ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಇದ್ದ ಏಕೈಕ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸುವ ಭರವಸೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಈಡೇರಿಸಿಲ್ಲ. ರನ್ನ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿತ ದುರಾಡಳಿತದಿಂದ ದಿವಾಳಿ ಎದ್ದು ಬಂದ್ ಆಗಿದೆ. ಸಿಎಂ ಬಸವರಾಜ ಬೋಮ್ಮಾಯಿ ಅವರು ಕಾರ್ಖಾನೆ ಆರಂಭಿಸುವ ಭರವಸೆಯನ್ನು ನೀಡಿ ಇನ್ನು ಅದನ್ನು ಈಡೇರಿಸಿಲ್ಲ.
ಕಾರ್ಖಾನೆ ಬಂದ್ ಆಗಿ 3 ವರ್ಷಗಳು ಸಮೀಪಿಸುತ್ತಿವೆ. ರನ್ನ ಸಕ್ಕರೆ ಕಾರ್ಖಾನೆ ಪುನಾರಂಭ ಮಾಡುವಂತೆ ರೈತರು ಹಾಗೂ ಕಾರ್ಮಿಕರು ಇತ್ತೀಚೆಗೆ ಮುಧೋಳದಲ್ಲಿ ಧರಣಿ ಮಾಡಿದ್ದರು. ಸತ್ಯಾಗ್ರಹ ಮಾಡುತ್ತಿದ್ದವರ ಟೆಂಟ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಮೂಲಕ ಕಾಣದ ಕೈಗಳು ಧರಣಿಯನ್ನು ಮೊಟಕುಗೊಳಿಸಿವಲ್ಲಿ ಯಶಸ್ವಿಯಾಗಿದ್ದರು.
ಆ ಬಗ್ಗೆ ಪ್ರತಿಭಟನಾಕಾರರು ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಎಫ್ಐಆರ್ ನಲ್ಲಿನ ಯಾವೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸದೇ ಇರುವುದು ಹೋರಾಟಗಾರರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿತ್ತು.
ಬಳಿಕ ಖುದ್ದು ಸಿಎಂ ಬೊಮ್ಮಾಯಿ ರನ್ನ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಕ್ರಮ ವಹಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ತಿಂಗಳುಗಳು ಕಳೆದರೂ ಸಿಎಂ ಭರವಸೆ, ಭರವಸೆಯಾಗೇ ಉಳಿದಿದೆ. ಇದರಿಂದ ಆ ರೈತರ ಹಾಗೂ ಕಾರ್ಮಿಕರ ಆಕ್ರೋಶ ಗಗನ ಮುಟ್ಟಿದೆ. ಸಿಎಂ ನಿವಾಸದ ಎದುರು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಟೆಂಟ್‌ಗೆ ಬೆಂಕಿ ಹಚ್ಚಿರುವವರ ಪೈಕಿ ಸಚಿವ ಗೋವಿಂದ ಕಾರಜೋಳ ಆಪ್ತ, ಮುಧೋಳದ ಪ್ರಭಾವಿ ಮುಖಂಡ ರಾಮಣ್ಣ ತಳೇವಾಡ ಮಕ್ಕಳು, ಸಹೋದರರ ಮಕ್ಕಳು ಹಾಗೂ ಬೆಂಬಲಿಗರು ಇದ್ದಾರೆ ಎನ್ನಲಾಗುತ್ತಿದೆ.
ರಾಮಣ್ಣ ತಳೇವಾಡ ರನ್ನ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷರಾಗಿದ್ದವರು. ಆದರೆ ಅವರ ದುರಾಡಳಿತದಿಂದಾಗಿ ಕಾರ್ಖಾನೆ ಸದ್ಯದ ಸ್ಥಿತಿಗೆ ಕಾರಣರಾದರು ಎಂಭ ಆರೋಪವಿದೆ.
ಪ್ರತಿಭಟನಾ ನಿರತರು ತಮ್ಮ ಹೋರಾಟವನ್ನು ರಾಜ್ಯ ರಾಜಧಾನಿಗೆ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದಾರೆ. ವಿಧಾನಸೌಧ ಮುತ್ತಿಗೆ ಇಲ್ಲವೇ ಸಿಎಂ ನಿವಾಸದ ಎದುರು ಪ್ರತಿಭಟಿಸುವ ಯೋಜನೆ ರೂಪಿಸುತ್ತಿದ್ದಾರೆ. ಒಟ್ಟಿನಲ್ಲಿ, ಬಾಗಲಕೋಟೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ, ರನ್ನ ಸಕ್ಕರೆ ಕಾರ್ಖಾನೆ ಪುನರಾರಂಭದ ಕನಸು, ಕನಸಾಗಿಯೇ ಉಳಿದಿದೆ.
ಇದನ್ನೂ ಓದಿ: ಭತ್ತದ ಬೆಲೆ ಕುಸಿತದಿಂದ ಕಂಗಾಲಾದ ರೈತ: ಖರೀದಿ ಕೇಂದ್ರ ಆರಂಭಿಸದ ಸರ್ಕಾರ