ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಸೋಮವಾರ ರಾಜೀನಾಮೆ (Karnataka Election) ನೀಡಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಚಿಂಚನಸೂರ್ ಅವರು ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಎಂಎಲ್‌ಸಿ ಆಗಿರುವ ಕಾರಣ ಎಂಎಲ್‌ಎ ಟಿಕೆಟ್ ಅನ್ನು ಬಿಜೆಪಿ ವರಿಷ್ಠರು ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಇವರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಕೆಲ ತಿಂಗಳ ಹಿಂದೆಯೇ ಬಿಜೆಪಿ ಬಿಡಲು ಚಿಂಚನಸೂರ್ ಅವರು ಯೋಚಿಸಿದ್ದರು. ಫೆ.13 ರಂದು ಚಿಂಚನಸೂರ್ ಜತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತುಕತೆ ನಡೆಸಿ ಪಕ್ಷದಲ್ಲೇ ಇರುವಂತೆ ಮನವೊಲಿಸಿದ್ದರು. ಬಳಿಕ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಯನ್ನು ಸೋಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಚಿಂಚನಸೂರ್ ತೊಡೆ ತಟ್ಟಿದ್ದರು.
ವಿಧಾನ ಪರಿಷತ್ ಸದಸ್ಯ ಆಗಿರುವವರಿಗೆ ವಿಧಾನಸಭೆ ಟಿಕೆಟ್ ಇಲ್ಲ ಎಂದು ಬಿಜೆಪಿ ಹೈಕಮಾಂಡ್‌ನಿಂದ ಮಹತ್ವದ ಸಂದೇಶ ನೀಡಿರುವ ಹಿನ್ನೆಲೆಯಲ್ಲಿ ಇವರು ಬಿಜೆಪಿ ತೊರೆದು ಕಾಂಗ್ರೆಸ್ ಕದ ತಟ್ಟಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಗುರುಮಠಕಲ್‌ನಲ್ಲಿ ಸತತ ಎರಡು ಬಾರಿ ಗೆಲವು ಸಾಧಿಸಿದ್ದ ಇವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಸೇರಿದ್ದರು.