Site icon Vistara News

Accident News : ದ್ವಾರಬಾಗಿಲಿನ ಕಲ್ಲು ಬಿದ್ದು ಮಹಿಳೆ ಸಾವು; ನೀರಿನಲ್ಲಿ ಕೊಚ್ಚಿ ಹೋದ ಯುವಕ

Accident Case

ಬಾಗಲಕೋಟೆ: ತರಕಾರಿ ಮಾರುತ್ತಿದ್ದ ಮಹಿಳೆ ಮೇಲೆ ದ್ವಾರಬಾಗಿಲಿನ ಮೇಲಿಂದ ಕಲ್ಲು ಕುಸಿದು (Accident News) ಬಿದ್ದಿದೆ. ಪರಿಣಾಮ ತೀವ್ರ ರಕ್ತಸ್ರಾವ ಆಗಿ ಸ್ಥಳದಲ್ಲೇ ಸುರೇಖಾ ಕಂಬಾರ (44) ಎಂಬಾಕೆ ಮೃತಪಟ್ಟಿದ್ದಾರೆ. ಬಾಗಲಕೋಟೆಯ ಆಲಗೂರ ಗ್ರಾಮದಲ್ಲಿ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಲಗೂರ ಗ್ರಾಮದ ಚಂದ್ರಾದೇವಿ ದೇವಸ್ಥಾನದ ದ್ವಾರಬಾಗಿಲಿನ ಮೇಲಿದ್ದ ಕಲ್ಲಿನ ಮೇಲೆ ಕೋತಿಯೊಂದು ಜಿಗಿದಿದೆ. ಈ ವೇಳೆ ದ್ವಾರಬಾಗಿಲಿಗೆ ತಾಗಿ ಮಹಿಳೆ ತಲೆ ಮೇಲೆ ಕಲ್ಲು ಬಿದ್ದಿದೆ. ಕಲ್ಲು ಬಿದ್ದ ರಭಸಕ್ಕೆ ಸುರೇಖಾಳ ತಲೆಯಿಂದ ರಕ್ತಸ್ರಾವವಾಗಿದ್ದು, ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಸುರೇಖ ಮೂಲತಃ ಹುನ್ನೂರು ಗ್ರಾಮದವರಾಗಿದ್ದರು. ಪ್ರತಿ ಸೋಮವಾರ ಆಲಗೂರು ಗ್ರಾಮದಲ್ಲಿ ನಡೆಯುವ ಸಂತೆಯಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಮಾಡುತ್ತಿದ್ದರು. ಸದ್ಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಮಖಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murugha mutt : ಮುರುಘಾ ಮಠದಲ್ಲಿ ಕಳುವಾಗಿದ್ದ ಬೆಳ್ಳಿ ಮೂರ್ತಿ ಪತ್ತೆ; ಗೋಣಿ ಚೀಲದಲ್ಲಿ ತಂದಿಟ್ಟು ಕಾಲ್ಕಿತ್ತ ಕಳ್ಳರು!

Accident News

ಸರಣಿ ಅಪಘಾತಕ್ಕೆ ವ್ಯಕ್ತಿ ಬಲಿ

ನೈಸ್ ರಸ್ತೆಯಲ್ಲಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರು ಎಲೆಕ್ಟ್ರಾನಿಕ್ಸ್ ಸಿಟಿ ಟೋಲ್ ಸಮೀಪ ಸೋಮವಾರ 9 ಗಂಟೆ ಸುಮಾರಿಗೆ ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂದೆ ಬರುತ್ತಿದ್ದ ಕಾರು ಕೂಡ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟರೆ, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಣಿಗಲ್ ಮೂಲದ ದೇವರಾಜ್ (42) ಮೃತ ದುರ್ದೈವಿ. Elins ಕಂಪನಿಯ ಉದ್ಯೋಗಿಯಾದ ದೇವರಾಜ್, ಮಿನಿಬಸ್‌ನಲ್ಲಿ ಚಾಲಕನ ಪಕ್ಕ ಕುಳಿತಿದ್ದರು. ಗೊರಗುಂಟೆ ಪಾಳ್ಯದಿಂದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ಬರುತ್ತಿದ್ದ ಬಸ್, ನೈಸ್ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಗುದ್ದಿದೆ. ಮಿನಿಬಸ್ ಹಿಂಭಾಗ ಬರುತ್ತಿದ್ದ ಎರಡು ಕಾರುಗಳು ಡಿಕ್ಕಿ ಹೊಡೆದಿದೆ. ಮಿನಿ ಬಸ್ ನಲ್ಲಿದ್ದ ಓರ್ವ ಸಾವನ್ನಪ್ಪಿದ್ರೆ, ಐವರಿಗೆ ಗಂಭೀರ ಗಾಯವಾಗಿದೆ.

Accident News

ಹರಿಯುವ ನೀರಿನಲ್ಲಿ ಕೊಚ್ಚಿ ಹೋದ ಯುವಕ

ಪ್ರವಾಹದ ನೀರಲ್ಲಿ ಈಜುವ ಸಾಹಸಕ್ಕೆ ಹೋದ ಯುವಕನೊರ್ವ ಕೊಚ್ಚಿ ಹೋಗಿದ್ದಾನೆ. ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಖೇಡ ತಾಲೂಕಿನ ಶೀಲ್ಡ ಡ್ಯಾಂನಲ್ಲಿ ಘಟನೆ ನಡೆದಿದೆ. ಸ್ಥಳದಲ್ಲೇ ಹತ್ತಾರು ಜನರು ಇದ್ದರೂ ನೀರಿನ ಸೆಳತಕ್ಕೆ ರಕ್ಷಣೆ ಮಾಡಲು ಆಗಿಲ್ಲ. ಸ್ಥಳೀಯರು ಮತ್ತು ಎನ್‌ಡಿಆರ್‌ಎಫ್‌ ತಂಡದಿಂದ ಯುವಕನ ಹುಡುಕಾಟ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ರತ್ನಾಗಿರಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದ ಆತಂಕ ಹೆಚ್ಚಾಗಿದೆ. ಮೈದುಂಬಿರುವ ಹಳ್ಳ ಕೊಳ್ಳದಲ್ಲಿ ಯುವಕರು ಹುಚ್ಚಾಟ ತೋರಿ ಪ್ರಾಣಕಳೆದುಕೊಳ್ಳುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version