ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮೋರ್ಚಾಗಳ ಸಮಾವೇಶ ನಡೆಸುವ ಹೊಣೆ ನೀಡಿದ ದಿನವೇ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ಬಿ.ವಿಜಯೇಂದ್ರ, ಸಭೆ ನಡೆಸಿದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
ಮೋರ್ಚಾಗಳ ಸಮಾವೇಶ ಕುರಿತು ಸಭೆ ನಡೆಸಿದ್ದೇವೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಮಾವೇಶಗಳ ಆಯೋಜನೆ ಮಾಡಲಾಗುತ್ತದೆ. ಮೋರ್ಚಾಗಳ ಸಮಾವೇಶಗಳ ಬಗ್ಗೆ ಮುಂದಿನ ವಾರ ದಿನಾಂಕ ನಿಗದಿ ಮಾಡಲಾಗುತ್ತದೆ.
ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಈ ದೃಷ್ಟಿಯಿಂದ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಗಳಲ್ಲೂ ಮೋರ್ಚಾಗಳ ಸಮಾವೇಶ ಆಗಬೇಕು. ಅದಕ್ಕಾಗಿ ನನ್ನನ್ನು ಪಕ್ಷದಿಂದ ಸಂಚಾಲಕರಾಗಿ ಮಾಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಎಲ್ಲ ಮೋರ್ಚಾಗಳ ಸಮಾವೇಶಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಯಶಸ್ವಿಯಾಗಬೇಕು. ಈ ಒಂದು ಸಮಾವೇಶಗಳ ಉದ್ದೇಶ ಬಿಜೆಪಿ ಸ್ಪಷ್ಟ ಬಹುಮತ ದೊಂದಿಗೆ ಬರಬೇಕು. ಯಾವ ಜಿಲ್ಲೆಯಿಂದ ಶುರು ಮಾಡಬೇಕು, ಯಾವ ನಾಯಕರನ್ನು ಎಂದು ಚರ್ಚೆ ಮಾಡಲಾಗ್ತಿದೆ ಎಂದರು.
ಯಡಿಯೂರಪ್ಪ ಕುರಿತು ಎಚ್.ಡಿ. ಕುಮಾರಸ್ವಾಮಿ ಅನುಕಂಪದ ನುಡಿ ವಿಚಾರದಲ್ಲಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಜೆಡಿಎಸ್ ಗೊಂದಲದಲ್ಲಿದೆ. ಹೀಗಾಗಿ ಅವರ ಪಕ್ಷದ ನಾಯಕರು ಗೊಂದಲಕಾರಿ ಹೇಳಿಕೆ ಕೊಡ್ತಿದಾರೆ. ಕಾಂಗ್ರೆಸ್ ನಲ್ಲೂ ಗೊಂದಲ ಇದೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಏನೇ ಹೇಳಿದರೂ ಮತ್ತೆ ಜನ ಬಿಜೆಪಿಗೇ ಆಶೀರ್ವಾದ ಮಾಡ್ತಾರೆ.
ರಾಜ್ಯ ಬಿಜೆಪಿಯಲ್ಲಿ ನಾಯಕರು ಯಾರೂ ಇಲ್ಲವ? ಎಂದು ರಾಷ್ಟ್ರೀಯ ನಾಯಕರ ಪ್ರವಾಸದ ಕುರಿತು ಸಿದ್ದರಾಮಯ್ಯ ಟೀಕೆಗೆ ಉತ್ತರ ನೀಡಿದ ವಿಜಯೇಂದ್ರ, ಕಾಂಗ್ರೆಸ್‌ನಲ್ಲಿರುವ ರಾಷ್ಟ್ರೀಯ ನಾಯಕರ ಹಣೆಬರಹ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಅವರ ನಾಯಕರಿಗೆ ಅಡ್ರೆಸ್ ಇಲ್ಲದಂತಾಗಿದೆ. ನಮ್ಮಲ್ಲಿ ರಾಷ್ಟ್ರೀಯ ನಾಯಕರು ವಿಶ್ವ ನಾಯಕರು. ಇಡೀ ರಾಜ್ಯದಲ್ಲಿ ನಮ್ಮ ರಾಷ್ಟ್ರೀಯ ನಾಯಕರ ಪ್ರಭಾವ ಇದೆ. ಈ ಪ್ರಭಾವ ಬಳಸಿಕೊಂಡು ನಾವು ಚುನಾವಣೆ ಎದುರಿಸುತ್ತೇವೆ. ಇದರಲ್ಲಿ ನಾವು ಯಶಸ್ವಿ ಆಗ್ತೇವೆ ಎಂದರು.
ಚುನಾವಣೆ ಸಂದರ್ಭದಲ್ಲಿ ಕೆಲವು ರಾಜಕೀಯ ಪಕ್ಷಗಳು ದಿವಾಳಿಯಾಗಿವೆ. ರಾಜ್ಯದ ಜನರನ್ನು ದಿಕ್ಕು ತಪ್ಪಿಸುತ್ತುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಹೇಳಿಕೆಗಳು ಜನತಾ ದಳದ ನಾಯಕರಿಗೂ ಶೋಭೆ ತರುವುದಿಲ್ಲ. ನಾಡಿನ ಜನರು ಪ್ರಜ್ಞಾವಂತರು ಇದ್ದಾರೆ, ಮತ್ತೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಬಿಜೆಪಿ ನಾಯಕರು ಸಿಡಿ ಯಾತ್ರೆ ಮಾಡಲಿ ಎಂಬ ಕುಮಾರಸ್ವಾಮಿ ಹೇಳಿಕೆ ಹಾಗೂ ಸಿಡಿ ವಿಚಾರವನ್ನು ತನಿಖೆ ಮಾಡಬೇಕೆಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ವಿಜಯೇಂದ್ರ ಹಿಂದೇಟು ಹಾಕಿದರು.