ಬಾಗಲಕೋಟೆ: ನಟ ರಮೇಶ್ ಅರವಿಂದ್ ನಡೆಸುತ್ತಿದ್ದ ಕನ್ನಡದ ಕೋಟ್ಯಧಿಪತಿ ಸೀಜನ್‌ನಲ್ಲಿ ಭಾಗವಹಿಸಿದ್ದ ಯುವಕ ಸಾಲ ತೀರಿಸಲಾಗದೇ ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಅಮಲಝರಿ ಗ್ರಾಮದ 27 ವರ್ಷದ ತಿಮ್ಮಣ್ಣ ಗುರಡ್ಡಿ ಎಂಬ ಯುವಕನೇ ಆತ್ಮಹತ್ಯೆ ಮಾಡಿಕೊಂಡವರು. ಅಮಲಝರಿ ಗ್ರಾಮದ ಹೊರವಲಯದಲ್ಲಿರುವ ಮುಧೋಳ ತಾಲೂಕಿನ ಮಂಟೂರು ಗ್ರಾಮ ವ್ಯಾಪ್ತಿಯ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ತಿಮ್ಮಣ್ಣ ಎಸ್ಸೆಸ್ಸೆಲ್ಸಿವರೆಗೂ ವ್ಯಾಸಂಗ ಮಾಡಿದ್ದರು. ಈ ಹಿಂದೆ ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದ ಕನ್ನಡದ ಕೊಟ್ಯಾದಿಪತಿ ಸೀಜನ್ 3 ರಲ್ಲಿ ಭಾಗವಹಿಸಿ ₹6.40 ಗೆದ್ದಿದ್ದರು.
ಇದನ್ನೂ ಓದಿ : ಮಣಿಪಾಲದ ಫರ್ನೀಚರ್ ಅಂಗಡಿಯಲ್ಲಿ ಅಗ್ನಿ ಅವಘಡ!
ಹಾಸ್ಯ, ಸಂಗೀತದ ಮೂಲಕ ಟಿಕ್‌ಟಾಕ್‌ನಲ್ಲಿ ರಂಜಿಸಿದ್ದ ತಿಮ್ಮಣ್ಣ. ಖೋ ಖೋ ಕ್ರೀಡಾಪಟು ಸಹ ಆಗಿದ್ದರು. ತಮ್ಮ ಗ್ರಾಮದ ಮಕ್ಕಳಿಗೆ ತರಬೇತಿ ಕೊಡುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆಗಾಗಿ ಮತ್ತು ಹೊಸ ಮನೆ ಕಟ್ಟಿಸುವ ಸಲುವಾಗಿ ₹16 ಲಕ್ಷ ಸಾಲ ಮಾಡಿಕೊಂಡಿದ್ದರು. ತಾನು ದುಡಿದು, ಸಾಲ ಮಾಡಿ ನಿರ್ಮಿಸಿದ್ದ ಹೊಸ ಮನೆ ಗೃಹ ಪ್ರವೇಶ ಸಹ ನಡೆಯಬೇಕಿತ್ತು. ಮನೆ ಗೃಹಪ್ರವೇಶಕ್ಕಾಗಿ ಬಬಲಾದಿ ಸ್ವಾಮೀಜಿ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಗೃಹ ಪ್ರವೇಶಕ್ಕೂ ಮುನ್ನವೇ ತಿಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರ್ಕಾರಿ ನೌಕರಿಯಲ್ಲಿದ್ದ ತಿಮ್ಮಣ್ಣಗೆ ಒಳ್ಳೆ ವೇತನ ಇತ್ತು. ನೌಕರಿ ಮೇಲೆ ₹16 ಲಕ್ಷ ಸಾಲ ಮಾಡಿ ಒಟ್ಟು ₹18 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ದಿನ ರಾತ್ರಿ 10 ಗಂಟೆಗೆ ಅಮಲಝರಿ ಗ್ರಾಮದ ಸ್ನೇಹಿತನ ಪಾನ್ ಶಾಪ್‌ಗೆ ಹೋಗಿ ಮನೆ ಗೃಹಪ್ರವೇಶದ ಬಗ್ಗೆ ಹೇಳಿದ್ದ. ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಸಹೋದ್ಯೋಗಿಗಳ ಕಿರುಕುಳ ಕಾರಣ?