Site icon Vistara News

B.Ed Exam Scam: ಬಿ.ಇಡಿ ಪರೀಕ್ಷೆ ಅಕ್ರಮ; ಗುಲ್ಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್‌

B.Ed Exam Scam

ಕಲಬುರಗಿ: ಬಿ.ಇಡಿ ಪರೀಕ್ಷೆ ಅಕ್ರಮಕ್ಕೆ (B.Ed Exam Scam) ಸಂಬಂಧಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ.ಡಾ.ಮೇದಾವಿನಿ ಎಸ್.ಕಟ್ಟಿ ಸೇರಿ ಐವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ನಾಗರಾಜ್ ಎಂಬುವವರು ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರೀಕ್ಷಾ ಅಕ್ರಮಕ್ಕೆ ಅನುಕೂಲ‌ ಮಾಡಿಕೊಟ್ಟಿದ್ದಾರೆಂಬ ಆರೋಪದಲ್ಲಿ ಕುಲಸಚಿವೆ ಪ್ರೊ.ಡಾ.ಮೇದಾವಿನಿ ಎಸ್.ಕಟ್ಟಿ, ಅಲ್‌ ಬದರ್‌ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಮ್ಮ ಮಂಠಾಳೆ, ಬಿ.ಇಡಿ ವಿಷಯ ನಿರ್ವಾಹಕ ಸ್ವರೂಪ ಭಟ್ಟರ್ಕಿ, ಪರೀಕ್ಷೆ ಮೇಲ್ವಿಚಾರಕ ಮೌನೇಶ್‌ ಅಕ್ಕಿ, ಇಂದಿರಾ ಗಾಂಧಿ ಬಿ.ಇಡಿ ಕಾಲೇಜಿನ ಅಧ್ಯಕ್ಷ ಮೌಲಾ ಪಟೇಲ್‌ ವಿರುದ್ಧ ಪ್ರಕರಣ ದಾಖಲಾಗಿದೆ.

2024ರ ಜುಲೈನಲ್ಲಿ‌ ನಡೆದ ಬಿ.ಇಡಿ ಪರೀಕ್ಷೆ ವೇಳೆ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಬಿ.ಇಡಿ ಪರೀಕ್ಷೆಗೆ 100 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅವಕಾಶ ನೀಡಲಾಗಿತ್ತು. ಆದರೆ, ಪರೀಕ್ಷೆಗೆ ಅರ್ಹರು ಕೇವಲ 22 ವಿದ್ಯಾರ್ಥಿಗಳು ಮಾತ್ರ. ಬಿ.ಇಡಿ ಪ್ರಥಮ‌ ಹಾಗೂ ಮೂರನೇ ಸೆಮಿಸ್ಟರ್ ಪರೀಕ್ಷೆ ವೇಳೆ ಅಕ್ರಮ ನಡೆದಿದೆ ಎನ್ನಲಾಗಿತ್ತು. ನಕಲಿ ದಾಖಲೆಗಳು ಸೃಷ್ಟಿಸಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್ ನೀಡಿದ ಆರೋಪ ಇಂದಿರಾಗಾಂಧಿ ಬಿ.ಇಡಿ ಕಾಲೇಜು ಹಾಗೂ ಅಲ್ ಬದರ್ ಕಾಲೇಜು ವಿರುದ್ಧ ಕೇಳಿಬಂದಿತ್ತು.

ದೂರು ಕೊಟ್ಟಿದ್ದ ಕುಲಸಚಿವೆ ಮೇಲೆಯೇ ಎಫ್‌ಐಆರ್‌!

ಪರೀಕ್ಷಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಇಂದಿರಾಗಾಂಧಿ ಬಿ.ಇಡಿ ಕಾಲೇಜು ಹಾಗೂ ಅಲ್ ಬದರ್ ಕಾಲೇಜು ವಿರುದ್ಧ ಜುಲೈ 8ರಂದೇ ಮೌಲ್ಯಮಾಪನ ಕುಲಸಚಿವೆ ಪ್ರೊ.ಡಾ.ಮೇದಾವಿನಿ ಎಸ್.ಕಟ್ಟಿ ಅವರು ಇದೇ ಅಶೋಕನಗರ ಪೊಲೀಸ್ ಠಾಣೆಯಲ್ಲಿ‌ ದೂರು ನೀಡಿದ್ದರು ಎನ್ನಲಾಗಿದೆ. ಆದರೆ, ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.

ಮೊದಲಿಗೆ ವಿವಿ ಪೊಲೀಸ್ ಠಾಣೆಯಿಂದ ರಾಘವೇಂದ್ರ ಪೊಲೀಸ್ ಠಾಣೆ, ಅಲ್ಲಿಂದ ಮತ್ತೆ ಅಶೋಕನಗರ ಪೊಲೀಸ್ ಠಾಣೆಗೆ ಕುಲಸಚಿವೆ ಅಲೆದಾಡಿದ್ದಾರೆ. ಆದರೆ, ಮೊದಲು ದೂರು ದಾಖಲಿಸಿದ್ದ ಪ್ರಕರಣದ ತನಿಖೆ ಬಿಟ್ಟು, ನಂತರ ದಾಖಲಿಸಿದ್ದ ಪ್ರಕರಣದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮೌಲ್ಯಮಾಪನ ಕುಲಸಚಿವೆ ಪ್ರೊ.ಡಾ.ಮೇದಾವಿನಿ ಎಸ್.ಕಟ್ಟಿ ಆರೋಪಿಸಿದ್ದಾರೆ.

ಇದನ್ನೂ ಓದಿ | Viral News: ಗುಪ್ತಾಂಗ ಭಾಗದಲ್ಲಿ ಪತ್ತೆಯಾಯ್ತು ಮೊಬೈಲ್‌; ಪರೀಕ್ಷೆಯಲ್ಲಿ ಕಾಪಿ ಹೊಡಿಯೋಕೆ ಅಭ್ಯರ್ಥಿಗಳ ಹೊಸ ಟೆಕ್ನಿಕ್‌!

ಬೇಗ ಎಫ್‌ಐಆರ್‌ ಮಾಡಲು ಅಗೋದಿಲ್ಲಾ ಎಂದಿದ್ದ ಪೊಲೀಸರು, ಈಗ ಏಕಾ ಏಕಿ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದೇಕೆ? ಎಂದು ಕಲಬುರಗಿ ಸೌತ್ ಎಸಿಪಿ ಭೋತೆಗೌಡ ಅವರ ಮೇಲೆ ಕುಲಸಚಿವೆ ಅನುಮಾನ ವ್ಯಕ್ತಪಡಿಸಿದ್ದಾರೆ.

Exit mobile version