ಶಿರಸಿ: ಬ್ರಾಹ್ಮಣರು ಸೇರಿದಂತೆ ಯಾರೂ ಬೇಕಾದರೂ ನಮ್ಮ ಸಂವಿಧಾನದ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಆಗಬಹುದು. ಜನ ಯಾರಿಗೆ ಆಶೀರ್ವಾದ ಮಾಡುತ್ತಾರೋ ಅವರು ಮುಖ್ಯಮಂತ್ರಿ ಆಗುತ್ತಾರೆ. ಆದರೆ, ಗೋಡ್ಸೆ ಸಂತತಿಯನ್ನು ಸೋಲಿಸಬೇಕಿದೆ. ಅವರೇನು ರಾಮನನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಮಹಾತ್ಮ ಗಾಂಧಿಯವರ ರಾಮ ರಾಜ್ಯಕ್ಕೂ, ಬಿಜೆಪಿಯವರ ರಾಮ ರಾಜ್ಯಕ್ಕೂ ವ್ಯತ್ಯಾಸವಿದೆ. ಇವರ ರಾಮ ರಾಜ್ಯವೆಂದರೆ ಭಯೋತ್ಪಾದಕರ ರಾಜ್ಯ ಎಂದು (Karnataka Election) ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಅವರು ಇಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿ, ಮಾತೆತ್ತಿದರೆ ಬಿಜೆಪಿಯವರು ಅಂಬೇಡ್ಕರ್ ಎಂದು ಹೇಳುತ್ತಾರೆ. ಆದರೆ, ಮಾಡುವ ಕೆಲಸವೆಲ್ಲವೂ ಸಾವರ್ಕರ್‌ದ್ದಾಗಿದೆ. ಆದ್ದರಿಂದ ಅಂಬೇಡ್ಕರ್ ವರ್ಸಸ್ ಸಾವರ್ಕರ್ ಸ್ಪರ್ಧೆ ಏರ್ಪಟ್ಟಿದೆ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಆತ ಇವರ ತರ ರಣಹೇಡಿಯಲ್ಲ. ಬ್ರಿಟಿಷರ ಗುಲಾಮಗಿರಿ ಮಾಡುವಂಥದ್ದು ಇವರ ಪೂರ್ವಜರ ಸಂತತಿಯಾಗಿದೆ. ಆದರೆ, ಟಿಪ್ಪು ಸುಲ್ತಾನ್‌ದು ಆ ಜಾಯಮಾನವಲ್ಲ ಎಂದು ಹರಿಪ್ರಸಾದ್ ಹೇಳಿದರು.
ಇದನ್ನೂ ಓದಿ: Elephant Menace : ಸೊಸೈಟಿ ಬಾಗಿಲು ಒಡೆದು ನಾಲ್ಕು ಕ್ವಿಂಟಾಲ್ ಅಕ್ಕಿ ತಿಂದು ಹೋದ ಆನೆ!
ಬಿಜೆಪಿಯ ದಬ್ಬಾಳಿಕೆ, ದೌರ್ಜನ್ಯವನ್ನು ಹೋಗಲಾಡಿಸುವ ಸಂಬಂಧ ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಲೆ ಏರಿಕೆಯಿಂದ ಜನತೆ ಕಂಗೆಟ್ಟಿದ್ದಾರೆ. ಜನರ ನಿರೀಕ್ಷೆಯನ್ನು ಅರ್ಥ ಮಾಡಿಕೊಂಡು ಮುಂದೆ ಏನು ಮಾಡಬೇಕು ಎಂಬುದನ್ನು ಬಳಿಕ ನಿರ್ಧಾರ ಮಾಡಲಾಗುವುದು. ಈ ಸರ್ಕಾರದ ಎಲ್ಲ ಟೆಂಡರ್‌ನಲ್ಲೂ ಶೇಕಡಾ 40 ಕಮಿಷನ್ ಜಗಜ್ಜಾಹೀರಾಗಿದೆ. ಈಗಾಗಕೇ ಮೋದಿಯವರಿಗೆ ಇದರ ಬಗ್ಗೆ ಪತ್ರ ಬರೆದರೂ ಕ್ರಮ ಕೈಗೊಳ್ಳುತ್ತಿಲ್ಲ. ಜನರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಹರಿಪ್ರಸಾದ್ ಹೇಳಿದರು.
ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಅವರು ಬಾದಾಮಿಯಲ್ಲಿ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕೋಲಾರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಅದಕ್ಕೆ ಹೈಕಮಾಂಡ್ ಒಪ್ಪಿಗೆ ಬೇಕು ಅಂತ ಕೇಳಿದ್ದಾರೆ. ಮತ್ತೆ ಇದರಲ್ಲಿ ಯಾವುದೇ ರೀತಿಯ ಗೊಂದಲದ ವಿಚಾರ ಇಲ್ಲ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು.
ದೇಶದಲ್ಲಿ ಮೊಟ್ಟಮೊದಲ ಭಯೋತ್ಪಾದಕನನ್ನು ಹುಟ್ಟುಹಾಕಿದ್ದೇ ಬಿಜೆಪಿ ಪಕ್ಷವಾಗಿದೆ. ಹೀಗಾಗಿ ಆರ್‌ಎಸ್‌ಎಸ್ ಹಾಗೂ ಹಿಂದು ಮಹಾಸಭಾದ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ. ಬ್ರಿಟಿಷರ ಏಜೆಂಟರು ನಮ್ಮನ್ನು ಭಯೋತ್ಪಾದಕರು ಎಂದು ಕರೆಯಬೇಕಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಈಗ ಭೇಟಿ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಳೆ ಹಾನಿ ಆದಾಗಲೂ ಬರಲಿಲ್ಲ. ಸಾಮಾನ್ಯವಾಗಿ ವೈಮಾನಿಕ ಸಮೀಕ್ಷೆಗಾದರೂ ಪ್ರಧಾನಿಯಾದವರು ಬರುತ್ತಾರೆ. ಆದರೆ, ಅದೂ ಗೊತ್ತಿಲ್ಲದೇ ಇರುವ ಸಾಮಾನ್ಯ ಕಾಳಜಿ ಇಲ್ಲದ ಪ್ರಧಾನಿ ಇವರಾಗಿದ್ದಾರೆ. ಇವರಿಗೆ ಚುನಾವಣೆ ಎದುರಿಸಲಿಕ್ಕೆ ಆಗದ ಕಡೆ ಕೋಮುಗಲಭೆ ಎಬ್ಬಿಸಿ, ಭಾವನಾತ್ಮಕ ಮಾತನ್ನು ಆಡುತ್ತಾರೆ. ಪರೇಶ್ ಮೆಸ್ತಾ ಕೇಸ್ ನಂತರ ಇವರು ಹೆಣದ ಮೇಲೆ ರಾಜಕೀಯ ಮಾಡಿದ್ದಾರೆ ಎಂದು ಜನಗಳಿಗೆ ಗೊತ್ತಾಗಿದೆ. ಆದ್ದರಿಂದ ಈ ಸಲ ಸರಿಯಾಗಿ ಬುದ್ಧಿ ಕಲಿಸುತ್ತಾರೆ ಎಂದು ಹರಿಪ್ರಸಾದ್ ಹೇಳಿದರು.