Site icon Vistara News

Karnataka Election: ಟಿಕೆಟ್‌ ಚರ್ಚೆ ಬಿಎಸ್‌ವೈ ಕಿಚನ್‌ನಲ್ಲೂ ಆಗಲ್ಲ, ಮತ್ತೊಬ್ಬರ ಕಿಚನ್‌ನಲ್ಲೂ ನಡೆಯಲ್ಲ: ವಿಜಯೇಂದ್ರ

If a complaint goes as far as Delhi it means that person has grown BY VIJAYENDRA

ಕೊಪ್ಪಳ: ರಾಜಕಾರಣದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಎತ್ತರಕ್ಕೆ ಬೆಳೆಯುವುದಕ್ಕೆ ಸಾಧ್ಯ. ಯಾರಿಗೆ ಆಗಲಿ ಟಿಕೆಟ್‌ ನೀಡುವ ಬಗ್ಗೆ ಬಿ.ಎಸ್‌. ಯಡಿಯೂರಪ್ಪ ಅಡುಗೆ ಮನೆಯಲ್ಲೂ ನಿರ್ಧಾರ ಆಗಲ್ಲ, ಮತ್ತೊಬ್ಬರ ಅಡುಗೆ ಮನೆಯಲ್ಲಿಯೂ ಚರ್ಚೆ ಆಗಲ್ಲ. ಮುಂದಿನ ದಿನಗಳಲ್ಲಿ ಪಕ್ಷ (Karnataka Election) ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಸಿ.ಟಿ.ರವಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಬಿಜೆಪಿ ಟಿಕೆಟ್‌ ಅಡುಗೆಮನೆಯಲ್ಲಿ ನಿರ್ಧಾರವಾಗಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ಜಿಲ್ಲೆಯ ಹನುಮಸಾಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಎಸ್‌ಟಿ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿಯವರು ಹಿರಿಯರಿದ್ದಾರೆ. ಯಡಿಯೂರಪ್ಪ ಎಷ್ಟು ಹಿರಿಯರಿದ್ದಾರೆ‌? ಬಿಜೆಪಿ ಕಟ್ಟಿದ್ದು ಯಾರು ಎಂದು ಅವರಿಗೂ ಗೊತ್ತಿದೆ. ಈ ರೀತಿ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ | BY Vijayendra: ಸಿ.ಟಿ. ರವಿ ಹೇಳಿದ್ದು ಸರಿ ಇದೆ; ವಿಜಯೇಂದ್ರನಿಗಾದರೂ ಚುನಾವಣಾ ಸಮಿತಿಯಿಂದಲೇ ಟಿಕೆಟ್‌ ತೀರ್ಮಾನ: ಬಿಎಸ್‌ವೈ

ಪಕ್ಷ ನನಗೆ ಜವಬ್ದಾರಿ‌ ನೀಡಿದೆ ಆ ಕೆಲ‌ಸ ಮಾಡುತ್ತಿದ್ದೇನೆ. ಅರುಣ್ ಸೋಮಣ್ಣ ಹೇಳಿಕೆ ನಾನು ನೋಡಿಲ್ಲ. ಹೀಗಾಗಿ ಅದಕ್ಕೆ ಉತ್ತರ ನೀಡುವುದಿಲ್ಲ. ಪಕ್ಷ ಎಲ್ಲಿ ಸ್ಪರ್ಧೆ ಮಾಡು ಎನ್ನುತ್ತದೋ ಅಲ್ಲಿ ನಿಲ್ಲುತ್ತೇನೆ, ಬೇಡ ಎಂದರೆ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದರು.

ಭಾರತವನ್ನು ಜಗತ್ತಿನಲ್ಲಿರುವ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ತೆಗೆದುಕೊಂಡು ಹೋಗುವ ಉದ್ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಸ್ವಾತಂತ್ರ್ಯ ಬಂದ ಮೇಲೆ 50-60 ವರ್ಷದವರೆಗೂ ಕಾಂಗ್ರೆಸ್ ಅಧಿಕಾರ ನಡೆಸಿತು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಕುಂತಲ್ಲಿ, ನಿಂತಲ್ಲಿ ಟೀಕಿಸುತ್ತದೆ. ಪಿಎಂ ಆವಾಸ್ ಯೋಜನೆ, ಜಲಜೀವನ್ ಮಿಷನ್, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಹೀಗೆ ಅನೇಕ ಯೋಜನೆಗಳನ್ನು ನಮ್ಮ ಕೇಂದ್ರ ಸರ್ಕಾರ ಮಾಡಿದೆ. ಆದರೆ, ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ ಬಡತನ ಕಿತ್ತು ಹಾಕುವ ಕೆಲಸ ಮಾಡಲಿಲ್ಲ ಎಂದು ಕಿಡಿ ಕಾರಿದರು.

ಇದನ್ನೂ ಓದಿ | Koppal News: ಕೊಪ್ಪಳದಲ್ಲಿ 100 ಆಹಾರ ಸಂಸ್ಕರಣಾ ಘಟಕ: ಸಿಎಂ

ಚುನಾವಣೆ ಸಂದರ್ಭದಲ್ಲಿ ಪುಕ್ಕಟೆ ವಿದ್ಯುತ್, ಅಕ್ಕಿ, 10 ಸಾವಿರ ರುಪಾಯಿ ಕೊಡುತ್ತೇವೆ ಎಂದು ಪೊಳ್ಳು ಭರವಸೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಜ್ಞಾವಂತ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಕಿತ್ತೆಸೆಯಲಿದ್ದಾರೆ ಎಂದ ಅವರು, ಕುಷ್ಟಗಿ ಕ್ಷೇತ್ರದಲ್ಲಿ ದೊಡ್ಡನಗೌಡ ಪಾಟೀಲ್ ಸಜ್ಜನ ರಾಜಕಾರಣಿಯಾಗಿದ್ದು, ಅವರನ್ನು ಜನ ಗೆಲ್ಲಿಸಬೇಕು. ಮುಂದೆ ಅವರು ಮಂತ್ರಿಯಾಗಿ ಸರ್ವಾಂಗೀಣ ಅಭಿವೃದ್ಧಿ ಕೆಲಸ ಮಾಡಲು ಆಶೀರ್ವದಿಸಬೇಕು ಎಂದು ಕೋರಿದರು.

Exit mobile version