ಬೆಂಗಳೂರು/ಉಡುಪಿ: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಎಂಬವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ (BJP Ticket Fraud) ಕೊಡಿಸುವುದಾಗಿ ಐದು ಕೋಟಿ ರೂ. ವಂಚಿಸಿದ ಪ್ರಕರಣದ ಪ್ರಧಾನ ಆರೋಪಿ ಚೈತ್ರಾ ಕುಂದಾಪುರ (Chaitra Kundapura) ತಾನು ಪಡೆದ ಹಣದ ಸಾಕಷ್ಟು ವ್ಯವಹಾರ ನಡೆಸಿದ್ದಳು. ಅದರಲ್ಲಿ ಒಂದು 28 ಲಕ್ಷ ರೂ. ಮೌಲ್ಯದ ಕಿಯಾ ಕಾರು (KIA Car worth 28 Lakhs) ಖರೀದಿ. ಈ ಕಾರಿಗೆ 12 ಲಕ್ಷ ರೂ. ಅಡ್ವಾನ್ಸ್ ಕೊಟ್ಟು ಖರೀದಿ ಮಾಡಿದ್ದ ಚೈತ್ರಾ ಬಳಿಕ ಬಂಧನಕ್ಕೆ ಒಳಗಾಗಿದ್ದಳು. ಆದರೆ, ತನ್ನ ಕಾರು ಸಿಕ್ಕಿಬೀಳಬಾರದು ಎಂದು ಭಾರಿ ತಂತ್ರ ಮಾಡಿದ್ದ ಆಕೆಯ ತಂತ್ರಗಳು ಫಲಿಸಿಲ್ಲ. ಕಾರು ಈಗ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ (Car found in Mudhola) ಪತ್ತೆಯಾಗಿದೆ. ಆದರೆ, ಈ ಕಾರು ಮುಧೋಳಕ್ಕೆ ಹೋಗಿದ್ದು ಹೇಗೆ ಎಂಬುದು ಇಂಟ್ರೆಸ್ಟಿಂಗ್ ಸ್ಟೋರಿ.
ಚೈತ್ರಾ ಕುಂದಾಪುರ ಉದ್ಯಮಿ ಗೋವಿಂದ ಪೂಜಾರಿ ಕೈಯಿಂದ ಪೀಕಿದ ಮೊತ್ತ 3.5 ಕೋಟಿ ರೂ. ಉಳಿದ 1.5 ಕೋಟಿ ರೂ. ಪಡೆದ್ದು ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲ ಶ್ರೀ ಸ್ವಾಮೀಜಿಯವರು. ಹೀಗೆ ಪಡೆದ ಹಣದಲ್ಲಿ ಆಕೆ 1.8 ಕೋಟಿ ರೂ.ಯನ್ನು ಠೇವಣಿ ಇಟ್ಟಿದ್ದರೆ, ಸ್ವಲ್ಪ ಚಿನ್ನಾಭರಣ ಖರೀದಿ, ಉಳಿದವರಿಗೆ ಹಂಚಿಕೆ, ಗೆಳೆಯ ಶ್ರೀಕಾಂತನ ಮನೆ ಕಟ್ಟಲು ಕೊಟ್ಟಿದ್ದು ಸೇರಿ ಒಂದಷ್ಟು ಖರ್ಚು ಮಾಡಿದ್ದಳು. ಕೈಯಲ್ಲಿ ದುಡ್ಡಿರುವಾಗ ಐಷಾರಾಮಿ ಕಾರಿನ ಕನಸು ಚಿಗುರಿದೆ. ಆಕೆ ಆಯ್ಕೆ ಮಾಡಿಕೊಂಡಿದ್ದು ಸುಮಾರು 28 ಲಕ್ಷ ಮೌಲ್ಯದ ಕಿಯಾ ಕಾರು. ಅದಕ್ಕೆ 12 ಲಕ್ಷ ರೂ. ಅಡ್ವಾನ್ಸ್ ಕೊಟ್ಟ ಆಕೆ ಉಳಿದ ಮೊತ್ತವನ್ನು ಲೋನ್ ಮಾಡಿಸಿಕೊಂಡಿದ್ದಳು.
ಹೀಗೆ ಕಾರು ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಆಕೆಯ ಸುತ್ತ ವಂಚನೆಯ ಬಲೆ ಹೆಣೆಯಲು ಆರಂಭವಾಗಿತ್ತು. ಇದರಿಂದ ಬೆದರಿದ ಆಕೆ ಕಾರನ್ನು ಎಲ್ಲಾದರೂ ಬಚ್ಚಿಡಬೇಕು ಎಂದು ತೀರ್ಮಾನ ಮಾಡಿದಳು. ಆದರೆ ಎಲ್ಲಿಡುವುದು ಎಂದು ತೋಚಲಿಲ್ಲ. ಕೊನೆಗೆ ಎಲ್ಲಾದರೂ ಇಡೋಣ ಎಂದು ಹೊರಟಿದ್ದಾರೆ.
ಚೈತ್ರಾ ಕುಂದಾಪುರ ಮತ್ತು ಗೆಳೆಯ ಶ್ರೀಕಾಂತ್ ನಾಯಕ್ ಇಬ್ಬರೇ ಡ್ರೈವ್ ಮಾಡಿಕೊಂಡು ಹೋಗಿ ತಲುಪಿದ್ದು ಸೊಲ್ಲಾಪುರ. ಅಲ್ಲಿ ಬಸ್ ಸ್ಟಾಂಡ್ ಒಂದರ ಪಕ್ಕದಲ್ಲಿ ಕಾರನ್ನು ನಿಲ್ಲಿಸಿ ಅಲ್ಲಿಂದ ಬಸ್ ಹಿಡಿದು ಮರಳಿ ಉಡುಪಿಗೆ ಬಂದಿದ್ದಾರೆ. ಈ ನಡುವೆ ಅವರಿಗೆ ತಮ್ಮ ಕಾರಿನ ಸುರಕ್ಷತೆಯ ಬಗ್ಗೆ ಭಯ ಸ್ಟಾರ್ಟ್ ಆಗಿದೆ. ಆಗ ಅವರು ಸಹಾಯ ಕೇಳಿದ್ದು ಮುಧೋಳದ ಕಿರಣ್‌ನದ್ದು.
ಕಿರಣ್ ಗಣಪ್ಪಗೋಳ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಹಿಂದೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಡ್ರೈವಿಂಗ್ ಸ್ಕೂಲ್ ಇಟ್ಟುಕೊಂಡಿರುವ ಆತನಿಗೆ ಕಾರುಗಳ ಬಗ್ಗೆ ತುಂಬಾ ತಿಳುವಳಿಕೆ ಇದೆ. ಅವನಿಗೆ ಚೈತ್ರಾ ಕುಂದಾಪುರ ಚೆನ್ನಾಗಿ ಪರಿಚಯ. ಹಿಂದು ಪರ ಭಾಷಣಕಾರ್ತಿಯ ಅಭಿಮಾನಿಯಾಗಿರುವ ಆತ ಒಂದೆರಡು ಬಾರಿ ಆಕೆಯನ್ನು ಭಾಷಣಕ್ಕೆ ಕರೆಸಿಕೊಂಡಿದ್ದ.
ಇತ್ತ ಉಡುಪಿ ಕಡೆಗೆ ಬಂದ ಚೈತ್ರಾ ಮತ್ತು ಶ್ರೀಕಾಂತ್ ನಾಯಕ್ ಸೊಲ್ಲಾಪುರದ ಬಸ್ ಸ್ಟಾಂಡ್‌ನಲ್ಲಿ ಬಿಟ್ಟಿರುವ ಕಾರಿನ ಬಗ್ಗೆ ಆತಂಕ ಶುರುವಾಗಿದೆ. ಶ್ರೀಕಾಂತ್ ನಾಯಕ್ ಕಿರಣ್‌ಗೆ ಫೋನ್ ಮಾಡಿ ಈ ರೀತಿ ಕಾರು ಇಟ್ಟು ಬಂದಿದ್ದೇನೆ. ನೀನು ಹೋಗಿ ಅದನ್ನು ತಂದಿಟ್ಟುಕೋ ಎಂದು ಹೇಳಿ ಕಾರಿನ ಕೀಯನ್ನು ತಲುಪಿಸಿದ್ದಾನೆ.
ಹೀಗಾಗಿ ಸೊಲ್ಲಾಪುರದಲ್ಲಿದ್ದ KA-20 ME 7253 ನಂಬರಿನ ಈ ಕಾರನ್ನು ಮುಧೋಳದ ಮನೆಗೆ ತಂದಿಟ್ಟುಕೊಂಡಿದ್ದಾನೆ. ಇದರ ಜನ್ಮ ಜಾಲಾಡಿದ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಿರಣ್ ತನ್ನ ಸಂಬಂಧದ ವಿಚಾರವನ್ನು ಸ್ಪಷ್ಟಪಡಿಸಿದ್ದರಿಂದ ಆತನನ್ನು ಬಂಧಿಸಲಾಗಿಲ್ಲ.
ಕಿರಣ್ ಈ ರೀತಿ ಕಾರನ್ನು ತಂದಿಟ್ಟುಕೊಂಡಿದ್ದು ಸೆಪ್ಟೆಂಬರ್ 9ರಂದು. ಅಂದರೆ ಬಂಧನಕ್ಕೆ ಮೂರು ದಿನ ಮೊದಲು.
ಈಕೆಯ ಕಾರು ಇಲ್ಲಿನ ಹಿಂದು ಕಾರ್ಯಕರ್ತ ಕಿರಣ್ ಗಣಪ್ಪಗೋಳ ಎಂಬುವರ ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಕಾರನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕಿರಣ್ ಸೆ. 9ರಂದು ತನ್ನೂರಿಗೆ ತಂದಿಟ್ಟುಕೊಂಡಿದ್ದ.
ವಂಚನೆ ಪ್ರಕರಣದಲ್ಲಿ ಕಿರಣ್ ಪಾತ್ರ ಏನಾದ್ರು ಇದಿಯಾ ಎಂಬ ಮಾಹಿತಿ ಕಲೆಹಾಕ್ತಿರೋ ಸಿಸಿಬಿ ಪೊಲೀಸರು ಈಗ ಕಾರನ್ನು ಬೆಂಗಳೂರಿಗೆ ತಂದಿದ್ದಾರೆ. ಹೀಗೆ ಚೈತ್ರಾ ಕುಂದಾಪುರಳ ಹಸ್ತಗಳು ಅತ್ಯಂತ ವಿಸ್ತಾರವಾಗಿ ಚಾಚಿಕೊಂಡಿರುವುದು ಸುಳ್ಳಲ್ಲ!
ಇದನ್ನು ಓದಿ: Chaitra Kundapura : 10 ರೂಪಾಯಿ ಹರಿದ ನೋಟೇ ಕೋಡ್‌ವರ್ಡ್! ಚೈತ್ರಾಗೆ ತಲುಪಿದ್ದು ಎಷ್ಟು ಕೋಟಿ?