ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗುರುವಾರ, ಮುಧೋಳ, ಕನಕಗಿರಿ, ಬಳ್ಳಾರಿ ಗ್ರಾಮೀಣ, ಶಿರುಗುಪ್ಪ, ಹೂವಿನ ಹಡಗಲಿ, ಚಿತ್ರದುರ್ಗ ಹಾಗೂ ಹಿರಿಯೂರು ಸೇರಿ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ರೋಡ್ ಶೋಗಳಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ
ಚಿತ್ರದುರ್ಗ: ರಾಜ್ಯದಲ್ಲಿ ರಾಜಕೀಯ ವಿಶ್ಲೇಷಣೆ ಅತಂತ್ರ ಎನ್ನುವ ಚರ್ಚೆ ಇದೆ. ಅವರದೇ ಆದ ಲೆಕ್ಕಾಚಾರದಲ್ಲಿ ಪಂಡಿತರು ಹೇಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪಾರೆಡ್ಡಿ ರೆಡ್ಡಿ ಪರ ಮತಯಾಚಿಸಿದ ಅವರು, ಮೋದಿ ಯೋಜನೆಗಳು ನಮಗೆ ವರದಾನ ಆಗಿವೆ. ಬಿಎಸ್‌ವೈ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ರಾಜೀನಾಮೆ ನೀಡುವಾಗ ಸವಾಲು ಸ್ವೀಕಾರ ಮಾಡಿದ್ದಾರೆ. 80 ವರ್ಷದ ಬಿಎಸ್‌ವೈ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರ ಮಾಡುತ್ತಿದ್ದಾರೆ. ಅವರು ರಾಜ್ಯದಲ್ಲಿ 130 ಸ್ಥಾನ ಗೆಲ್ಲಿಸುತ್ತೇನೆ ಎಂದು ಹೇಳಿರುವುದಾಗಿ ತಿಳಿಸಿದರು.
ಒಂದು ಕಾಲದಲ್ಲಿ ಬಿಎಸ್‌ವೈ ಗುಡುಗಿದರೆ ಸದನ ನಡುಗುತ್ತಿತ್ತು. ಇಂದು ಮತ್ತೆ ಅಧಿಕಾರಕ್ಕೆ ತರುವ ಶಕ್ತಿ ಅವರಿಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅಪಹಪಿಸುತ್ತಿದೆ. 50-60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನು ಹೇಳಿದೆ? ಅಧಿಕಾರಕ್ಕೆ ಬಂದರೆ ಉಚಿತ ಗ್ಯಾಸ್, ಉಚಿತ ಅಕ್ಕಿ ಕೊಡುತ್ತೇವೆ ಅಂತ ಕಿವಿಗೆ ಹೂವು ಮುಡಿಸುತ್ತಿದ್ದೀರಾ? ಪ್ರಣಾಳಿಕೆಯಲ್ಲಿ ಗ್ಯಾರಂಟಿ ಕೊಡುತ್ತಾರಂತೆ ಇವರ ಯೋಗ್ಯತೆಗೆ ಎಂದ ಅವರು, ಇಂದು ದೇಶದಲ್ಲಿ ಕೈ ಅಸ್ತಿತ್ವ ಕಳೆದುಕೊಂಡಿದೆ. ಈ ಬಾರಿ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ ನೀವೇ ನೋಡಿ ಎಂದು ಹೇಳಿದರು.
ಬಿಎಸ್‌ವೈ ಪ್ರಚಾರ ನೋಡಿ ಕಾಂಗ್ರೆಸ್ ನಾಯಕರು ಭಯ ಬಿದ್ದಿದ್ದಾರೆ. ರಾಜ್ಯದ ಜನ ಅರು ಧಿಕ್ಕರಿಸಿದ್ದಾರೆ ಎಂಬುವುದು ಮೇ 13ಕ್ಕೆ ಗೊತ್ತಾಗುತ್ತದೆ. ಬಜರಂಗ ದಳ ನಿಷೇಧ ಮಾಡುತ್ತೇವೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷ ಅಲ್ಲವೇ ಅಲ್ಲ, ಆದರೆ, ಖರ್ಗೆ ಮತ್ತು ಮಗ ಪ್ರಧಾನಿ ಬಗ್ಗೆ ಏನು ಮಾತನಾಡಿದ್ದಾರೆ. ಡಿಕೆಶಿ ಏನು ಮಾತನಾಡಿದ್ದಾರೆ ಎಂಬುವುದು ಜನಕ್ಕೆ ಗೊತ್ತಿದೆ ಎಂದು ಕಿಡಿಕಾರಿದರು.
ಗೋವಾದಲ್ಲಿ ಕ್ಯಾಸಿನೊ, ಇಸ್ಪೀಟ್ ಆಡಿಕೊಂಡು ಇದ್ದವರು ಇಲ್ಲಿ ಹಣ ಹಂಚಿದರೆ ದೇವರು ಮೆಚ್ಚುತ್ತಾನಾ? ಪ್ರಾಮಾಣಿಕ ರಾಜಕಾರಣಿ ತಿಪ್ಪಾರೆಡ್ಡಿ ಬೆಲೆ ಏನು? ಇಸ್ಪೀಟ್ ದುಡ್ಡಿನ ಮದದಿಂದ ಮತದಾರರನ್ನು ಕೊಂಡುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಇಲ್ಲಿ ದುಡ್ಡಿನಿಂದ ಕ್ಷೇತ್ರ ಗೆಲ್ಲಲು ಆಗಲ್ಲ. ಅಂತಹ ಕರಾಳ ದಿನ ದುರ್ಗದಲ್ಲಿ ಬರುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ವೀರೇಂದ್ರ ಪಪ್ಪಿ ಬಗ್ಗೆ ಕಿಡಿಕಾರಿದರು.