ಮೌನೇಶ್ ಎಸ್. ಬಡಿಗೇರ್, ಕೊಪ್ಪಳ
ಬ್ರಿಟಿಷರ ದಾಸ್ಯದಿಂದ ಭಾರತ ಮಾತೆಯನ್ನು ಬಿಡುಗಡೆಗೊಳಿಸಲು ದೇಶದ ಅಸಂಖ್ಯಾತ ದೇಶಭಕ್ತರ ತ್ಯಾಗ ಬಲಿದಾನವಿದೆ. ದೇಶಕ್ಕಾಗಿ ಮಡಿದವರ ಹೋರಾಟದ ಸ್ಪೂರ್ತಿ ಈ ನೆಲದಲ್ಲಿದೆ. ಅವರ ಕೆಚ್ಚೆದೆಯ ಹೋರಾಟ, ತ್ಯಾಗದಿಂದ ಇಂದಿಗೂ ಜನಮಾನಸದಲ್ಲಿ (Azadi Ka Amrit Mahotsav) ಉಳಿದುಕೊಂಡಿದ್ದಾರೆ. ಅಂಥವರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಶಸ್ತ್ರ ಬಂಡಾಯಕ್ಕೆ 1858ರಲ್ಲಿ ನಾಂದಿ ಹಾಡಿದ್ದು, ಮುಂಡರಗಿ ಭೀಮರಾಯ ಎಂಬ ದೇಶಪ್ರೇಮಿ.
ಮುಂಡರಗಿ ಭೀಮರಾಯರ ಹೋರಾಟ ಮತ್ತು ಬಲಿದಾನ ಈ ಭಾಗದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾಯಿತು. ಕೊಪ್ಪಳ ಕೋಟೆಯಲ್ಲಿ ನಡೆದ ಮೂರು ದಿನದ ಸಶಸ್ತ್ರ ಬಂಡಾಯದ ಮುಂಡರಗಿ ಭೀಮರಾಯರ ಹೋರಾಟ ಮೈನವಿರೇಳಿಸುವಂತಹದ್ದು. ಇದು ಅನೇಕರಿಗೆ ಸ್ಫೂರ್ತಿಯಾಗಿದೆ.
ಬ್ರಿಟಿಷರ ಸಂಕೋಲೆಗಳಿಂದ ಭಾರತವನ್ನು ಸ್ವತಂತ್ರ್ಯಗೊಳಿಸಲು ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ಕೊಪ್ಪಳ ಜಿಲ್ಲೆಯ ಕೊಡುಗೆಯೂ ಇದೆ. ಸ್ವಾತಂತ್ರ್ಯ ಹೋರಾಟಕ್ಕೆ ದೇಶದಲ್ಲಿ ಮೊದಲು ನಡೆದ ಸಶಸ್ತ್ರ ಬಂಡಾಯವೆನ್ನಲಾದ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯ ಕಿಚ್ಚು ನಂತರದ ವರ್ಷದಲ್ಲಿ ಕೊಪ್ಪಳ ಭಾಗದಲ್ಲಿ ಹೊತ್ತಿಸಿದ ಕೀರ್ತಿ ಮುಂಡರಗಿ ಭೀಮರಾಯರಿಗೆ ಸಲ್ಲುತ್ತದೆ.
ಇದನ್ನೂ ಓದಿ | Har Ghar Tiranga | ರಾಷ್ಟ್ರಧ್ವಜಗಳನ್ನು ಮಕ್ಕಳಿಗೆ ಹಂಚಿ, ಸಂಭ್ರಮಿಸಿದ ಪ್ರಧಾನಿ ಮೋದಿ ತಾಯಿ
ತಹಸೀಲ್ದಾರ್ ಹುದ್ದೆಯಿಂದ ವಜಾ
ಮುಂಡರಗಿ ಭೀಮರಾಯರು ಪಕ್ಕದ ಗದಗ ಜಿಲ್ಲೆಯವರಾಗಿದ್ದರೂ, ಸಶಸ್ತ್ರ ಬಂಡಾಯದ ಹೋರಾಟದಲ್ಲಿ ಕೊಪ್ಪಳ ಭಾಗದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ್ದರು. ಅದರಲ್ಲೂ ಕೊಪ್ಪಳ ಕೋಟೆಯಲ್ಲಿ ವೀರತ್ವದೊಂದಿಗೆ ಹೋರಾಡಿ ಅಮರರಾಗಿದ್ದಾರೆ. ಆಗಿನ ಬ್ರಿಟಿಷ್ ಸರ್ಕಾರದಲ್ಲಿ ಬಳ್ಳಾರಿ ಮತ್ತು ಹರಪನಹಳ್ಳಿ ತಹಸೀಲ್ದಾರರಾಗಿ ಕೆಲಸ ಮಾಡುತ್ತಿದ್ದ ಭೀಮರಾಯ ಅವರು ಮೇಲಧಿಕಾರಿಗಳ ವಿರುದ್ಧ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಅವರನ್ನು ತಹಸೀಲ್ದಾರರ ಹುದ್ದೆಯಿಂದ ಬ್ರಿಟಿಷ್‌ರು ವಜಾಗೊಳಿಸಿದ್ದಕ್ಕೆ ಕುಪಿತಗೊಂಡ ಮುಂಡರಗಿ ಭೀಮರಾಯರು ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.
ಹೊತ್ತಿದ ಸ್ವಾತಂತ್ರ್ಯದ ಕಿಚ್ಚು
ನರಗುಂದದ ಬಾಬಾಸಾಹೇಬರು, ಹಮ್ಮಿಗಿ ಕೆಂಚನಗೌಡ ದೇಸಾಯಿ ಹಾಗೂ ವೀರಪ್ಪ ದೇಸಾಯಿ ಅವರ ನಿಕಟ ಸಂಪರ್ಕ ಹೊಂದಿದ್ದ ಭೀಮರಾಯರು ಇವರೊಂದಿಗೆ ಸೇರಿಕೊಂಡು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಜ್ಜಾದರು. ಅವರ ಸಶಸ್ತ್ರ ಬಂಡಾಯದ ಹೋರಾಟಕ್ಕೆ ಕೊಪ್ಪಳದ ಕೋಟೆಯನ್ನು ಬಳಸಿಕೊಂಡು ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದರು.
ಹಮ್ಮಿಗಿ ಕೆಂಚನಗೌಡ ಅವರ ಜತೆಗೂಡಿ ಭೂತನಹಳ್ಳಿ ಭರಮಪ್ಪ ನಾಯಕ ಎಂಬುವವರ ಸಹಾಯದಿಂದ ನಾಲ್ಕು ನೂರು ಜನರನ್ನು ಒಗ್ಗೂಡಿಸಿಕೊಂಡು 1858ರ ಮೇ 30ರಂದು ನಿಜಾಮನ ವಶದಲ್ಲಿದ್ದ ಕೊಪ್ಪಳದ ಬಲಾಢ್ಯ ಕೋಟೆಯನ್ನು ವಶಪಡಿಸಿಕೊಂಡಿರು. ಬ್ರಿಟಿಷರ ವಿರುದ್ಧದ ಸಶಸ್ತ್ರ ಬಂಡಾಯಕ್ಕೆ ಬೇಕಾಗಿದ್ದ ಮದ್ದು ಗುಂಡುಗಳನ್ನು, ಆಹಾರ ಸಾಮಗ್ರಿಗಳನ್ನು ಈ ಕೋಟೆಯಲ್ಲಿ ಸಂಗ್ರಹಿಸಿಕೊಂಡು ಆಶ್ರಯ ಪಡೆದುಕೊಂಡರು.
೫೦೦ ರೂಪಾಯಿ ಆಸೆಗೆ ಮೋಸ ಮಾಡಿದರು
ಮೇಜರ್ ಹ್ಯೂಸ್ ಎಂಬ ಬ್ರಿಟಿಷ್ ಅಧಿಕಾರಿ ನೇತೃತ್ವದಲ್ಲಿ ಕೊಪ್ಪಳ ಕೋಟೆಯ ಮುಂದೆ ಬಂದ ಬ್ರಿಟಿಷ್ ಸೈನ್ಯ ಭೀಮರಾಯ ಕೋಟೆಯನ್ನು ಬೇಧಿಸಲಾಗಲಿಲ್ಲ. ಮೂರು ದಿನಗಳ ಕಾಲವಾದರೂ ಕೋಟೆಯನ್ನು ಭೇದಿಸಿ ಒಳಹೋಗಲು ಆಗಲಿಲ್ಲ. ಆಗ ಹಮ್ಮಿಗಿ ಕೆಂಚನಗೌಡ ಹಾಗೂ ಭೀಮರಾಯರನ್ನು ಹಿಡಿದು ಕೊಟ್ಟವರಿಗೆ ಬ್ರಿಟಿಷರು 500 ರೂಪಾಯಿ ಆಮಿಷವೊಡ್ಡಿದರು. ಆಮಿಷಕ್ಕೆ ಒಳಗಾದ ಕೆಲವರು ಬ್ರಿಟಿಷರು ಕೋಟೆಯೊಳಗೆ ನುಗ್ಗಲು ಅನುವು ಮಾಡಿಕೊಟ್ಟರು.
ಶರಣಾಗತಿಗೆ ಒಪ್ಪದೇ ತಾವೇ ಗುಂಡು ಹಾರಿಸಿಕೊಂಡ ಮುಂಡರಗಿ
ಕೋಟೆಯೊಳಗೆ ಬ್ರಿಟಿಷರೊಂದಿಗೆ ಭೀಕರ ಕಾಳಗ ನಡೆದು, ಕೊನೆಗೆ ಬ್ರಿಟಿಷರಿಗೆ ಶರಣಾಗದೆ ಹಮ್ಮಿಗಿ ಕೆಂಚನಗೌಡರಿಗೆ ಗುಂಡು ಹೊಡೆದು, ತಾವೂ ಗುಂಡು ಹಾರಿಸಿಕೊಂಡು ಮುಂಡರಗಿ ಭೀಮರಾಯರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಂಡರು ಎನ್ನುತ್ತದೆ ಇತಿಹಾಸ. ಭೀಮರಾಯರೊಂದಿಗೆ ದೇಶಕ್ಕಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದ ದೇಶಪ್ರೇಮಿ ಸೈನಿಕರನ್ನು ಬ್ರಿಟಿಷರು ಸೆರೆಹಿಡಿದರು. ಹೀಗೆ ಸೆರೆ ಹಿಡಿದ 27 ಜನರಿಗೆ ಮರಣದಂಡನೆ ಶಿಕ್ಷೆ ನೀಡಲಾಯಿತು. ಈ ಪೈಕಿ ಕೆಲವರನ್ನು ಗವಿಮಠದ ಆವರಣದಲ್ಲಿ ಹಾಗೂ ಇನ್ನೂ ಕೆಲವರನ್ನು ರಾಯಚೂರಿನಲ್ಲಿ ಗಲ್ಲಿಗೇರಿಸಲಾಯಿತು. ಈ ಹೋರಾಟದಲ್ಲಿ ಸೆರೆ ಸಿಕ್ಕ 139 ಜನರಿಗೆ ಶಿಕ್ಷೆಯಾಯಿತು ಎಂದು ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ವಿವರಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ಕೋಟೆಯ ಆಶ್ರಯ
ಮುಂಡರಗಿ ಭೀಮರಾಯರ ಹೋರಾಟಕ್ಕೆ ಆಶ್ರಯವಾಗಿದ್ದ ಕೊಪ್ಪಳ ಕೋಟೆಯು ಉಳಿದ ಸ್ವಾತಂತ್ರ್ಯ ಹೋರಾಟಗಾರರಿಗೂ ಆಶ್ರಯವಾಯಿತು. ಭೀಮರಾಯರ ಪ್ರಾಣಾರ್ಪಣೆ ಬಳಿಕ ಈ ಭಾಗದಲ್ಲಿ ಸಶಸ್ತ್ರ ಬಂಡಾಯದ ಹೋರಾಟಕ್ಕೆ ನಾಂದಿಯಾಯಿತು. ದೇಶವು ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ಬಳಿಕವೂ ಹೈದ್ರಾಬಾದ್ ನಿಜಾಮನ ಕಪಿಮುಷ್ಟಿಯಲ್ಲಿದ್ದ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿಯೂ ಸ್ವಾತಂತ್ರ್ಯ ಹೋರಾಟ ನಡೆಯಿತು. ವಿಮೋಚನಾ ಹೋರಾಟಗಾರರಿಗೆ ಭೀಮರಾಯರ ಹೋರಾಟ ಸ್ಫೂರ್ತಿಯಾಯಿತು ಎನ್ನುತ್ತಾರೆ ಸಾಹಿತಿ ಮಹೇಶ ಬಳ್ಳಾರಿ.
ಸ್ವಾಭಿಮಾನದ ಪ್ರತೀಕದಂತಿದ್ದ ಮುಂಡರಗಿ ಭೀಮರಾಯರ ಆ ವೀರೋಚಿತ ಹೋರಾಟದ ಕುರುಹಾಗಿ ಕೊಪ್ಪಳದ ಹೃದಯ ಭಾಗದಲ್ಲಿರುವ ಅಶೋಕ ಸರ್ಕಲ್‍ನಲ್ಲಿ ಅಶೋಕ ಸ್ತಂಬ ಸ್ಥಾಪಿಸಲಾಗಿದೆ. ಇವರ ಈ ವೀರೋಚಿತ ಹೋರಾಟದ ಕುರಿತು ಮಾಹಿತಿ ಅಳವಡಿಸಲಾಗಿದೆ. ಮುಂಡರಗಿ ಭೀಮರಾಯರು ಈ ಭಾಗದ ಸುಭಾಷಚಂದ್ರ ಬೋಸ್ ಎಂದೇ ಅಭಿಮಾನದಿಂದ ಚಿರಸ್ಥಾಯಿಯಾಗಿದ್ದಾರೆ.
ಇದನ್ನೂ ಓದಿ | ಅಮೃತ ಮಹೋತ್ಸವ| ಕತ್ತಲಲ್ಲಿ ತಾಜ್‌ಮಹಲ್! ಕೇಸರಿಯೂ ಇಲ್ಲ, ಹಸಿರೂ ಇಲ್ಲ, ಕೇವಲ ಬಿಳಿ!