ಬಾಗಲಕೋಟೆ: ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸಿ ಮದುವೆಯಾದ ಯುವತಿಗೆ ಯುವಕ ವಂಚಿಸಿ (Fraud Case) ಪರಾರಿಯಾದ ಘಟನೆ ನಡೆದಿದೆ. ಇಲ್ಲಿ ಯುವತಿ ಬಿಹಾರದವಳಾಗಿದ್ದು, ಯುವಕ ಬಾಗಲಕೋಟೆಯವನು.
ಇಸ್ಟಾಗ್ರಾಮ್‌ನಲ್ಲಿ ಚಿಗುರಿದ ಪ್ರೀತಿ, ಮದುವೆ ಹಾಗೂ ನಂತರ ಧೋಖಾದಲ್ಲಿ ಪರ್ಯವಸಾನವಾಗಿದೆ. ಬಿಹಾರಿ ಯುವತಿಯನ್ನು ಮದುವೆಯಾದ ಬಾಗಲಕೋಟೆಯ ಭೂಪತಿ ಹೆಂಡತಿಯನ್ನು ಬಾಡಿಗೆ ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ನಾರಿಝಾ ಬೇಗಂ ಮೋಸಕ್ಕೊಳಗಾದ ಮಹಿಳೆ. ಇಮ್ರಾನ್ ಕಿಲಾರಿ ಮದುವೆಯಾಗಿ ಮೋಸ ಮಾಡಿರುವ ವ್ಯಕ್ತಿ. ಕಳೆದ ಒಂದು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಅದು ಪ್ರಣಯಕ್ಕೆ ತಿರುಗಿತ್ತು. ಆಕೆಯನ್ನು ಮದುವೆ ಮಾಡಿಕೊಳ್ಳಲೆಂದು ಇಮ್ರಾನ್ ಬಿಹಾರಕ್ಕೆ ಹೋಗಿದ್ದ. ಅಲ್ಲಿ ಇಬ್ಬರಿಗೂ ಮಹಿಳೆಯ ಕುಟುಂಬಸ್ಥರು ಮದುವೆ ಮಾಡಿಸಿದ್ದಾರೆ.
ಮದುವೆ ಬಳಿಕ ಕದಾಂಪುರ ಪುನರ್ವಸತಿ ಕೇಂದ್ರದ ಬಾಡಿಗೆ ಮನೆಯಲ್ಲಿ ಇಬ್ಬರೂ ವಾಸವಾಗಿದ್ದರು. ಎರಡು ದಿನಗಳ ವಾಸದ ಬಳಿಕ ಮಹಿಳೆಯನ್ನು ಬಿಟ್ಟು ಆರೋಪಿ ಇಮ್ರಾನ್ ಪರಾರಿಯಾಗಿದ್ದಾನೆ. ಎರಡು ದಿನಗಳಿಂದ ಗಂಡನಿಗಾಗಿ ಕಾದು ಕುಳಿತಿರುವ ಮಹಿಳೆ ಗಂಡ ಬಾರದ ಹಿನ್ನೆಲೆ ಕಣ್ಣೀರು ಹಾಕುತ್ತಿದ್ದಾಳೆ.
ಭಾಷೆಯೂ ಬಾರದೆ ದಿಕ್ಕು ತೋಚದಂತಾಗಿರುವ ನಾರೀಜಾ, ʼನಾನಿಲ್ಲೇ ಸಾಯ್ತೀನಿ ಬಿಹಾರಕ್ಕೆ ಹೋಗಲ್ಲ. ಗಂಡನಿಲ್ಲದೇ ಬಿಹಾರಕ್ಕೆ ಹೋಗಿ ನಾನೇನು ಮಾಡಲಿʼ ಎನ್ನುತ್ತಿದ್ದಾಳೆ. ನಾರೀಜಾ- ಇಮ್ರಾನ್ ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. ಈ ಜೋಡಿಗೆ ಬಾಡಿಗೆ ಮನೆ ನೀಡಿರುವ ಮಾಲೀಕರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Fraud Case : ಗ್ಯಾಸ್ ಡೀಲರ್‌ಷಿಪ್ ಹೆಸರಲ್ಲಿ ನಿವೃತ್ತ ಪ್ರಿನ್ಸಿಪಾಲ್‌ಗೆ 45 ಲಕ್ಷ ರೂ. ವಂಚನೆ