ಬಾಗಲಕೋಟೆ: ಹಳೆ ದ್ವೇಷಕ್ಕೆ ನೆತ್ತರು ಹರಿದಿದೆ. ಬಾಗಲಕೋಟೆಯ ಬೀಳಗಿ ತಾಲೂಕಿನ ಹೆಗ್ಗೂರು ಗ್ರಾಮದ ಆರ್‌ಸಿಯಲ್ಲಿ ತಡರಾತ್ರಿ ಘಟನೆ ನಡೆದಿದೆ. ಎರಡು ಕುಟುಂಬಗಳ ನಡುವೆ ಮಾರಾಮಾರಿ ಶುರುವಾಗಿದ್ದು, ಒಬ್ಬನ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ವಿರೋಧಿಗಳ ದಾಳಿಗೆ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಸಿದ್ದಪ್ಪ ಪಾಂಡಪ್ಪ ಇಂಡಿ (21) ಹತ್ಯೆಯಾದವನು. ಮಂಜುನಾಥ್ ಖೈರವಾಡಗಿ (21), ಉದಯ್ ಹೆರಕಲ್(24) ಗಂಭೀರ ಗಾಯಗೊಂಡವರು. ಗಾಯಾಳುಗಳನ್ನು ಬೀಳಗಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುಂಪು ಗುಂಪಾಗಿ ಬಂದಿದ್ದ ಸಾಗರ ಕೊರಶ್ಯಾಳ, ಯಮನಪ್ಪ, ಶಿವಾನಂದ ಎಂಬುವವರು ಸಿದ್ದಪ್ಪ, ಮಂಜುನಾಥ್, ಉದಯ ಮೇಲೆ ಏಕಾಏಕಿ ಎರಗಿದ್ದಾರೆ. ಈ ವೇಳೆ ಕಬ್ಬಿಣದ ಪೈಪ್ ಹಾಗೂ ಮಚ್ಚಿನಿಂದ ಈ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಸಿದ್ದಪ್ಪ ಸ್ಥಳದಲ್ಲೇ ಮೃತಪಟ್ಟರೆ, ಮಂಜುನಾಥ್, ಉದಯ್ ಸ್ಥಿತಿ ಚಿಂತಾಜನಕವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಇದನ್ನೂ ಓದಿ: Medical Negligence : ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯರ ಸಾವು; ಕರ್ತವ್ಯ ಲೋಪದಡಿ ಮೂವರು ಸಿಬ್ಬಂದಿ ವಜಾ
ಮಗಳಿಗೆ ಆಸ್ತಿ ಬರೆದಿದ್ದಕ್ಕೆ ಸಿಟ್ಟು; ತಂದೆಯನ್ನು ಅಟ್ಟಾಡಿಸಿ ಕೊಂದ ಪಾಪಿ ಮಗ
ಮಂಡ್ಯ : ಆಸ್ತಿ ವಿಚಾರವು ಕೊಲೆಯಲ್ಲಿ ಅಂತ್ಯವಾಗಿದೆ. ಮಗನಿಂದಲೇ ತಂದೆಯ ಬರ್ಬರ ಹತ್ಯೆ (Murder Case) ಆಗಿದೆ. ಪಾಪಿ ಪುತ್ರನೊಬ್ಬ ತಂದೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದಾನೆ. ಮಂಡ್ಯ ತಾಲೂಕಿನ ಸುಂಡಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಂಜಪ್ಪ (65) ಮೃತ ದುರ್ದೈವಿ. ಮಹದೇವ ಎಂಬಾತ ತಂದೆಯನ್ನು ಹತ್ಯೆ ಮಾಡಿದವನು. ನಂಜಪ್ಪ ಇತ್ತೀಚಿಗೆ ಮಗಳ ಹೆಸರಿಗೆ ಎಲ್ಲ ಆಸ್ತಿಯನ್ನು ಬರೆದುಕೊಟ್ಟಿದ್ದರು. ಇತ್ತ ತನ್ನ ಹೆಸರಿಗೆ ಏನು ಮಾಡಲಿಲ್ಲ. ಆಸ್ತಿ ಕೊಡಲಿಲ್ಲವೆಂದು ಸಿಟ್ಟಾದ ಮಹದೇವ ಮಂಗಳವಾರ ಬೆಳಗಿನ ಜಾವ ಈ ವಿಚಾರಕ್ಕೆ ಗಲಾಟೆ ಶುರುವಾಗಿದೆ.
ಮಾತಿಗೆ ಮಾತು ಬೆಳೆದು ತಂದೆ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇವನಿಂದ ತಪ್ಪಿಸಿಕೊಳ್ಳಲು ಹೋದಾಗ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಇನ್ನು ಅಡ್ಡ ಬಂದ ತಾಯಿ ಮಹದೇವಮ್ಮಳಿಗೂ ಗಾಯವಾಗಿದೆ. ತಂದೆಯನ್ನು ಕೊಂದು ಮಹದೇವ ಎಸ್ಕೇಪ್ ಆಗಿದ್ದಾನೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ