ಬಾಗಲಕೋಟೆ: ಆಟವಾಡಲು ಹೋದ ಬಾಲಕಿಯೊಬ್ಬಳು ಕೃಷ್ಣಾ ನದಿ (Drowned In River) ಪಾಲಾಗಿದ್ದಾಳೆ. ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಿ ಬಾಲಕಿ ಮೃತಪಟ್ಟಿದ್ದಾಳೆ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಘಟನೆ ನಡೆದಿದೆ.
ಸಮೃದ್ಧಿ ಉರ್ಫ್ ಬಂದವ್ವ ತಿಮ್ಮಪ್ಪನವರ (5) ಮೃತ ದುರ್ದೈವಿ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ನಿನ್ನೆ ಭಾನುವಾರ ಸಂಜೆ ಘಟನೆ ನಡೆದಿದೆ.
ತಹಶೀಲ್ದಾರ ಸದಾಶಿವ ಮುಕ್ಕೋಜಿ, ಜಮಖಂಡಿ ಗ್ರಾಮೀಣ ಠಾಣೆಯ ಪಿಎಸ್‌ಐ ಎಚ್.ಎಮ್ ಹೊಸಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿ ಕೃಷ್ಣಾ ನದಿ ಹಿನ್ನೀರಿನ ಕಡೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾ ನದಿಯ ಹಿನ್ನೀರಿನಲ್ಲಿ ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಕಾರ್ಯಾಚರಣೆ ನಡೆಸಿ ಹಿನ್ನೀರಿನಿಂದ ಬಾಲಕಿ ಶವ ಹೊರತೆಗೆದಿದ್ದಾರೆ.
ಇದನ್ನೂ ಓದಿ: Road Accident : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬೈಕ್; ಚೆಲ್ಲಾಪಿಲ್ಲಿಯಾಗಿ ಬಿದ್ದ ಇಬ್ಬರು ಸಾವು
ಮಗಳ ಸಾವಿನ ನೋವಿನಲ್ಲೂ ಸಾರ್ಥಕತೆ ಮರೆದ ಪೋಷಕರು
ಮಗಳ ಸಾವಿನ ನೋವಿನಲ್ಲೂ ಪೋಷಕರು ಸಾರ್ಥಕತೆ ಮರೆದಿದ್ದಾರೆ. ಜು.23 ರಂದು ಸ್ಕೂಲ್ ಮುಗಿಸಿ ವಾಪಸ್ ಬರುವಾಗ ತುಮಕೂರಿನ ತಿಪಟೂರಿನಲ್ಲಿ ಅಪಘಾತ ಸಂಭವಿಸಿತ್ತು. ಚಂದನಾ ತುಮಕೂರು ಜಿಲ್ಲೆಯ ತಿಪಟೂರಿನ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದಳು. ತಿಪಟೂರು ನಗರದ ಹಳೇಪಾಳ್ಯದ ನಿವಾಸಿ ಚಂದನಾ (12) ರಸ್ತೆ ದಾಟುವಾಗ ಲಾರಿಯೊಂದು ಡಿಕ್ಕಿ ಹೊಡೆದಿತ್ತು.
ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಳು. ಆದರೆ ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಮಗಳ ಅಗಲಿಕೆಯ ನೋವಿನಲ್ಲೂ ಚಂದನಾ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಪೋಷಕರ ನಿರ್ಧಾರಕ್ಕೆ ಆಸ್ಪತ್ರೆ ಸಿಬ್ಬಂದಿ ಗೌರವ ಸಲ್ಲಿಸಿದ್ದು, ಚಂದನಾಳ ಅಂಗಾಂಗಗಳನ್ನು ಮೈಸೂರು ಹಾಗೂ ಬೆಂಗಳೂರಿನ 6 ಮಕ್ಕಳಿಗೆ ಜೋಡಣೆ ಮಾಡಿದ್ದಾರೆ. ಸೋಮವಾರ ಸಂಜೆ ಚಂದನಾಳ ಅಂತ್ಯಸಂಸ್ಕಾರವನ್ನು ತಿಪಟೂರಿನ ಹಳೆಪಾಳ್ಯದಲ್ಲಿ ನೆರವೇರಿಸಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ