ಯಾದಗಿರಿ: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದೆ. ಈ ನಡುವೆ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ, ಆಯಾ ಪಕ್ಷದ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಸಹ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಬಾರಿ ಭಾರಿ ಕುತೂಹಲ ಮೂಡಿಸಿರುವ ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಪರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಪ್ರಚಾರ ನಡೆಸಿದ್ದಾರೆ. ಅಲ್ಲದೆ, ಅಪಘಾತದಲ್ಲಿ ಗಾಯಗೊಂಡು ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಬಾಬುರಾವ್ ಚಿಂಚನಸೂರ್ (Baburao Chinchansur) ಅವರು ಸ್ಟ್ರೆಚರ್‌ನಲ್ಲಿಯೇ ಸಮಾವೇಶಕ್ಕೆ ಬಂದಿದ್ದು, ಅಲ್ಲಿಂದಲೇ ಮತಯಾಚನೆ ಮಾಡಿ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಪರವಾಗಿ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಕರೆ ನೀಡಿದರು.
ಇದನ್ನೂ ಓದಿ: Karnataka Election 2023: ಪಕ್ಷಗಳ ಬಾವುಟಕ್ಕಿಂತ ಬಜರಂಗಿ ಬಾವುಟಕ್ಕೆ ಹೆಚ್ಚಿದ ಡಿಮ್ಯಾಂಡ್; ರೋಡ್ ಶೋಗಳಲ್ಲಿ ಮಿಂಚಿದ ಆಂಜನೇಯ
ಕ್ಷೇತ್ರದ ಅಭಿವೃದ್ಧಿ ಮಾಡುವೆ, ನನ್ನನ್ನು ಗೆಲ್ಲಿಸಿ: ಬಾಬುರಾವ್
ಈ ವೇಳೆ ಬಾಬುರಾವ್ ಚಿಂಚನಸೂರ್ ಮಾತನಾಡಿ, ನಾನು ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಮಾಡುತೇನೆ ಎಂದು ತಾಯಿ ಯಾನಾಗುಂದಿ ಮಾಣೀಕೇಶ್ವರಿ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಕ್ಷೇತ್ರದ ಅಭಿವೃದ್ಧಿ ಮಾಡುವ ಸಲುವಾಗಿಯೇ ಸ್ಪರ್ಧೆ ಮಾಡುತ್ತಿದ್ದೇನೆ. ಹೀಗಾಗಿ ನೀವು ಅಭಿವೃದ್ಧಿ ಪರವಾಗಿ ಮತ ಚಲಾಯಿಸಿ ಎಂದು ಕರೆ ನೀಡಿದರು.
ಬಾಬುರಾವ್ ಚಿಂಚನಸೂರ್ ಪತ್ನಿ ಅಮರೇಶ್ವರಿ ಚಿಂಚನಸೂರ್ ಮಾತನಾಡಿ, ತಮ್ಮ ಪತಿಯನ್ನು ನೀವು ಗೆಲ್ಲಿಸಿಕೊಡಿ, ಅವರು ನಿಮಗಾಗಿಯೇ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಅವರನ್ನು ಗೆಲ್ಲಿಸುವ ಹೊಣೆ ಕ್ಷೇತ್ರದ ಮತದಾರರದ್ದಾಗಿದೆ ಎಂದು ಹೇಳಿದ ಅವರು, ಕಣ್ಣೀರು ಹಾಕಿ ಸೆರಗೊಡ್ಡಿ ಮತ ಕೇಳಿದರು.
ಸ್ಟ್ರೆಚರ್‌ನಲ್ಲಿಯೇ ಬಂದ ಬಾಬುರಾವ್ ಚಿಂಚನಸೂರ್
ರಸ್ತೆ ಅಪಘಾತದಲ್ಲಿ ಗಾಯವಾಗಿ ಪ್ರಚಾರ ಮಾಡಲು ಸಾಧ್ಯವಾಗದೆ ಕಲಬುರಗಿಯ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಬಾಬುರಾವ್ ಚಿಂಚನಸೂರ್ ಅವರನ್ನು ಕಲಬುರಗಿಯಿಂದ ಆಂಬ್ಯುಲೆನ್ಸ್ ಮೂಲಕ ಗುರುಮಠಕಲ್‌ಗೆ ಕರೆದುಕೊಂಡು ಬರಲಾಗಿತ್ತು. ಸ್ಟ್ರೆಚರ್‌ನಲ್ಲಿಯೇ ವೇದಿಕೆ ಮೇಲೆ ಚಿಂಚನಸೂರ್ ಅವರನ್ನು ಕೂರಿಸಲಾಗಿತ್ತು. ಚಿಂಚನಸೂರ್ ನೋಡಲು ಜನಸಾಗರ ಹರಿದು ಬಂದಿತ್ತು. ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸಪಟ್ಟರು.
ಖರ್ಗೆಗೆ ರಾಜಕೀಯ ನೆಲೆ ಕೊಟ್ಟ ಕ್ಷೇತ್ರ
ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರವು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜಕೀಯ ನೆಲೆಕೊಟ್ಟ ಕ್ಷೇತ್ರವಾಗಿದೆ. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಠಕಲ್ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವವನ್ನು ಹೊಂದಿದ್ದಾರೆ. ಹೀಗಾಗಿ ತಮ್ಮ ರಾಜಕೀಯ ಶಿಷ್ಯ, ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಪರವಾಗಿ ಬಿರುಸಿನ ಪ್ರಚಾರ ಮಾಡಿದರು.