Site icon Vistara News

Murder Case : ಎಗ್‌ರೈಸ್‌, ಕಬಾಬ್‌ ಇಲ್ಲ ಎಂದಿದ್ದೇ ತಪ್ಪಾಯ್ತಾ? ಅಂಗಡಿ ಮಾಲೀಕನನ್ನು ಇರಿದು ಕೊಂದ ಪಾತಕಿ

Ameenagada murder case

Ameenagada murder case

ಬಾಗಲಕೋಟೆ: ಎಗ್‌ರೈಸ್‌ ಮುಗೀತು, ಚಿಕನ್‌ ಕಬಾಬ್‌ ಇಲ್ಲ, ಅಂಗಡಿ ಮುಚ್ಚೋ ಟೈಮಾಯ್ತು ಅಂತ ಹೇಳಿದ್ದೇ ಆ ಅಂಗಡಿ ಮಾಲೀಕನಿಗೆ ಮುಳ್ಳಾಗಿ ಹೋಯ್ತು. ಇಷ್ಟಕ್ಕೇ ಧೂರ್ತನೊಬ್ಬ ಆ ಅಂಗಡಿ ಮಾಲೀಕನನ್ನು (Young man kills food trader) ಬರ್ಬರವಾಗಿ ಕೊಲೆ (Murder Case) ಮಾಡಿದ್ದಾನೆ.

ಈ ಘಟನೆ ನಡೆದಿರುವುದು ಬಾಗಲಕೋಟೆ ಜಿಲ್ಲೆಯ (Bagalakote News) ಅಮೀನಗಡ ಪಟ್ಟಣದ ಬಸ್ ನಿಲ್ದಾಣದ ಬಳಿ. ಇಲ್ಲಿನ ಗೈಬುಸಾಬ್ ಮುಲ್ಲಾ (34) ಹತ್ಯೆಯಾದ ದುರ್ದೈವಿ. ಆರೋಪಿ ಮುಸ್ತಾಕ್ ಜಂಗಿ (20) ಕೊಲೆ ಮಾಡಿದ ಕಿರಾತಕ.

ಗೈಬುಸಾಬ್ ಕಳೆದ ಹಲವು ವರ್ಷಗಳಿಂದ ಅಮೀನಗಡ ಬಸ್ ನಿಲ್ದಾಣದ ಬಳಿ ಅಂಗಡಿ ಇಟ್ಟುಕೊಂಡಿದ್ದಾರೆ. ಇಲ್ಲಿ ಎಗ್‌ ರೈಸ್‌ ಮತ್ತು ಚಿಕನ್‌ ಕಬಾಬ್‌ ಫೇಮಸ್‌. ಸಾಕಷ್ಟು ಜನ ಬಂದು ಹೋಗುತ್ತಾರೆ. ಭಾನುವಾರವಾಗಿದ್ದರಿಂದ ಇನ್ನಷ್ಟು ಜನ ಜಾಸ್ತಿ ಇದ್ದರು. ಹೀಗಾಗಿ 9.30ರ ಹೊತ್ತಿಗೆ ಆಹಾರ ವಸ್ತುಗಳೆಲ್ಲ ಮುಗಿದಿದ್ದವು.

ಇನ್ನೇನು ಎಲ್ಲವನ್ನೂ ಕ್ಲೀನ್‌ ಮಾಡಿಟ್ಟು ಮನೆಗೆ ಹೊರಡುವುದು ಎಂದು ಯೋಚನೆಯಲ್ಲಿದ್ದರು. ಆಗ ಅಲ್ಲಿಗೆ ಮುಷ್ತಾಕ್‌ ಜಂಗಿ ಬಂದಿದ್ದ.

ಮುಷ್ತಾಕ್‌ ಜಂಗಿ ಒಬ್ಬ ಹಳೆ ಆರೋಪಿ. ಈ ಹಿಂದೆ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಸದ್ಯ ಜಾಮೀನಿನ ಮೇಲೆ‌ ಹೊರ ಬಂದಿದ್ದ ಆರೋಪಿ ಮುಷ್ತಾಕ್‌ ಗೈಬು ಸಾಬ್‌ ಅವರ ಅಂಗಡಿ ಬಳಿ ಬಂದಿದ್ದ. ಎಗ್‌ರೈಸ್‌ ಕೇಳಿದ್ದ, ಇರಲಿಲ್ಲ. ಚಿಕನ್‌ ಕಬಾಬ್‌ ಕೇಳಿದ್ದ, ಇರಲಿಲ್ಲ.

ಆಗ ಸಿಟ್ಟಿಗೆದ್ದ ಕಿರಾತಕ ಮುಷ್ತಾಕ್‌ ತನ್ನ ಕ್ರೂರ ನಡೆಯನ್ನು ಇಟ್ಟೇಬಿಟ್ಟ. ಅಲ್ಲೇ ಇದ್ದ ಚಾಕುವನ್ನು ತೆಗೆದು ಇರಿದೇಬಿಟ್ಟ. ಮತ್ತು ಅಲ್ಲಿಂದ ಪರಾರಿಯಾದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೈಬು ಸಾಬ್‌ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಒಯ್ದರಾದರೂ ಪ್ರಾಣ ಉಳಿಯಲಿಲ್ಲ.

ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case : ಮನೆಯಲ್ಲಿರಲ್ಲ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಪತ್ನಿ, ಅತ್ತೆಯನ್ನೇ ಹೊಡೆದು ಕೊಂದ ಧೂರ್ತ

ಹಳೆ ವೈಷಮ್ಯದ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿ ಕೊಲೆ

ಬೆಳಗಾವಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ವಿಜಯ್ ರಾಮಚಂದ್ರಪ್ಪ ಆರೇರ್ (34) ಮೃತ ದುರ್ದೈವಿ. ಕಲ್ಲಪ್ಪ ಕ್ಯಾತಣ್ಣವರ್ ಮತ್ತು ವಿಜಯ್ ಮಧ್ಯೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ತಿರುಗಿ ಒಬ್ಬರ ಮೇಲೊಬ್ಬರು ಹಲ್ಲೆ ಮಾಡಿಕೊಂಡಿದ್ದರು. ಈ ವೇಳೆ ತೀವ್ರ ಗಾಯಗೊಂಡ ವಿಜಯ್ ನನ್ನು ಕುಟುಂಬಿಕರು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಬಿಮ್ಸ್ ಆಸ್ಪತ್ರೆಯಲ್ಲಿ ವಿಜಯ್ ಮೃತಪಟ್ಟಿದ್ದಾರೆ.

ಅತ್ತ ಕಲ್ಲಪ್ಪ ಕ್ಯಾತಣ್ಣವರ್‌ಗೂ ಗಾಯಗಳಾಗಿದ್ದು, ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು ಪ್ರಕರಣ ದಾಖಲಾಗಿದೆ.

Exit mobile version