ರಾಮನಗರ: ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ (Karnataka Election) ಬಲಿಷ್ಠ ಅಭ್ಯರ್ಥಿಗಳನ್ನು ಜೆಡಿಎಸ್‌ನವರು ಹುಡುಕುತ್ತಾರೆ. ಪದ್ಮನಾಭನಗರದಲ್ಲಿ ನಾಲ್ಕು ರ‍್ಯಾಲಿ ಮಾಡುತ್ತಾರೆ. ಆದರೆ ಕನಕಪುರ ಕ್ಷೇತ್ರದಲ್ಲಿ ಮಾತ್ರ ಇವರಿಗೆ ಬಲಿಷ್ಠ ಅಭ್ಯರ್ಥಿಗಳು ಸಿಗಲ್ಲ. ಹಾಗೆಯೇ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನವರಿಗೂ ಬಲಿಷ್ಠ ಅಭ್ಯರ್ಥಿ ಇರಲ್ಲ ಎಂದು ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡುವಿನ ಹೊಂದಾಣಿಕೆ ರಾಜಕೀಯದ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಿಡಿಕಾರಿದ್ದಾರೆ.
ಕನಕಪುರ ಕ್ಷೇತ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಆ ಮಗ, ಈ ಮಗ ಅಂತ ಟೈಟಲ್ ಹಾಕಿಕೊಂಡು ಚುನಾವಣೆ ಮುಗಿಸಿಬಿಡುತ್ತಿದ್ದರು. ಪಂಚರತ್ನ ಎಂದು ರಾಜ್ಯಾದ್ಯಂತ ಓಡಾಡುವ ವಾಹನ ಕನಕಪುರದಲ್ಲಿ ಯಾವ ರೀತಿ ಪಂಚರ್ ಆಗುತ್ತೆ? ನಾವುಗಳು ದಡ್ಡರು, ಯಾವ ಕಾರಣಕ್ಕೆ ಪಂಚರ್ ಆಯಿತು ಅಂತ ಕಾರಣ ಹೇಳಲಿ ಎಂದು ಎಚ್.ಡಿ. ಕುಮಾರಸ್ವಾಮಿಗೆ ಒತ್ತಾಯಿಸಿದರು.
ಇದನ್ನೂ ಓದಿ | Karnataka Election 2023: ಪ್ರಭು ರಾಮ ಆಯ್ತು, ಈಗ ಹನುಮನನ್ನು ಬಂಧಿಸಿಡಲು ಹೊರಟಿದೆ ಕಾಂಗ್ರೆಸ್: ಪಿಎಂ ಮೋದಿ
ಜೋಡೆತ್ತುಗಳನ್ನು ಅಂತ್ಯ ಮಾಡಲು ಬಿಜೆಪಿ ಮುಂದಾಗಿದೆ
ಡಿಕೆಶಿ, ಎಚ್‌ಡಿಕೆ ಜೋಡೆತ್ತು ಅಂತ ತಮ್ಮನ್ನ ತಾವು ಕರೆದುಕೊಂಡರು. ಜೋಡೆತ್ತುಗಳಾಗಿದ್ದು ರಾಜ್ಯದ ಅಭಿವೃದ್ಧಿಗಾಗಿ ಅಲ್ಲ. ಮೇವು ತಿನ್ನುವುದಕ್ಕೋಸ್ಕರ. ಹೀಗಾಗಿ ಆ ಜೋಡೆತ್ತುಗಳನ್ನು ಅಂತ್ಯ ಮಾಡಲು ಬಿಜೆಪಿ ಮುಂದಾಗಿದೆ. ಇನ್ನು ಕನಕಪುರದಲ್ಲಿ ಹಳೇ ಕಾಲದ ರಾಜಮನೆತನದ ರೀತಿ ದರ್ಪ, ದುರಾಡಳಿತ, ಗೂಂಡಾಗಿರಿ ನಡೆಯುತ್ತಿದೆ. ಹಾಲಿ ಶಾಸಕರು ಹಾಗೂ ಸಂಸದರು ಆ ರೀತಿ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಿಗೆ ಕಾಂಗ್ರೆಸ್ ಕಳಂಕ. ಇದಕ್ಕೆ ಸಾಕ್ಷಿ ಇಲ್ಲಿರುವ ಅಣ್ಣ-ತಮ್ಮಂದಿರು ಎಂದು ಡಿ.ಕೆ.ಬ್ರದರ್ಸ್ ವಿರುದ್ಧ ಕಿಡಿಕಾರಿದರು.
ಕನಕಪುರ ಯಾವುದೇ ಅಭಿವೃದ್ಧಿಯಾಗದೇ ಇರುವ ಕ್ಷೇತ್ರವಾಗಿದೆ. ನಮ್ಮ ದೇಶದಲ್ಲಿ ಅನೇಕರು ಚುನಾವಣೆಗೆ ನಿಲ್ಲುತ್ತಾರೆ. ಕೆಲವರಿಗೆ ಬಹಳ ಪುರಸೊತ್ತು ಇರುತ್ತೆ. ಕೆಲವರು ದುಡ್ಡು ಮಾಡಲು ಚುನಾವಣೆಗೆ ನಿಲ್ಲುತ್ತಾರೆ. ಕೆಲವರು ಮಾಡಿರುವ ದುಡ್ಡನ್ನು ಉಳಿಕೊಳ್ಳಲು ನಿಲ್ಲುತ್ತಾರೆ. ಇವರಿಗೆ ಕೇವಲ ರಾಜಕಾರಣ ಬೇಕು, ಅಭಿವೃದ್ಧಿ ಅಲ್ಲ. ಇವರು ರಾಜಕಾರಣದಲ್ಲಿರುವುದೇ ಬೇರೆ ಕಾರಣಕ್ಕೆ ಎಂದು ಆರೋಪಿಸಿದರು.
ಅದು ಯಾವ ಕಾರಣ ಎಂದು ತಿಳಿಯಬೇಕಿದ್ದರೆ ಪೇಪರ್ ಓದಿದರೆ ಎಷ್ಟು ಸಾವಿರ ಕೋಟಿ ಆಸ್ತಿ ಎಂಬುವುದು ಗೊತ್ತಾಗಲಿದೆ. ಬರೀ ಕಾಣುತ್ತಿರುವುದೇ ಇಷ್ಟಾದರೆ, ಕಾಣದೇ ಇರುವುದು ಎಷ್ಟಿದೆ? ಡೆಲ್ಲಿ ಅಪಾರ್ಟ್ಮೆಂಟ್, ಬೆಂಗಳೂರಿನಲ್ಲಿ ಇಡಿ ವಶಪಡಿಸಿಕೊಂಡಿದ್ದು ಸ್ಯಾಂಪಲ್ ಮಾತ್ರ. ಹಣವನ್ನ ಎಲ್ಲಿಲ್ಲಿ ಹೂತಿಟ್ಟಿದ್ದಾರೋ ಗೊತ್ತಿಲ್ಲ. ಇವರ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ. ಅಧಿಕಾರ ಸಿಕ್ಕ ಮೇಲೆ ಜನರಿಗೆ ಒಳ್ಳೆಯದು ಮಾಡಬೇಕು. ಇದ್ಯಾವುದೂ ಇಲ್ಲದೇ ದರ್ಪದಿಂದ ಕಳೆದ 35 ವರ್ಷಗಳ ದರ್ಪ, ದುರಾಡಳಿತಕ್ಕೆ ಒಂದು ಅಂತ್ಯ ಇದೆ ಎಂದು ಹೇಳಿದರು.
ಡಿ.ಕೆ. ಬ್ರದರ್ಸ್ ಭದ್ರಕೋಟೆ ಭೇದಿಸಲು ತಂತ್ರ ರೂಪಿಸಲು ಬಿಜೆಪಿ ತಂತ್ರಗಾರಿಕೆ ಮಾಡುತ್ತಿದೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಗೆಲುವಿಗಾಗಿ ಕನಕಪುರದಲ್ಲಿ ಬಿ.ಎಲ್.ಸಂತೋಷ್ ಅವರು ಹೈವೋಲ್ಟೇಜ್ ಸಭೆ ನಡೆಸಿದ್ದಾರೆ. ಈಗಾಗಲೇ ಕನಕಪುರದಲ್ಲಿ ಸಚಿವ ಆರ್. ಅಶೋಕ್ ಅವರು ಪ್ರಚಾರ ಮಾಡುತ್ತಿದ್ದಾರೆ.