Site icon Vistara News

ರೈತ ಹೂಡಿದ ಹಣ ಆ ಎತ್ತಿನಿಂದ 6 ವರ್ಷದಲ್ಲಿ 25 ಪಟ್ಟು ಹೆಚ್ಚಳವಾಯಿತು!

ಭಲೆ ಬಸವ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಶಿವಲಿಂಗಪ್ಪ ಹಾಗೂ ಮಾಯಪ್ಪ ಸಹೋದರರು ಸಾಕಿದ್ದ ಎತ್ತು ₹11.50 ಲಕ್ಷಕ್ಕೆ ಮಾರಾಟವಾಗಿ, ಭಲೇ ಬಸವ ಎಂದು ಹೆಸರು ಗಿಟ್ಟಿಸಿಕೊಂಡು ದಾಖಲೆ ಬರೆದಿದೆ.

ಈ ಎತ್ತು ತೆರೆದ ಬಂಡಿ ಎತ್ತಿನ‌ ಸ್ಪರ್ಧೆಯಲ್ಲಿ ಈ ಹಿಂದೆ ಜಯಗಳಿಸಿತ್ತು. ಈ ಎತ್ತಿನ ಹೆಸರು ಸೂರ್ಯ. ಇದಕ್ಕೆ ಈಗ ಒಂಭತ್ತು ವರ್ಷ.

ಇದನ್ನೂ ಓದಿ | ಎಲ್ಲ ಕಡೆ ಬಿಸಿಲು, ಆ ಮರದ ಕೆಳಗೆ ಮಾತ್ರ ಮಳೆ ಹನಿ: ಮಡಿಕೇರಿಯಲ್ಲಿ ಏನೀ ವಿಸ್ಮಯ?

ಶಿವಲಿಂಗಪ್ಪ ಮತ್ತು ಮಾಯಪ್ಪ ಸಹೋದರರಿಬ್ಬರು ಸೇರಿ, ವಿಜಯಪುರ ಜಿಲ್ಲೆ ಹೊರ್ತಿ ಜಾತ್ರೆಯಲ್ಲಿ ಮೂರು ವರ್ಷದ ಸೂರ್ಯನನ್ನು, 6 ವರ್ಷಗಳ ಹಿಂದೆ ಖರೀದಿಸಿದ್ದರು. ಆಗ ಇದಕ್ಕೆ ಕೊಟ್ಟ ಬೆಲೆ ₹45 ಸಾವಿರ. ಈಗ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಇಟ್ನಳ್ಳಿ ಗ್ರಾಮದ ಸದಾಶಿವ ಡಾಂಗೆ ಎನ್ನುವವರು ಸೂರ್ಯನನ್ನು ಖರೀದಿಸಿದ್ದಾರೆ.

ಸೂರ್ಯ ಕಳೆದ ಮೂರು ವರ್ಷಗಳಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತೆರೆದ ಬಂಡಿ ಜಗ್ಗುವ ಪ್ರತಿ ಸ್ಪರ್ಧೆಯಲ್ಲೂ ಭಾಗವಹಿಸಿದೆ. ಭಾಗವಹಿಸಿದ ಪ್ರತಿ ಸ್ಪರ್ಧೆಯಲ್ಲೂ ಗೆಲ್ಲುತ್ತಲೇ ಬಂದಿದೆ. ಮೂರು ವರ್ಷಗಳಲ್ಲಿ ಅಂದಾಜು ₹8 ಲಕ್ಷ ನಗದು, ಬೈಕ್, ಚಿನ್ನ, ಬೆಳ್ಳಿ,ಯನ್ನು ಈ ಎತ್ತು ಗೆದ್ದು ತಂದಿದೆ.

ಮಂಗಳವಾರ ಸಂಜೆ ಚಿಮ್ಮಡ ಗ್ರಾಮದಲ್ಲಿ ಸಕಲ ವಾದ್ಯವೈಭವಗಳೊಂದಿಗೆ ಮೆರವಣಿಗೆ ಮಾಡಿ, ಗ್ರಾಮದ ಹಿರಿಯರು, ಯುವಕರು, ಸ್ವಾಮೀಜಿ ಎಲ್ಲರೂ ಎತ್ತಿಗೆ ಗೌರವ ನೀಡಿದರು. ಅದ್ಧೂರಿ ಮೆರವಣಿಗೆ ಮಾಡಿ ಪ್ರೀತಿಯ ಸೂರ್ಯನ‌ನ್ನು ಗ್ರಾಮಸ್ಥರು ಬೀಳ್ಕೊಟ್ಟರು.

ಕಿಲಾರಿ ಎತ್ತಿಗೆ ಜೋಡಿ

ಈಗ ಎತ್ತು ಖರೀದಿ ಮಾಡಿರುವ ಸದಾಶಿವ ಅವರ ಬಳಿ ₹9 ಲಕ್ಷ, ₹10 ಲಕ್ಷ, ₹7 ಲಕ್ಷದ ಹೋರಿಗಳಿವೆ. ಈ ಮೊದಲು ಸಹ ಸೂರ್ಯ, ಮತ್ತೊಂದು ಎತ್ತಿನ ಜತೆಗೆ ಅನೇಕ ಸ್ಪರ್ಧೆಗಳಲ್ಲಿ ಜೋಡೆತ್ತಾಗಿ ಗೆದ್ದು ಬಂದಿದೆ. ಅದಕ್ಕಾಗಿ ಸೂರ್ಯ ಹಾಗೂ ತಮ್ಮ ಕಿಲಾರಿ ಎತ್ತನ್ನು ಜೋಡಿಯಾಗಿ ಸ್ಪರ್ಧೆಗೆ ಬಿಡುವ ಹುಮ್ಮಸ್ಸು ಹೊಂದಿದ್ದಾರೆ ಸದಾಶಿವ. ಹೀಗಾಗಿಯೇ ಸದಾಶಿವ ಅವರು ಸೂರ್ಯನನ್ನು ₹11.50 ಲಕ್ಷ ಕೊಟ್ಟು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: ಮೊಸಳೆಗಳಿಗೂ ಅಂಜದೆ ಈಜಿಕೊಂಡೇ ಭಾರತಕ್ಕೆ ಬಂದು ಪ್ರಿಯತಮನ ತೆಕ್ಕೆ ಸೇರಿದ ಬಾಂಗ್ಲಾ ಯುವತಿ

Exit mobile version