ಬೆಂಗಳೂರು: ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕಿಂತ ಹೆಚ್ಚಾಗಿ ದೊಡ್ಡ ಜವಾಬ್ದಾರಿಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ನೀಡಿದೆ. ಅದನ್ನು ಅವರು ಯಶಸ್ವಿಯಾಗಿ ನಿರ್ವಹಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಬಿಜೆಪಿ ರಾಜ್ಯ ಉಪಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಬಿ.ಎಸ್.ಯಡಿಯೂರಪ್ಪ ನೇಮಕಗೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರಿಗೆ ಕರ್ನಾಟಕಕ್ಕೆ ಸೀಮಿತವಾಗದೆ ದಕ್ಷಿಣ ಭಾರತ ಪ್ರವಾಸ ಮಾಡಿ ಎಂದು ಮೋದಿ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ ಎಂದರು.
ಇದನ್ನೂ ಓದಿ | ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ, ಚುನಾವಣಾ ಸಮಿತಿಗಳಲ್ಲಿ ಸ್ಥಾನ ಕಳೆದುಕೊಂಡ ನಿತಿನ್ ಗಡ್ಕರಿ !
ಮೋದಿಜಿ ನಾಯಕತ್ವವನ್ನು ರಾಜ್ಯದ ಜನತೆ ಒಪ್ಪಿಕೊಂಡಿದ್ದಾರೆ. ಬಿಎಸ್‌ವೈ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಶ್ರಮಿಸಲಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಬಿಎಸ್‌ವೈ ಹೇಳಿದ್ದಾರೆ. ಅದನ್ನು ಯಾರಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ, ಇದರಿಂದ ಕಾಂಗ್ರೆಸ್‌ನವರಿಗೆ ನಿದ್ರೆ ಬಾರದ ವಾತವಾರಣ ನಿರ್ಮಾಣವಾಗಿದೆ ಎಂದರು.
ಕಾಂಗ್ರೆಸ್ ಏನೇ ಬೊಬ್ಬೆ ಹೊಡೆದರೂ ನಾವು ವಿಶ್ವಾಸದಿಂದ ಇದ್ದೇವೆ. ಜನತೆಗೆ ಮುಟ್ಟಬೇಕಾದ ಕಾರ್ಯಕ್ರಮಗಳನ್ನು ನಾವು ಮಾಡುತ್ತೇವೆ. ಕಾಂಗ್ರೆಸ್ ಪಕ್ಷದವರು ಕುಂತಲ್ಲಿ ನಿಂತಲ್ಲಿ ಮುಂದಿನ ಚುನಾವಣೆಯಲ್ಲಿ ತಾವೇ ಅಧಿಕಾರಕ್ಕೆ ಬರುವುದಾಗಿ ಬೊಬ್ಬೆ ಹೊಡಿಯುತ್ತಾರೆ. ಆದರೆ ರಾಜ್ಯದ ಜನತೆ ಮೂರ್ಖರಲ್ಲ ಎಂದರು.
ವಿಧಾನ ಸಭಾ ಟಿಕೆಟ್ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಎಲ್ಲಾ ಜವಾಬ್ದಾರಿ ನೀಡಿದೆ. ನನಗೆ ಲಾಭ ಅಥವಾ ನಷ್ಟ ಎಂಬ ಲೆಕ್ಕಾಚಾರ, ಸ್ಥಾನಮಾನದ ಪ್ರಶ್ನೆ ಇಲ್ಲ. ಪಕ್ಷ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | ಮಾಜಿ ಸಿಎಂ ಯಡಿಯೂರಪ್ಪ ಫುಲ್ ಆ್ಯಕ್ಟೀವ್: ಬಿಜೆಪಿ ಕಚೇರಿ, ಕೇಶವ ಕೃಪಾಗೆ ಭೇಟಿ