ಬೆಂಗಳೂರು: ಮಾಜಿ ಸಚಿವ ಹಾಗೂ ಮಾಜಿ ಕಾಂಗ್ರೆಸಿಗ ಬಾಬುರಾವ್ ಚಿಂಚನಸೂರ್ ಅವರಿಗೆ ಬಿಜೆಪಿ ವಿಧಾನ ಪರಿಷತ್ ಟಿಕೆಟ್ ಘೋಷಣೆ ಮಾಡಿದೆ. ವಿಧಾನಸಭೆಯಿಂದ ಆಯ್ಕೆಯಾಗುವ ಈ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶೀ ಅರುಣ್ ಸಿಂಗ್ ಘೋಷಣೆ ಮಾಡಿದ್ದಾರೆ.
ಐದು ಬಾರಿ ಶಾಸಕರಾಗಿ ಚಿಂಚನಸೂರು ಅವರು ಆಯ್ಕೆಯಾಗಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಬಂದರು ಸಚಿವರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಬೆಳವಣಿಗೆ ಸಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿಗೆ ಬಂದಿದ್ದರು. 2019ರಲ್ಲಿ ಖರ್ಗೆ ಅವರನ್ನು ಸೋಲಿಸಲು ಉಳಿದೆಲ್ಲರ ಜತೆಗೆ ಪ್ರಯತ್ನ ಮಾಡಿದ್ದರು. ಬಿಜೆಪಿಗೆ ಬಂದ ಬಳಿಕ ಕಲಬುರಗಿ ಮತ್ತು ಯಾದಗಿರಿ ಭಾಗದಲ್ಲಿ ಇರುವ ಕೋಳಿ ಸಮುದಾಯ ಸಂಘಟನೆಯಲ್ಲಿ ತೊಡಗಿದ್ದರು. ಈ ಹಿಂದೆ ಬಿಜೆಪಿಯಿಂದ ವಿಧಾನ ಪರಿಷತ್ ಟಿಕೆಟ್ ಪ್ರಯತ್ನ ಮಾಡಿದ್ದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿ.ಎಂ. ಇಬ್ರಾಹಿಂ ನಿರೀಕ್ಷೆ ಹೊಂದಿದ್ದರು. ಆದರೆ ಬಿ.ಕೆ. ಹರಿಪ್ರಸಾದ್ ಅವರಿಗೆ ಆ ಸ್ಥಾನ ನೀಡಿದ್ದರಿಂದ ಬೇಸರಗೊಂಡು ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆಯಾಗಿ ಅಲ್ಲಿ ರಾಜ್ಯ ಅಧ್ಯಕ್ಷರಾಗಿ ನೇಮಕವಾದರು.
ಈ ಸ್ಥಾನದ ಅವಧಿ ಈಗಾಗಲೆ ನಾಲ್ಕು ವರ್ಷ ಪೂರ್ಣಗೊಂಡಿದ್ದು, ಇನ್ನೆರಡು ವರ್ಷ ಇದೆ. 2024ರವರೆಗೆ ಇರುವ ಸ್ಥಾನವನ್ನು ವಿಧಾನ ಸಭೆಯ ಸದಸ್ಯರ ಮತದಿಂದ ಭರ್ತಿ ಮಾಡಲಾಗುತ್ತದೆ. ಸದ್ಯ ಬಿಜೆಪಿ ಬಹುಮತ ಹೊಂದಿರುವುದರಿಂದ ಅದೇ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಅಭ್ಯರ್ಥಿಯನ್ನು ಹಾಕುವುದಿಲ್ಲ. ಅವಿರೋಧವಾಗಿ ಆಯ್ಕೆ ಮಾಡುವುದು ಖಚಿತವಾದ್ಧರಿಂದ, ಚಿಂಚನಸೂರು ಇದೀಗ ಮತ್ತೊಮ್ಮೆ ವಿಧಾನಮಂಡಲ ಪ್ರವೇಶ ಮಾಡುವುದೂ ಖಾತ್ರಿಯಾದಂತಾಗಿದೆ.
ಇದನ್ನೂ ಓದಿ | ವಿಧಾನ ಪರಿಷತ್ ಸೋಲು ಬಿಜೆಪಿಗೆ ಎಚ್ಚರಿಕೆಯ ಡೋಸ್!