ಬಾಗಲಕೋಟೆ: ವಿಧಾನಸಭೆ ಚುನಾವಣೆಗೆ (Karnataka Election) ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಾರ್ಯಕ್ಕೆ ಕೆಪಿಸಿಸಿ ವೇಗ ನೀಡಿದ್ದು, ಫೆಬ್ರವರಿ 2ಕ್ಕೆ ರಾಜ್ಯ ಚುನಾವಣಾ ಸಮಿತಿ ಸಭೆಯನ್ನು ಆಯೋಜಿಸಿದೆ.
ಈ ಕುರಿತು ಬಾಗಲಕೋಟೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈಗಾಗಲೆ ಜಿಲ್ಲೆಗಳಿಗೆ ಸೂಚನೆ ನೀಡಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುವಂತೆ ಸೂಚಿಸಲಾಗಿದೆ. ಅದೆಲ್ಲ ಮಾಹಿತಿಯನ್ನೂ ಇರಿಸಿಕೊಂಡು ರಾಜ್ಯ ಚುನಾವಣಾ ಸಮಿತಿ ಸಭೆಯನ್ನು ಫೆಬ್ರವರಿ 2ರಂದು ಆಯೋಜಿಸಲಾಗಿದೆ ಎಂದರು.
ಬಿಜೆಪಿ ನಾಯಕರ ವಿರುದ್ಧ ಬಿ.ಕೆ. ಹರಿಪ್ರಸಾದ್ ಅವಾಚ್ಯ ಶಬ್ದ ಬಳಸಿದ್ದಾರೆ ಎಂಬ ಕುರಿತು ಪ್ರತಿಕ್ರಿಯಿಸಿ, ಅವಾಚ್ಯ ಏನೂ ಇಲ್ಲ. ಬಿಜೆಪಿಯವರ ಸಂಸ್ಕೃತಿಯನ್ನು ಅವರು ಹೇಳುತ್ತಿದ್ದಾರೆ. ಯತ್ನಾಳ್ ಬಗ್ಗೆ ಸಚಿವರೊಬ್ಬರು ಹೇಳಿದ್ದಾರೆ. ಅದರಲ್ಲಿ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿಕೊಂಡು ಗೃಹಸಚಿವರು ತನಿಖೆ ನಡೆಸಬೇಕಿತ್ತು. ಯತ್ನಾಳ್ ಪಿಂಪ್ ಎಂದು ಸಚಿವರು ಹೇಳಿದ್ದಾರೆ. ಅದನ್ನು ಏಕೆ ತನಿಖೆ ನಡೆಸುತ್ತಿಲ್ಲ? ಅವರ ಬಾಯಿಯಿಂದ ಬಂದ ನುಡಿಮುತ್ತುಗಳಲ್ಲಿ ಬಂದ ಅಂಶಗಳನ್ನು ಹೇಳುತ್ತಿದ್ದಾರೆ ಅಷ್ಟೆ. ಸರ್ಕಾರದ ಗರ್ಭ ಗುಡಿಯಲ್ಲಿ ಏನೇನಿದೆಯೋ ಗೊತ್ತಿಲ್ಲ. ಈ ವಿಚಾರವನ್ನು ಜನರ ಗಮನಕ್ಕೆ ತಂದವರು ಎಚ್.ಡಿ. ಕುಮಾರಸ್ವಾಮಿ, ಅವರನ್ನೇ ಕೇಳಿ ಎಂದರು.
ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಐದು ವರ್ಷದಲ್ಲಿ ಎರಡು ಲಕ್ಷ ಕೋಟಿ ರೂ. ನೀಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ನೀರಿಗೆ ಸಂಬಂಧಿಸಿದಂತೆ ಎಲ್ಲ ಯೋಜನೆಗಳಿಗೂ ನೀಡುತ್ತೇವೆ ಎಂದರು. ಬಿಜೆಪಿಯವರು ಯಾವುದೇ ಯಾತ್ರೆ ಮಾಡಿ ಎಂದು ಹೇಳುತ್ತಿದ್ದೇವೆ. ಮೂರೂವರೆ ವರ್ಷದಿಂದ ಮಾಡಲಾಗದ್ದನ್ನು ಈಗ ಘೋಷಣೆ ಮಾಡುತ್ತಿದ್ದಾರೆ. ತಮ್ಮ ಸರ್ಕಾರ ಬರುವುದಿಲ್ಲ ಎನ್ನುವುದನ್ನು ಅವರ ಪಕ್ಷದ ನಾಯಕರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | Karnataka Election | ಮೊದಲ ಪಟ್ಟಿ ರೆಡಿ, 95% ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಎಂದ ಡಿ.ಕೆ. ಶಿವಕುಮಾರ್