ಬೆಂಗಳೂರು: ಅವನು ಬಿಎಸ್‌ಸಿ ವಿದ್ಯಾರ್ಥಿ. ಯಾವುದೋ ಅಪರಾಧ ಕೃತ್ಯಕ್ಕಾಗಿ ಆತನನ್ನು ತಾಲೂಕಿನಿಂದ ಗಡಿಪಾರು ಮಾಡಲಾಗಿದೆ. ಈಗ ಆತನಿಗೆ ಪರೀಕ್ಷೆ ಬರೆಯುವ ಹೊತ್ತು. ಹೀಗಾಗಿ ಪರೀಕ್ಷೆ ಬರೆಯಲು ಅವಕಾಶವಾಗುವಂತೆ ಶಿಕ್ಷೆ ಜಾರಿಯನ್ನು ಮುಂದೂಡಲು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ನಿರ್ದಿಷ್ಟ ಪ್ರವೇಶದಿಂದ ಹೊರ ಹೋಗಬೇಕು ಎಂದು ಉಪವಿಭಾಗಾಧಿಕಾರಿ ಮಾಡಿದ್ದ ಆದೇಶವನ್ನು ಎರಡು ವಾರ ಜಾರಿ ಮಾಡುವುದು ಬೇಡ, ಪರೀಕ್ಷೆ ಮುಗಿದ ಮೇಲೆ ಜಾರಿಗೆ ತನ್ನಿ ಎಂದು ಹೈಕೋರ್ಟ್‌ನ ಧಾರವಾಡ ಪೀಠ ಹೇಳಿದೆ.
ಬಾಗಲಕೋಟೆ ಜಿಲ್ಲೆಯ 20 ವರ್ಷದ ಸಿದ್ದು ಎಂಬಾತನನ್ನು ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿ ಉಪವಿಭಾಗಾಧಿಕಾರಿ ಜಮಖಂಡಿಯಿಂದ ಸೇಡಂ ತಾಲೂಕಿಗೆ ಗಡಿಪಾರು ಮಾಡಿದ್ದರು. ಅಂದರೆ ಅವನು ಜಮಖಂಡಿ ತಾಲೂಕಿನಲ್ಲಿ ಇರುವಂತಿಲ್ಲ. ಈ ಆದೇಶವನ್ನು ಪ್ರಶ್ನಿಸಿ ಸಿದ್ದು ಅರ್ಜಿ ಸಲ್ಲಿಸಿದ್ದ. ಇತರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿತು.
“ಅರ್ಜಿದಾರರು ವಿದ್ಯಾರ್ಥಿಯಾಗಿದ್ದು, ಫೆಬ್ರವರಿ 22ರಿಂದ ಏಪ್ರಿಲ್ 8ರ ವರೆಗೆ ಪರೀಕ್ಷೆ ಇತ್ತು. ಹೀಗಾಗಿ, ಅರ್ಜಿದಾರರು ರಕ್ಷಣೆಗೆ ಅರ್ಹವಾಗಿರುವುದರಿಂದ ಉಪವಿಭಾಗಾಧಿಕಾರಿ ಅವರ ಆಕ್ಷೇಪಾರ್ಹ ಆದೇಶಕ್ಕೆ ಎರಡು ವಾರಗಳ ಕಾಲ ತಡೆ ನೀಡಿದ್ದು, ಅವರು ಪರೀಕ್ಷೆ ಬರೆಯಬಹುದಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಅಲ್ಲದೇ, “ಪೊಲೀಸ್ ಕಾಯಿದೆಯ ಸೆಕ್ಷನ್ 55 ಅನ್ವಯಿಸುವ ಯಾವುದೇ ತೆರನಾದ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ಉಪವಿಭಾಗಾಧಿಕಾರಿಗೆ ಮುಚ್ಚಳಿಕೆ ಬರೆದುಕೊಡಬೇಕು” ಎಂದು ಅರ್ಜಿದಾರರಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಅಪರಾಧ ಪ್ರಕರಣದಲ್ಲಿ ಸಿದ್ದು ಭಾಗಿಯಾಗಬಹುದು ಎಂಬ ತರ್ಕಬದ್ಧ ಆಧಾರದ ಮೇಲೆ ಉಪವಿಭಾಗಾಧಿಕಾರಿ ಅವರು ಸಿದ್ದು ಅವರನ್ನು ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 55ರ ಅಡಿ ಬೇರೊಂದು ತಾಲ್ಲೂಕಿಗೆ ಗಡಿಪಾರು ಮಾಡಿದ್ದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಸಿದ್ದು ಬಿಎಸ್‌ಸಿ ಓದುತ್ತಿದ್ದು, ಫೆಬ್ರವರಿ 22ರಿಂದ ಪರೀಕ್ಷೆ ಆರಂಭವಾಗಿದೆ. ಏಪ್ರಿಲ್ 8ಕ್ಕೆ ಮುಕ್ತಾಯಗೊಳ್ಳಲಿದೆ. ಉಪವಿಭಾಗಾಧಿಕಾರಿಯ ಆದೇಶವು ಸ್ವೇಚ್ಛೆಯಿಂದ ಕೂಡಿದ್ದು, ಜಮಖಂಡಿಯಿಂದ ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಪೂರಕವಾಗಿ ಯಾವುದೇ ದಾಖಲೆ ಇಲ್ಲ” ಎಂದು ವಾದಿಸಿದ್ದರು. ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಹಾಲಿ ರಿಟ್ ಅರ್ಜಿಯು ಮಾನ್ಯತೆಗೆ ಅರ್ಹವಾಗಿಲ್ಲ. ಸಿದ್ದು ಮೇಲ್ಮನವಿಯ ಮೂಲಕ ಪರಿಹಾರ ಪಡೆಯಬಹುದು” ಎಂದು ವಾದಿಸಿದ್ದರು.
ಸಿದ್ದು ಜಮಖಂಡಿಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ವಿದ್ಯಾಭ್ಯಾಸದ ನೆಲೆಯಲ್ಲಿ ತಾತ್ಕಾಲಿಕ ಜೀವದಾನ ಪಡೆದಿದ್ದಾನೆ. ಅದನ್ನು ಹೊರತುಪಡಿಸಿದರೆ ಶಿಕ್ಷೆ ಯಥಾವತ್ತಾಗಿ ಮುಂದುವರಿಯುತ್ತದೆ.
ಇದನ್ನೂ ಓದಿ : Zamir Ahmed Khan : ಅಕ್ರಮ ಗಳಿಕೆ ಆರೋಪ; ಎಸಿಬಿ ಎಫ್‌ಐಆರ್ ರದ್ದತಿ ಕೋರಿದ ಜಮೀರ್, ತೀರ್ಪು ಕಾಯ್ದಿರಿಸಿದ ಕೋರ್ಟ್