೇಳೆಯಲ್ಲಿ ಸರ್ವಧರ್ಮಗಳನ್ನೂ ಗೌರವಿಸುವ ಗೀತೆಯನ್ನು ಹಾಡಿ ನೃತ್ಯ ಮಾಡಲಾಗಿದೆ. ಯಾವುದೇ ಮತಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿಲ್ಲ ಅಥವಾ ಯಾರನ್ನೂ ಕಡೆಗಣಿಸಿಲ್ಲʼʼ ಎಂದು ತಿಳಿಸಿದೆ.
ಇದನ್ನೂ ಓದಿ | ಕ್ರೈಸ್ತ ಧರ್ಮಕ್ಕೆ ಸೇರಲು ಗಂಡನಿಗೆ ಪತ್ನಿ ಒತ್ತಾಯ; ಹುಬ್ಬಳ್ಳಿಯಲ್ಲಿ ಮತಾಂತರ ಜಾಲದ ವಿರುದ್ಧ ಹಿಂದುಗಳ ಆಕ್ರೋಶ