ಶಿವಮೊಗ್ಗ: ಇಡೀ ದೇಶ ಕೊಳ್ಳೆ ಹೊಡೆದವರಿಂದ ಭ್ರಷ್ಟಾಚಾರದ ಪಾಠ ಬೇಡ, ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಬೊಗಳೆ ಬಿಡುತ್ತಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಇಷ್ಟು ವರ್ಷ ಆಡಳಿತ ಮಾಡಿದರೂ ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದರಿಂದ ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯಂತಹವರು ಕೂಡ ಸ್ವಕ್ಷೇತ್ರ ಬಿಟ್ಟು ಕೇರಳದ ವಯನಾಡ್‌ನಿಂದ ಸ್ಪರ್ಧಿಸುವ (Karnataka Election 2023) ದುಸ್ಥಿತಿ ಬಂದಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ಯುವ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ಮೋರ್ಚಾಗಳ ಸಮಾವೇಶ ಆಯೋಜಿಸಿ, ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆ ತಿಳಿಸಲಾಗುತ್ತಿದೆ. ಯುವ ಮೋರ್ಚಾ ಮೇಲೆ ಪಕ್ಷದ ಅಧಿಕಾರ ನಿಂತಿರುತ್ತದೆ. ಭದ್ರಾವತಿ ಸೇರಿ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು. ಆ ನಿಟ್ಟಿನಲ್ಲಿ ಯುವ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ | Sumalatha Ambareesh: ಬಿಜೆಪಿಗೆ ಬೆಂಬಲ ಕೊಟ್ಟ ಸುಮಲತಾ; ರಂಗಮಂದಿರದಲ್ಲಿದ್ದ ಫೋಟೊ ತೆರವುಗೊಳಿಸಿ ಆಕ್ರೋಶ
ಯುವಕರಿಗೆ ಶಕ್ತಿ ಕೊಟ್ಟಾಗ ಮಾತ್ರ ಭಾರತ ಅಭಿವೃದ್ಧಿಯಾಗುತ್ತದೆ. ಅದನ್ನು ಗಮನಿಸಿ ಯುವಜನತೆಗೆ ಪ್ರಧಾನಿ ಮೋದಿ ಅವರು ಆದ್ಯತೆ ನೀಡುತ್ತಿದ್ದಾರೆ. ರಾಜಕಾರಣಿ ಮುಂದಿನ ಚುನಾವಣೆ ನೋಡಿದರೆ, ಮುತ್ಸದ್ದಿ ಮುಂದಿನ ಭಾರತ ನೋಡುತ್ತಾನೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಕುಂತಲ್ಲಿ, ನಿಂತಲ್ಲಿ ಟೀಕೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಆರ್ಟಿಕಲ್ 370 ಕಾಂಗ್ರೆಸ್ ಪಾಪದ ಕೂಸು. ಸಾವಿರಾರು ಜನರನ್ನು ಬಲಿ ತೆಗೆದುಕೊಂಡ 370ನೇ ವಿಧಿಯನ್ನು ರದ್ದು ಮಾಡಿ ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದ ಅವರು, ಕೇಂದ್ರ ಕೈಗೊಂಡ ಕ್ರಮಗಳ ಪರಿಣಾಮ ಲಾಲ್ ಚೌಕ್‌ನಲ್ಲಿ ರಾಹುಲ್ ಗಾಂಧಿ ಧ್ವಜ ಹಾರಿಸಲು ಸಾಧ್ಯವಾಯಿತು. ಇದರಿಂದ ಕಳೆದ ಒಂಬತ್ತು ವರ್ಷಗಳಿಂದ ನಕ್ಸಲ್ ಚಟುವಟಿಕೆ ಸ್ತಬ್ಧವಾಗಿದೆ ಎಂದು ಹೇಳಿದರು.
ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿ ಆಗುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲೂ ಸರ್ವಾಂಗೀಣ ಅಭಿವೃದ್ಧಿ ಆಗುತ್ತಿದೆ, ಶಿವಮೊಗ್ಗ ಚಿತ್ರಣ ಬದಲಾಗಲು ಯಡಿಯೂರಪ್ಪ ಸೇರಿ ಇಲ್ಲಿನ ನಾಯಕರ ಶ್ರಮ ಕಾರಣ ಎಂದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ, ಆರುವ ದೀಪ ಜೋರಾಗಿ ಉರಿಯುತ್ತೆ ಎಂಬಂತೆ ಕಾಂಗ್ರೆಸ್ ಸ್ಥಿತಿಯಿದೆ ಎಂದರು.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ಜೆಡಿಎಸ್, ಕಾಂಗ್ರೆಸ್ ಹುಟ್ಟಿಕೊಳ್ಳುತ್ತವೆ. ಪಂಚ ರತ್ನ ಹೆಸರಲ್ಲಿ ಯಾತ್ರೆ ಮಾಡುವ ಪಕ್ಷವಲ್ಲ ನಮ್ಮದು. ಪಂಚ ವರ್ಷ ಕೆಲಸ ಮಾಡುವ ಪಕ್ಷ ಬಿಜೆಪಿಯಾಗಿದೆ. ಬೆಂಗಳೂರು ಕೇಂದ್ರಿತ ಅಭಿವೃದ್ಧಿ ರಾಜ್ಯಾದ್ಯಂತ ವಿಸ್ತರಿಸಿದ್ದು ಬಿಜೆಪಿ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಮಾ.12ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟಿಸಲಿದ್ದಾರೆ. ಅದು ಕಾಂಗ್ರೆಸ್, ಜೆಡಿಎಸ್ ಕನಸಿನ ಯೋಜನೆಯೂ ಹೌದು. ಆದರೆ, ಅವರು ಬರೀ ಕನಸು ಕಾಣುತ್ತಿದ್ದರು. ಆದರೆ ಮೋದಿಯವರಿಂದ ಕನಸು ನನಸಾಗಿದೆ. ಕಾಂಗ್ರೆಸ್, ಜೆಡಿಎಸ್ ಕಾಮಗಾರಿ ಆರಂಭಿಸಿ ಮುಗಿಸಿದ ಒಂದೇ ಒಂದು ಯೋಜನೆ ತೋರಿಸಿ ಎಂದ ಅವರು, ಬಿಜೆಪಿಯ ಒಂದೇ ಅವಧಿಯಲ್ಲಿ ಯೋಜನೆ ಆರಂಭಿಸಿ ಮುಗಿಯುತ್ತಿದೆ. ಅಷ್ಟು ವೇಗದ ಅಭಿವೃದ್ಧಿ ಬಿಜೆಪಿ ಸರ್ಕಾರದಿಂದ ಆಗುತ್ತಿದೆ ಎಂದರು.
ಇದನ್ನೂ ಓದಿ | PM Modi: ನಾಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್; ಪರ್ಯಾಯ ಮಾರ್ಗಗಳು ಯಾವುವು?
ಶಿವಮೊಗ್ಗ ನಮ್ಮ ವಿಚಾರಧಾರೆ ಗಟ್ಟಿಯಾಗಿರುವ ಕ್ಷೇತ್ರ. ಹೀಗಾಗಿ ಹಿಂದು ಕಾರ್ಯಕರ್ತ ಹರ್ಷನ ಕೊಲೆಯಾಯಿತು. ಕೇವಲ ಪಾದಯಾತ್ರೆಯಿಂದ ಭಾರತ ಜೋಡೊ ಆಗುವುದಿಲ್ಲ. ನಿಜವಾಗಿ ಭಾರತ ಜೋಡೊ ಮಾಡಿದ್ದು ಪ್ರಧಾನಿ ಮೋದಿ ಎಂದ ಅವರು, ಕಾಂಗ್ರೆಸ್ ಹತಾಶ ಭಾವನೆ ಹೊಂದಿದೆ. ಅವರ ಹೇಳಿಕೆಗಳಿಂದಲೇ ಅದು ಅರ್ಥವಾಗುತ್ತದೆ. ಅವರಿಗೆ ಸೋಲುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಇವಿಎಂ ಸರಿಯಿಲ್ಲ ಎಂಬ ಗುಲ್ಲು ಆರಂಭಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕುಮಾರ್, ಶಾಸಕrAd ಅಶೋಕ ನಾಯ್ಕ, ಅರುಣ್ ಡಿ.ಎಸ್. ಮತ್ತಿತರರು ಇದ್ದರು.