ಯಾದಗಿರಿ: ಈ ಹಿಂದಿನ ಚುನಾವಣೆಯಲ್ಲಿ (Karnataka Election) ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ತೊಡೆ ತಟ್ಟಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಇದೀಗ ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಅವರು ಶನಿವಾರ ಸೈದಾಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಾಯಿತುಂಬಾ ಹೊಗಳಿದರು. ಖರ್ಗೆ ಅವರು ಕೂಡಾ ಹಳೆ ದ್ವೇಷ ಮರೆತು ಪ್ರೀತಿ ತೋರಿದರು ಮತ್ತು ಇನ್ನು ಮುಂದೆ ಏನೇ ಆದರೂ ಪಕ್ಷ ಬಿಟ್ಟು ಹೋಗ್ಬೇಡ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಾಬುರಾವ್ ಚಿಂಚನಸೂರು ಮಾತನಾಡಿ, ಹೈದರಾಬಾದ್ ಕರ್ನಾಟಕ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರ ಕೋಟೆ. ಈ ಕೋಟೆ ಒಡೆಯಲು ಬಿಜೆಪಿಯವರು ಭಾರಿ ಪ್ಲ್ಯಾನ್ ಹಾಕಿದ್ದರು. ರಾತ್ರೋರಾತ್ರಿ ಡಿಕೆಶಿ ಅವರು ನನ್ನನ್ನು ಕರೆಸಿಕೊಂಡರು. ಹೈದರಾಬಾದ್ ಕರ್ನಾಟಕಕ್ಕೆ ಖರ್ಗೆ ಅವರು ಕಿರೀಟ ಇದ್ದ ಹಾಗೆ. ಡಿಕೆಶಿ, ಖರ್ಗೆ ನೇತೃತ್ವದ ಕಾಂಗ್ರೆಸ್‌ನ ಕೂದಲು ಅಲ್ಲಾಡಿಸಲು ಯಾರಿಗೂ ಸಾಧ್ಯವಿಲ್ಲ. ಬಿಜೆಪಿ ಬ್ರಹ್ಮಾಸ್ತ್ರ ಹಿಡಿದು ಸುದರ್ಶನ ಚಕ್ರ ತಂದರೂ ಕಾಂಗ್ರೆಸ್‌ನ ಸೋಲಿಸಲು ಆಗುವುದಿಲ್ಲ ಎಂದು ಖರ್ಗೆಯವರನ್ನು ಹಾಡಿ ಹೊಗಳಿದರು.
ಬಿಜೆಪಿ ಹಾಗೂ ದಳದವರಿಗೆ ಗ್ರಹಣ ಹಿಡಿದಿದೆ. ಬಿಜೆಪಿಯಲ್ಲಿ ಹಿಂದುಳಿದ ಜನತೆಗೆ ಅವಕಾಶ ಇಲ್ಲ. ಹೀಗಾಗಿ ಬಿಜೆಪಿ ಮನೆಗೆ ಹೋಗಿ ಮತ್ತೆ ಮರಳಿ ಮನೆಗೆ ಬಂದಿದ್ದೇನೆ. ಖರ್ಗೆ ಹಾಗೂ ಡಿಕೆಶಿ ಅವರ ಶಕ್ತಿಯನ್ನು ಯಾರಿಗೂ ತಡೆಯಲು ಆಗಲ್ಲ. ನಿಮ್ಮ ಸೇವೆ ಮಾಡಲು ಜೀವಂತ ಇದ್ದೇನೆ ಎಂದು ಕಾಂಗ್ರೆಸ್ ವರಿಷ್ಠರಿಗೆ ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 8 ಬಾರಿ ಗೆದ್ದ ನಂತರ ಗುರುಮಠಕಲ್ ಕ್ಷೇತ್ರದ ಅಭಿವೃದ್ಧಿಗಾಗಿ ಸಾಮಾನ್ಯ ಕ್ಷೇತ್ರ ಮಾಡಿದ್ದೆ. ಎಸ್‌ಟಿ ಮೀಸಲು ಕ್ಷೇತ್ರವನ್ನು ಬೇರೆಯವರಿಗೂ ಅವಕಾಶ ಸಿಗಲಿ, ಕ್ಷೇತ್ರ ಅಭಿವೃದ್ಧಿ ಯಾಗಲಿ ಎಂದು ಸಾಮಾನ್ಯ ಕ್ಷೇತ್ರ ಮಾಡಿ ತಪ್ಪು ಮಾಡಿದೆ. ಜನರ ಆಶೀರ್ವಾದಿಂದಲೇ 371 ಜೆ ತಿದ್ದುಪಡಿ ತಂದಿದ್ದೇನೆ. ಯಾದಗಿರಿ ಭಾಗ ಅತಿ ಹಿಂದುಳಿದಿತ್ತು, ಮೊದಲು ಚುನಾವಣೆಗೆ ನಿಂತಾಗ ಸಂತೆಯಲ್ಲಿ ಭಾಷಣ ಮಾಡಿದ್ದೆ. ಜನರು ಬೆಂಬಲ ಕೊಟ್ಟಿದ್ದರಿಂದ ಚುನಾವಣೆಯಲ್ಲಿ ಗೆದ್ದೆ. ವಿದ್ಯುತ್ ಸಂಪರ್ಕ, ಕೆರೆ ನಿರ್ಮಾಣ ಸೇರಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದರು.
ಈ ವೇಳೆ ಬಾಬುರಾವ್ ಚಿಂಚನಸೂರು ಮತ್ತೆ ಕಾಂಗ್ರೆಸ್‌ಗೆ ಬಂದಿದ್ದಾರೆ. ಏನೇ ಆದರೂ ಕಾಂಗ್ರೆಸ್ ಪಕ್ಷ ಬಿಡಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಕಿವಿ ಮಾತು ಹೇಳಿದಾಗ ಬಾಬುರಾವ್ ಚಿಂಚನಸೂರು, ಖರ್ಗೆಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಲಿತ್ ಮೋದಿ, ನೀರವ್ ಮೋದಿ ದೇಶವನ್ನು ಕೊಳ್ಳೆ ಹೊಡೆದು ವಿದೇಶಕ್ಕೆ ಹೋದರೆ ಮಾತನಾಡಬಾರದಾ? ರಾಹುಲ್ ಗಾಂಧಿ ಹೇಳಿದ್ದು ಕೋಲಾರದಲ್ಲಿ, ಕೇಸ್ ಹಾಕಿರುವುದು ಸೂರತ್‌ನಲ್ಲಿ. ರಾಹುಲ್ ಗಾಂಧಿ ಬಾಯಿ ಬಂದ್ ಮಾಡಲು ಎರಡು ವರ್ಷ ಶಿಕ್ಷೆ ನೀಡಿದ್ದಾರೆ. ಬಿಜೆಪಿಯವರು ಕುತಂತ್ರ ಮಾಡಿ ಲೋಕಸಭೆಯಿಂದ ರಾಹುಲ್ ಗಾಂಧಿಯನ್ನು ಹೊರ ಹಾಕಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇನೆ. ರಾಹುಲ್ ಗಾಂಧಿ ಯಾರಿಗೂ ಹೆದರುವುದಿಲ್ಲ, ಪ್ರತಿ ರಾಜ್ಯ, ಪ್ರತಿ ಜಿಲ್ಲೆಯಲ್ಲಿ ಸಂವಿಧಾನ ಉಳಿವಿಗಾಗಿ ಹೋರಾಟ ಮಾಡಲು ಕಾಂಗ್ರೆಸ್ ತಯಾರಾಗಿದೆ. ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಹುಲ್ ಗಾಂಧಿ ಅವರು ಅನರ್ಹತೆ ಹಾಗೂ ಜೈಲಿಗೂ ಹೆದರುವುದಿಲ್ಲ. ಕಾಂಗ್ರೆಸ್ ಧ್ವನಿಯನ್ನು ಯಾರು ಕೂಡ ಮುಚ್ಚಿ ಹಾಕಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ನಂತರ ಕಾಂಗ್ರೆಸ್‌ನಲ್ಲಿ ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾಲ್ಕೈದು ಅಭ್ಯರ್ಥಿಗಳಲ್ಲಿ ಅಸಮಾಧಾನ ಇರುತ್ತದೆ. ಸಿದ್ದರಾಮಯ್ಯ ಕ್ಷೇತ್ರದ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುತ್ತದೆ. ಕಾಂಗ್ರೆಸ್ ಪಕ್ಷ ಒಂದು ಪಕ್ಷ ಅಲ್ಲ, ಇದೊಂದು ದೇವಾಲಯ. ಎಂಟು ಬಾರಿ ಖರ್ಗೆ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯಕ್ಕೆ ಒಳ್ಳೆ ನಾಯಕರನ್ನು ಕೊಟ್ಟಿದ್ದೀರಿ, ನಿಮಗೆಲ್ಲಾ ಕೋಟಿ ನಮಸ್ಕಾರಗಳು ಎಂದು ಜನರಿಗೆ ಧನ್ಯವಾದ ಹೇಳಿದರು.
ಇದನ್ನೂ ಓದಿ | Modi in Karnataka: ಕಾರ್ಯಕರ್ತನ ಕಪಾಳಕ್ಕೇ ಹೊಡೆದವರು ಜನರಿಗೆ ಗೌರವ ನೀಡುತ್ತಾರಾ?: ಸಿದ್ದು ವಿರುದ್ಧ ಮೋದಿ ವಾಗ್ದಾಳಿ
ಮೇ ತಿಂಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜೂನ್ ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಯಾಗುತ್ತದೆ. ಮತ್ತೆ 10 ಕೆಜಿ ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ಮನೆ ಯಜಮಾನಿಗೆ 2000 ರೂಪಾಯಿ ನೀಡಲಾಗುತ್ತದೆ. ಬಾಬುರಾವ್ ಚಿಂಚನಸೂರ್ ಬಹಳ ಅದೃಷ್ಟವಂತರು. ನಾನು ಮಾಡಿದ್ದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ನಾನು ಮತ್ತೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.