Site icon Vistara News

Fake Intelligence Officer : ಜಾಸ್ತಿ `ಇಂಟೆಲಿಜೆಂಟ್‌’ ಆಗ್ಬೇಡಿ! ಊರವರ ಮುಂದೆ ಪೊಲೀಸ್‌ ಎಂದು ಬಿಲ್ಡಪ್‌ ಕೊಟ್ಟವ ಈಗ ಲಾಕಪ್‌ ಒಳಗೆ!

Fake Intelligence Bureau officer arrested

ಬಾಗಲಕೋಟೆ: ಊರಲ್ಲಿ ಗೌರವ ಸಿಗಬೇಕು, ನನ್ನ ನೋಡಿದರೆ ಒಂದು ಹವಾ ಇರಬೇಕೆಂದು ಯುವಕನೊರ್ವ ನಕಲಿ ಅಧಿಕಾರಿ ವೇಷ ಹಾಕಿ ಸಿಕ್ಕಿಬಿದ್ದಿದ್ದಾನೆ. ಸಂಗಮೇಶ್ ಲಕ್ಕಪ್ಪಗೋಳ (19) ಎಂಬಾತ ಇಂಟಲಿಜೆನ್ಸ್‌ ಬ್ಯೂರೋ (Fake Intelligence Officer) ಅಧಿಕಾರಿ ವೇಷ ಧರಿಸಿದವನು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿಯಲ್ಲಿ ಘಟನೆ ನಡೆದಿದೆ.

ಇಂಟಲಿಜೆನ್ಸ್ ಬ್ಯೂರೋದ ನಕಲಿ ಐಡಿ ಕಾರ್ಡ್, ಕ್ಯಾಪ್ ಹೊಂದಿದ್ದ ಸಂಗಮೇಶ್‌ ಬೈಕ್ ಮೇಲೂ ಐಬಿ ಲೋಗೋ ಹಾಕಿಕೊಂಡಿದ್ದ.‌ ಟಾಯ್ ಗನ್, ವಾಕಿಟಾಕಿ ಕೂಡಾ ಇಟ್ಟಕೊಂಡು ಪೋಸ್ ಕೊಡುತ್ತಿದ್ದ. ಸದ್ಯ ಆರೋಪಿ ಸಂಗಮೇಶನನ್ನು ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ಹಿಪ್ಪರಗಿ ಗ್ರಾಮದ ಸಂಗಮೇಶ್ ಲಕ್ಕಪ್ಪಗೋಳ ಜತೆಗೆ ಇನ್ನೂ ಎಂಟು ಮಂದಿ ಯುವಕರು ಇದ್ದಾರೆ ಎನ್ನಲಾಗಿದೆ. ಸದ್ಯ ಸಂಗಮೇಶನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ. ಇಂಟಲಿಜೆನ್ಸ್‌ ಬ್ಯೂರೋ ಹೆಸರಲಿನಲ್ಲಿ ಯಾರಿಗಾದರೂ ಮೋಸ ಮಾಡಿ, ಹಣ ಪಡೆದಿದ್ದನಾ ಎಂಬ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Traffic violation : ನಗೆಪಾಟಲಾದ ಟ್ರಾಫಿಕ್‌ ಪೊಲೀಸರು; ಹೆಲ್ಮೆಟ್ ಹಾಕಿಲ್ಲವೆಂದು ಟಿಪ್ಪರ್ ಲಾರಿ ಚಾಲಕನಿಗೆ 500 ರೂ. ದಂಡ

Rave Party: ರೇವ್‌ ಪಾರ್ಟಿ ಆರೋಪಿಗೆ ಆಂಧ್ರ ಸಿಎಂ ಜಗನ್‌ ಜೊತೆ ಸ್ನೇಹ!

ಬೆಂಗಳೂರು: ಬೆಂಗಳೂರು ಗ್ರಾಮಾಂತರದ (Bangalore rural) ಎಲೆಕ್ಟ್ರಾನಿಕ್‌ ಸಿಟಿ (Electronic city) ಬಳಿಯ ಹೆಬ್ಬಗೋಡಿಯಲ್ಲಿ ರೇವ್ ಪಾರ್ಟಿ (Rave Party) ನಡೆಸಿದ ಪ್ರಮುಖ ಆರೋಪಿಗಳಲ್ಲಿ ಒಬ್ಬನಿಗೆ ಆಂಧ್ರ ಪ್ರದೇಶದ (Andhra Pradesh) ಗಣ್ಯ ರಾಜಕಾರಣಿಗಳ ಜೊತೆಗೆ ಒಡನಾಟ ಇರುವುದು ಗೊತ್ತಾಗಿದೆ. ಈ ನಡುವೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಸಸ್ಪೆಂಡ್‌ (police suspend) ಮಾಡಲಾಗಿದೆ.

ಹೆಬ್ಬಗೋಡಿಯ ಜಿಆರ್ ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣದ ಎ2 ಆರೋಪಿ ಅರುಣ್ ಕುಮಾರ್ ಎಂಬಾತನಿಗೆ ಆಂಧ್ರ ಪ್ರದೇಶದ ಪ್ರಭಾವಿ ರಾಜಕಾರಣಿಗಳ ಜೊತೆ ಆತ್ಮೀಯ ನಂಟಿರುವುದು ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ (YS Jagan Mohan Reddy) ರೆಡ್ಡಿ ಜೊತೆಗೆ ಆತ್ಮೀಯ ಒಡನಾಟ ಹೊಂದಿರುವ ಫೋಟೋಗಳನ್ನು ಆರೋಪಿ ಅರುಣ್‌ ಕುಮಾರ್‌ ಇಟ್ಟುಕೊಂಡು ಓಡಾಡುತ್ತಿರುವುದು ಬೆಳಕಿಗೆ ಬಂದಿದೆ.

ವೈಎಸ್‌ಆರ್‌ಪಿ ಪಾರ್ಟಿಯ ಮುಖಂಡರ ಜೊತೆ ಅರುಣ್‌ ಗುರುತಿಸಿಕೊಂಡಿದ್ದಾನೆ. ಈತ ಬೆಂಗಳೂರಿನಲ್ಲಿ ಕೋರಮಂಗಲದಲ್ಲಿ ಐಷಾರಾಮಿ ಫ್ಲಾಟ್‌ನಲ್ಲಿ ಉಳಿದುಕೊಂಡು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಾನೆ. ರೇವ್‌ ಪಾರ್ಟಿಯ ಪ್ರಮುಖ ಆರೋಪಿ ವಾಸು ಜೊತೆ ಈತನ ಗೆಳೆತನವಿದ್ದು, ಪಾರ್ಟಿಯಲ್ಲಿ ಭಾಗಿಯಾಗಿದ್ದ. ವಾಸು ಜೊತೆ ಅರುಣ್ ಕೂಡಾ ಸೇರಿ ಪಾರ್ಟಿ ಆಯೋಜನೆ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿದೆ.

ಮೂವರು ಪೊಲೀಸರ ತಲೆದಂಡ

ಈ ನಡುವೆ, ರೇವ್ ಪಾರ್ಟಿ ನಡೆಯುತ್ತಿರುವುದರ ಬಗ್ಗೆ ಕ್ರಮ ಕೈಗೊಳ್ಳದ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸರ ತಲೆದಂಡವಾಗಿದೆ. ಹೆಬ್ಬಗೋಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ರೇವ್ ಪಾರ್ಟಿ ನಡೆದಿತ್ತು. ಈ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಠಾಣೆಯ ಬಿ. ಗಿರೀಶ್, ಎಎಸ್ಐ ನಾರಾಯಣ ಸ್ವಾಮಿ ಮತ್ತು ಬೀಟ್ ಕಾನ್ಸ್‌ಟೇಬಲ್ ದೇವರಾಜು ಅಮಾನತಾದವರು. ಕರ್ತವ್ಯ ಲೋಪ ಹಿನ್ನೆಲೆ ಮೂವರನ್ನು ಅಮಾನತುಗೊಳಿಸಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ನೀಡಿದ್ದಾರೆ.

ಡಿವೈಎಸ್ಪಿ ಮೋಹನ್ ಹಾಗೂ ಇನ್ಸ್‌ಪೆಕ್ಟರ್ ಐ.ಎನ್ ರೆಡ್ಡಿಗೆ ಚಾರ್ಜ್ ಮೆಮೋ ನೀಡಲಾಗಿದೆ. ಇಷ್ಟೆಲ್ಲ ಆದರೂ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ, ಇದಕ್ಕೆ ಕಾರಣ ನೀಡಿ ಎಂದು ಚಾರ್ಜ್ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮೆಮೋ ನೀಡಿದ್ದಾರೆ. ಇಡೀ ದಿನ ರೇವ್ ಪಾರ್ಟಿ ನಡೆದರೂ ಸಂಬಂಧ ಪಟ್ಟ ಪೋಲೀಸರ ಗಮಕ್ಕಿರಲಿಲ್ಲವೇ, ಸಿಸಿಬಿ ಪೋಲೀಸರಿಗೆ ಸಿಕ್ಕ ಮಾಹಿತಿ ಸ್ಥಳೀಯ ಪೋಲೀಸರಿಗೆ ಯಾಕೆ ಇರಲಿಲ್ಲ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

ರೇವ್‌ ಪಾರ್ಟಿಯಲ್ಲಿ ತೆಲುಗು ನಟಿಯರಾದ ಹೇಮಾ (Telugu actress Hema) ಹಾಗೂ ಆಶಿ ರಾಯ್ (Aashi Roy) ಒಳಗೊಂಡಂತೆ 103 ಮಂದಿ ಭಾಗಿಯಾಗಿದ್ದರು. ಇಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಅಷ್ಟೂ ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ಈಗ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ 86 ಮಂದಿಯ ರಿಪೋರ್ಟ್ ಪಾಸಿಟಿವ್ ಬಂದಿದೆ. ನಟಿಯರಾದ ಹೇಮಾ ಹಾಗೂ ಆಶಿ ರಾಯ್‌ ಸಹ ಮಾದಕ ವಸ್ತುಗಳನ್ನು ಸೇವಿಸಿದ್ದಾರೆಂಬುದು ಸಾಬೀತಾಗಿವೆ ಎನ್ನಲಾಗಿದೆ.

ಈಗಾಗಲೇ ಪಾರ್ಟಿ ಮಾಡಿದ ಐವರನ್ನು ಬಂಧಿಸಲಾಗಿದೆ. 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದ್ದರೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಹೀಗಾಗಿ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿದ್ದಾರೆ.

ವಾಸು ಎಂಬಾತನ ಬರ್ತ್‌ ಡೇ ಪಾರ್ಟಿಗಾಗಿ ಏರ್ಪಡಿಸಲಾಗಿದ್ದ ಈ ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಪತ್ತೆಯಾಗಿದ್ದವು.

Sunset To Sun Rise victory ಶೀರ್ಷಿಕೆಯಲ್ಲಿ ಈ ರೇವ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ಸುಮಾರು ನೂರೈವತ್ತು ಮಂದಿ ಸೇರಿದ್ದರು. ಪೊಲೀಸ್‌ ದಾಳಿ ವೇಳೆ ಕೆಲವರು ತಪ್ಪಿಸಿಕೊಂಡು ಓಡಿದ್ದರು. ಆದರೆ, ಬಹುತೇಕ ಮಂದಿ ಸಿಕ್ಕಿಬಿದ್ದಿದ್ದರು. ಈಗ ಸಿಕ್ಕಿಬಿದ್ದವರಲ್ಲಿ ಬಹುತೇಕರ ಬ್ಲಡ್ ರಿಪೋರ್ಟ್‌ನಲ್ಲಿ ಮಾದಕ ವಸ್ತು ಸೇವನೆ ಸಂಬಂಧ ಪಾಸಿಟಿವ್ ಅಂಶ ಪತ್ತೆಯಾಗಿದೆ. ಹೀಗಾಗಿ ಪಾಸಿಟಿವ್‌ ರಿಪೋರ್ಟ್‌ ಬಂದವರಿಗೆ ಸಿಸಿಬಿ ನೋಟಿಸ್ ನೀಡಲಿದ್ದು, ಅವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version