ಚಾಮರಾಜನಗರ: ಕಿತ್ತು ತಿನ್ನುವ ಬಡತನ, ಹೆಂಡತಿಗೆ ಕಾಯಿಲೆ ಹಾಗೂ ಮೈತುಂಬ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ೨೫ ದಿನದ ಹಸುಗೂಸನ್ನೇ ಮಾರಾಟ (Baby Sale) ಮಾಡಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಲಿಂಗತ್ವ ಅಲ್ಪಸಂಖ್ಯಾತರ ನೆರೆಹಾವಳಿ ಸ್ಥಿತಿಗತಿ ಅಧ್ಯಯನಕ್ಕೆಂದು ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ಅಧ್ಯಯನಕ್ಕೆಂದು ಭೇಟಿ ಕೊಟ್ಟಾಗ ಇಡಿ ವೃತ್ತಾಂತ ಗೊತ್ತಾಗಿದೆ.
ಅತಿವೃಷ್ಟಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಅಧ್ಯಯನ ಮಾಡಲೆಂದು ಲಿಂಗತ್ವ ಅಲ್ಪಸಂಖ್ಯಾತರಾದ ದೀಪಾ ಬುದ್ದೆ ಎಂಬುವರು ನಗರದ ನ್ಯಾಯಾಲಯದ ರಸ್ತೆಯ ಬೀದಿಯೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ, 25 ದಿನಗಳ ಹಸುಗೂಸನ್ನು 50 ಸಾವಿರ ರೂಪಾಯಿಗೆ ಹೋಟೆಲ್ ಕಾರ್ಮಿಕ ಬಸವ ಎಂಬಾತ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಆಗ ದೀಪಾ ಅವರು ನಾಗವೇಣಿಯನ್ನು ಭೇಟಿಯಾಗಿ ವಿಚಾರಿಸಿದಾಗ, ಚಾಮರಾಜನಗರದ ಗಾಳೀಪುರ ಮೂಲದ ವ್ಯಕ್ತಿಯೊಬ್ಬನ ಮೂಲಕ 50 ಸಾವಿರ ರೂಪಾಯಿಗೆ ಮಾರಾಟ ಮಾಡಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡಿದ್ದಾಗಿಯೂ, ತನಗೆ ಮಗು ಬೇಕು ಎಂಬುದಾಗಿಯೂ ಹೇಳಿದ್ದಾಳೆ ಎಂದು ಹೇಳಲಾಗಿದೆ.
ತಕ್ಷಣವೇ ಜಾಗೃತರಾದ ದೀಪಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೂ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ಪತ್ನಿಯ ವಿರೋಧದ ನಡುವೆಯೂ ಮಾರಾಟ
ಮಗು ಮಾರಾಟ ಮಾಡುವುದಕ್ಕೆ ಬಸವನ ಪತ್ನಿ ನಾಗವೇಣಿ ತೀವ್ರವಾಗಿ ವಿರೋಧ ಮಾಡಿದ್ದಾರೆ. ಆದರೆ, ವಿಪರೀತ ಸಾಲ ಮಾಡಿಕೊಂಡಿದ್ದ ಬಸವ, “ಮಗು ಮಾರಾಟ ಮಾಡಲು ನೀನು ಒಪ್ಪದಿದ್ದರೆ ಎಲರನ್ನೂ ಬಿಟ್ಟು ಎಲ್ಲಾದರೂ ದೂರ ಹೋಗಿಬಿಡುತ್ತೇನೆ” ಎಂದು ಹೆದರಿಸಿದ್ದಾನೆ. ಗಂಡನ ಬೆದರಿಕೆಗೆ ಭಯಪಟ್ಟ ನಾಗವೇಣಿ ಮಗುವನ್ನು ಮಾರಾಟ ಮಾಡಲು ಒಪ್ಪಿದ್ದಾಳೆ ಎಂಬ ವಿಚಾರವು ತನಿಖೆ ವೇಳೆ ತಿಳಿದುಬಂದಿದೆ.
ಈ ಬಗ್ಗೆ ಬಸವನನ್ನು ಪೊಲೀಸರು ವಿಚಾರಣೆ ನಡೆಸಿದಾಗ, “ಮನೆಯಲ್ಲಿ ಬಡತನವಿದ್ದು, ಪತ್ನಿಗೆ ಹೃದಯ ಕಾಯಿಲೆ ಇದೆ. ಈ ಕಾರಣಕ್ಕಾಗಿ ಮೈತುಂಬ ಸಾಲವಾಗಿತ್ತು. ಸಾಲ ತೀರಿಸಲು ಮಗು ಮಾರಾಟ ಮಾಡಿದ್ದೇನೆ” ಎಂದು ಕಾರ್ಮಿಕ ಬಸವ ಕಾರಣ ನೀಡಿದ್ದಾನೆ.
ಪ್ರಸ್ತುತ ಬಸವನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ತಾಯಿ ನಾಗವೇಣಿ ಮತ್ತು ಆಕೆಯ ದೊಡ್ಡ ಮಗನನ್ನು ಸ್ವಾಧಾರ ಕೇಂದ್ರಕ್ಕೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮಾಡುವುದಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕುಮಾರ್ ಮಾಹಿತಿ ನೀಡಿದ್ದಾರೆ.
ಬಸವನ ವಿಚಾರಣೆ ನಡೆಸುತ್ತಿರುವ ಪೊಲೀಸರು, ಆತ ನೀಡಿದ ಮಾಹಿತಿ ಮೇಲೆ ಮಗು ಮಾರಾಟ ಮಾಡಲು ಸಹಾಯ ಮಾಡಿದ ಹಾಗೂ ಮಗುವನ್ನು ಖರೀದಿ ಮಾಡಿದವರ ಪತ್ತೆಗೆ ಬಲೆಬೀಸಿದ್ದಾರೆ.
ಇದನ್ನೂ ಓದಿ | ರೈಲು ನಿಲ್ದಾಣದಲ್ಲಿ ಕಳ್ಳತನವಾಗಿದ್ದ ಮಗು ಬಿಜೆಪಿ ನಾಯಕಿ ಮನೆಯಲ್ಲಿ ಪತ್ತೆ!