Site icon Vistara News

B C Mylarappa: ಅಕ್ರಮ ಭೂ ವ್ಯವಹಾರ; ಪ್ರೊ. ಮೈಲಾರಪ್ಪ ಅಮಾನತಿಗೆ ಉನ್ನತ ಶಿಕ್ಷಣ ಇಲಾಖೆ ಸೂಚನೆ

B C Mylarappa

ಬೆಂಗಳೂರು: ಅಕ್ರಮ ಭೂ ವ್ಯವಹಾರ ಆರೋಪದಲ್ಲಿ ಬಂಧನವಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್‌ ಬಿ.ಸಿ.ಮೈಲಾರಪ್ಪ (B C Mylarappa) ಅವರನ್ನು ಅಮಾನತು ಮಾಡುವಂತೆ ಬೆಂಗಳೂರು ವಿವಿ ಕುಲಸಚಿವರಿಗೆ ಉನ್ನತ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

ಹೈದರಬಾದ್‌ನ ಜ್ಯುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಕೆ. ಶಶಿಧರ್ ರೆಡ್ಡಿ ಎಂಬುವರು 2023ರ ಫೆ. 15ರಂದು ನೀಡಿದ್ದ ದೂರಿನ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು, 2024ರ ಮಾ.22ರಂದು ಮೈಲಾರಪ್ಪ ಸೇರಿ ಪ್ರಕರಣದ ಇತರ ಆರೋಪಿಗಳಾದ ಕೊರಟಗೆರೆ ಕೃಷ್ಣಪ್ರಸಾದ್, ಆರ್. ಜಗನ್ನಾಥ್, ಸುರೇಂದರ್ ರೆಡ್ಡಿ ಅವರನ್ನು ಬಂಧಿಸಿದ್ದರು.

ಮೈಲಾರಪ್ಪ ಅವರ ಬಂಧನದ ಬಗ್ಗೆ ತೆಲಂಗಾಣ ಪೊಲೀಸರು ಬೆಂಗಳೂರು ವಿವಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಂತರ ನೀತಿ ಸಂಹಿತೆ ಜಾರಿಯಾದ ಕಾರಣ ವಿವಿಯ ಸಿಂಡಿಕೇಟ್‌ ಸಭೆ ಕರೆದು ತೀರ್ಮಾನ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ಅಭಿಪ್ರಾಯ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಪತ್ರ ಬರೆದಿದ್ದು, ಮೈಲಾರಪ್ಪ ಅವರು 48 ಗಂಟೆಗೂ ಅಧಿಕ ಕಾಲ ಕಾರಾಗೃಹ ವಾಸದಲ್ಲಿದ್ದುದರಿಂದ ಬಂಧಿಸಲಾದ ದಿನಾಂಕದಿಂದ (ಮಾ.22) ಪೂರ್ವಾನ್ವಯ ಆಗುವಂತೆ ಅಮಾನತಿನಲ್ಲಿಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Prajwal Revanna Case: ನಿಮ್ಮ ಸರ್ಕಾರದ ಮೇಲೆ ಮಹಿಳೆಯರು ವಿಶ್ವಾಸ ಇಡಬಹುದೇ? ಸಿದ್ದರಾಮಯ್ಯಗೆ ಸಾಹಿತಿಗಳ ಬಹಿರಂಗ ಪತ್ರ!

ಏನಿದು ಪ್ರಕರಣ?

ಶಶಿಧರ್‌ ರೆಡ್ಡಿ ತಮ್ಮ ಒಡೆತನದ ಶ್ರಿವೆನ್‌ ಇನ್‌ಫ್ರಾ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದರು. ಅವರಿಗೆ ಯಲಹಂಕದ ಹೊಸಹಳ್ಳಿಯಲ್ಲಿ ಕೃಷ್ಣಪ್ರಸಾದ್ ಎಂಬುವವರಿಗೆ ಸೇರಿದ ಜಮೀನು ಕೊಡಿಸುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 5 ಕೋಟಿ ರೂ. ಮುಂಗಡ ಹಣವನ್ನು ಆರೋಪಿಗಳು ಪಡೆದಿದ್ದರು. ಆ ಜಮೀನು ಕೃಷ್ಣಪ್ರಸಾದ್ ಅವರಿಗೆ ಸೇರಿಲ್ಲ ಎಂದು ತಿಳಿದ ಹಿನ್ನೆಲೆಯಲ್ಲಿ ಮುಂಗಡ ಹಣ ವಾಪಸ್ ನೀಡುವಂತೆ ಶಶಿಧರ್ ರೆಡ್ಡಿ ಕೇಳಿದ್ದರು. ಆಗ ಪ್ರೊ. ಮೈಲಾರಪ್ಪ ಕರೆ ಮಾಡಿ ತನಗೆ ಸರ್ಕಾರದ ಮಟ್ಟದಲ್ಲಿ ಉತ್ತಮ ಸಂಪರ್ಕವಿದೆ, ಹಣಕ್ಕಾಗಿ ಆರೋಪಿಗಳ ಮೇಲೆ ಒತ್ತಡ ಹೇರಬೇಡಿ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆ ಬಳಿಕ ಈ ಜಮೀನನ್ನು ಸರ್ಕಾರವು ವೈಎಎಸ್ ಚಾರಿಟಬಲ್ ಟ್ರಸ್ಟ್ ಮತ್ತು ಕೊಡವ ಸಮಾಜಕ್ಕೆ ಹಂಚಿಕೆ ಮಾಡಿರುವುದು ಶಶಿಧರ್ ರೆಡ್ಡಿ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಣ ವಾಪಸ್ ನೀಡುವಂತೆ ಕೇಳಿದಾಗ ಬೆದರಿಕೆ ಮತ್ತು ನಿರ್ಲಕ್ಷ್ಯ ತೋರಿದ್ದಾರೆ ಎಂದು ಶಶಿಧರ್ ರೆಡ್ಡಿ ತಮ್ಮ ದೂರಿನಲ್ಲಿ ತಿಳಿಸಿದ್ದರು.

Exit mobile version