ಬೆಂಗಳೂರು: ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿಯ ಬಾಬುರಾವ್ ಚಿಂಚನಸೂರು ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ (Karnataka Election) ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಚಿಂಚನಸೂರ್, ತಮಗೆ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಬಾಬುರಾವ್ ಚಿಂಚನಸೂರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನನಗೆ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಸಪ್ತ ಖಾತೆ ಕೊಟ್ಟಿದ್ದರು. ಅವರ ಋಣ ನನ್ನ ಮೇಲಿದೆ. ಹೀಗಾಗಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಜತೆಗಿನ ಭಿನ್ನಾಭಿಪ್ರಾಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನನ್ನದು ಹಾಗೂ ಖರ್ಗೆ ಅವರದ್ದು ತಂದೆ-ಮಗನ ಸಂಬಂಧದಂತೆ. ಮಕ್ಕಳು ಜಗಳ ಮಾಡಿ ಹೋದರೆ ಮನೆಗೆ ಬರುವುದೇ ಇಲ್ಲವೇ? ನಮ್ಮ ಭಿನ್ನಾಭಿಪ್ರಾಯ ಮುಗಿದ ಅಧ್ಯಾಯ, ಮಾತು ಬೆಳ್ಳಿ-ಮೌನ ಬಂಗಾರ. ಹಾಗಾಗಿ ಖರ್ಗೆ ಅವರು ಈ ಬಗ್ಗೆ ಏನೂ ಮಾತನಾಡಿಲ್ಲ, ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಖರ್ಗೆ ವಿರುದ್ಧ ತೊಡೆ ತಟ್ಟಿದ್ದರ ಬಗ್ಗೆ ಉತ್ತರ ನೀಡಲು ನಿರಾಕರಿಸಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇವತ್ತು ಬಿಡುಗಡೆ ಮಾಡಬೇಕಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಹಬ್ಬಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ. ಅವರ ಜತೆ ಚರ್ಚಿಸಿ ಇನ್ನೆರಡು ಮೂರು ದಿನಗಳಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | Karnataka Elections : ಯುಗಾದಿಗೆ ಬಿಡುಗಡೆ ಆಗದ ಕಾಂಗ್ರೆಸ್ ಪಟ್ಟಿ, ಇನ್ನೂ 2-3 ದಿನದಲ್ಲಿ ರಿಲೀಸ್ ಅಂದ್ರು ಡಿಕೆಶಿ
ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೇಳುವವರ ಸಂಖ್ಯೆ ದೊಡ್ಡದಿದೆ. ಎಲ್ಲರಿಗೂ ಟಿಕೆಟ್ ನೀಡಲು ಆಗಲ್ಲ. ಯಾರು ಪಕ್ಷಕ್ಕಾಗಿ ದುಡಿಯುತ್ತಾರೋ ಅವರಿಗೆ ಉತ್ತಮ ಸ್ಥಾನಮಾನ ನೀಡುತ್ತೇವೆ. 400 ನಿಗಮ ಮಂಡಳಿ ಇವೆ, ವಿಧಾನ ಪರಿಷತ್, ರಾಜ್ಯಸಭಾ ಸ್ಥಾನಗಳು ಇವೆ. ಅವುಗಳಿಗೆ ನಾಮನಿರ್ದೇಶನ ಮಾಡಲು ಅವಕಾಶ ಇದೆ. ಆಕಾಂಕ್ಷಿಗಳಿಗೆ ಅವುಗಳನ್ನೂ ಹಂಚಿಕೆ ಮಾಡುತ್ತೇವೆ ಎಂದು ಹೇಳಿದರು.
ನಾವು ನುಡಿದಂತೆ ನಡೆಯುವ ಭರವಸೆಯನ್ನು ಕೊಟ್ಟಿದ್ದೇವೆ. ನಮಗೆ ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿದೆ. ಪರಿಷತ್ ಸದಸ್ಯ ಪುಟ್ಟಣ್ಣ ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಈಗ ಪರಿಷತ್ ಸದಸ್ಯರಾಗಿದ್ದ ಮತ್ತೊಬ್ಬ ನಾಯಕ ಬಾಬುರಾವ್ ಚಿಂಚನಸೂರು ಕಾಂಗ್ರೆಸ್ ಸೇರಿದ್ದಾರೆ. ಅವರು ಮಲ್ಲಿಕಾರ್ಜುನ ಖರ್ಗೆ ಜತೆಗೆ ಇದ್ದವರು ಇವರ ಶಕ್ತಿ ಗಮನಿಸಿ ಬಿಜೆಪಿಯವರು ಕರೆದುಕೊಂಡು ಹೋಗಿದ್ದರು. ಹೊಸ ವರ್ಷ ಆರಂಭ ಆಗುವ ಹಿನ್ನೆಲೆಯಲ್ಲಿ ಬಾಬುರಾವ್ ಚಿಂಚನಸೂರು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ, ಜೆಡಿಎಸ್ ವ್ಯಂಗ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು 15 ಲಕ್ಷ ರೂಪಾಯಿ ಅಕೌಂಟ್‌ಗೆ ಹಾಕುತ್ತೇವೆ ಎಂದಿದ್ದರು, ಅದು ಏನಾಯಿತು. ನಾವು ಆ ರೀತಿ ಮಾಡಲ್ಲ. ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು, ಏನೂ ಪ್ರಯೋಜನವಾಗಿಲ್ಲ. 10 ಗಂಟೆ ಕರೆಂಟ್ ಕೊಡುತ್ತೇವೆ ಎಂದಿದ್ದರು, ಯಾವ ವಿಷಯದಲ್ಲೂ ಅವರು ನುಡಿದಂತೆ ನಡೆದಿಲ್ಲ. ನಾವು ನುಡಿದಂತೆ ನಡೆಯುತ್ತೇವೆ, ಎಲ್ಲ ಆರ್ಥಿಕ ತಜ್ಞರ ಜತೆ ಚರ್ಚಿಸಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ನಾವು ಮಾತು ಉಳಿಸಿಕೊಳ್ಳದಿದ್ದರೆ ಜನರ ಬಳಿ ಮತ ಕೇಳಲು ಬರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ | Panchamasali Reservation : ಮಾ. 24ರಂದು ಪಂಚಮಸಾಲಿ ಸಮುದಾಯಕ್ಕೆ GOOD NEWS ಕೊಡ್ತಾರಂತೆ ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯ ಕ್ಷೇತ್ರದ ಬಗ್ಗೆ ಅವರೇ ನಿರ್ಧಾರ ಮಾಡುತ್ತಾರೆ
ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯಗೆ ಕುಮಾರಸ್ವಾಮಿ ಅವರ ಪ್ರೀತಿ ಅವಶ್ಯಕತೆ ಇಲ್ಲ. ಕೋಲಾರದಲ್ಲಿ ಸ್ಪರ್ಧೆ ಎಂದಾಗ ಏನೆಲ್ಲ ಮಾತನಾಡಿದರು ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಹಲವು ಕ್ಷೇತ್ರಗಳ ಜನರು ಸಿದ್ದರಾಮಯ್ಯ ಅವರನ್ನು ಕರೆಯುತ್ತಿದ್ದಾರೆ. ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಎಲ್ಲಿ ನಿಲ್ಲಬೇಕು ಎಂದು ಸಿದ್ದರಾಮಯ್ಯ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.