ಬಾಗಲಕೋಟೆ: ಕೃಷಿ ಕಾಯ್ದೆ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದರೂ ರಾಜ್ಯ ಸರ್ಕಾರ ಹಿಂಪಡೆದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲೂ ಹಿಂಪಡೆಯಲಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ (Prajadhwani Yatre) ಸಿದ್ದರಾಮಯ್ಯ ಮಾತನಾಡಿದರು.
2018ರಲ್ಲಿ ನಮ್ಮ ಸರ್ಕಾರದ ಕಡೇ ಬಜೆಟ್ ಅನ್ನು ಮಂಡಿಸಿದ್ದೆ, ಅದರಲ್ಲಿ ನಾವು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿದ್ದ ಭರವಸೆಗಳು ಹಾಗೂ ಅಧಿಕಾರಕ್ಕೆ ಬಂದ ನಂತರ ಈಡೇರಿಸಿದ ಭರವಸೆಗಳು ಯಾವುವು ಹಾಗೂ ಮುಂದೆ ಏನು ಮಾಡುತ್ತೇವೆ ಎಂಬುದನ್ನು ಹೇಳಿದ್ದೆ. 2013ರ ಚುನಾವಣೆಯಲ್ಲಿ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿದ್ದೆ, ಅವುಗಳಲ್ಲಿ 158 ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ.
ಆದರೆ ರಾಜ್ಯ ಬಿಜೆಪಿ ಅವರು 2018ರಲ್ಲಿ ಜನರಿಗೆ 600 ಭರವಸೆಗಳನ್ನು ನೀಡಿದ್ದರು. ಇದರಲ್ಲಿ 50 ರಿಂದ 60 ಭರವಸೆಗಳನ್ನು ಕೂಡ ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲ. ಈಗ ಮತ್ತೆ ಚುನಾವಣೆ ಹತ್ತಿರ ಬಂದಿರುವುದರಿಂದ ಬೊಮ್ಮಾಯಿ ಅವರು ಫೆಬ್ರವರಿ 17ಕ್ಕೆ ಬಜೆಟ್ ಮಂಡಿಸುವ ಘೋಷಣೆ ಮಾಡಿದ್ದಾರೆ, ಇದರಲ್ಲಿ ಏನೆಲ್ಲ ಘೋಷಣೆ ಮಾಡಲು ಸಾಧ್ಯ ಅವೆಲ್ಲವನ್ನು ಘೋಷಿಸಿ, ಒಂದನ್ನೂ ಈಡೇರಿಸಲ್ಲ. ಇಂಥಾ ಭರವಸೆಗಳನ್ನು ನೀವು ನಂಬಬೇಡಿ.
ನರೇಂದ್ರ ಮೋದಿ ಅವರು 2016ರಲ್ಲಿ ಈ ದೇಶದ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ನೀಡಿದ್ದರು. 2023 ಬಂದಿದೆ, ಈಗಲಾದರೂ ರೈತರ ಆದಾಯ ದುಪ್ಪಟ್ಟಾಗಿದೆಯಾ? ಇದರ ಬದಲು ರೈತರು ಕೃಷಿಗೆ ಹಾಕುವ ಬಂಡವಾಳದ ಹಣ ದುಪ್ಪಟ್ಟಾಗಿದೆ. ರಸಗೊಬ್ಬರ, ಕಳೆನಾಶಕ, ಕೀಟನಾಶಕ, ಕೃಷಿ ಯಂತ್ರೋಪಕರಣಗಳ ಬೆಲೆ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಮಾತನ್ನು ಕೇಳಿ ಎಪಿಎಂಸಿ ಮಸೂದೆಗೆ ತಿದ್ದುಪಡಿ ಮಸೂದೆ ಜಾರಿ ಮಾಡಲಾಯಿತು. ಕೇಂದ್ರ ಸರ್ಕಾರ ಇದನ್ನು ವಾಪಾಸು ಪಡೆದರೂ ಕೂಡ ರಾಜ್ಯ ಸರ್ಕಾರ ಇನ್ನೂ ವಾಪಸು ಪಡೆದಿಲ್ಲ. ನಾವು ಅಧಿಕಾರಕ್ಕೆ ಬಂದ ತಕ್ಷಣ ಈ ತಿದ್ದುಪಡಿ ಮಸೂದೆಯನ್ನು ವಾಪಾಸು ಪಡೆದು ಹಿಂದಿನ ಪದ್ಧತಿಯನ್ನು ಮುಂದುವರೆಸುತ್ತೇವೆ ಎಂದರು.
ರಾಜ್ಯದ ಮಹಿಳೆಯರು, ಯುವಜನರು, ರೈತರು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದು ಕಾಂಗ್ರೆಸನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ನಾವು ಅಧಿಕಾರಕ್ಕೆ ಬಂದರೆ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ನ್ಯಾಯಸಮ್ಮತವಾದ ಪರಿಹಾರವನ್ನು ನೀಡುತ್ತೇವೆ. ಈ ಬಿಜೆಪಿಯವರ ಯೋಗ್ಯತೆಗೆ ಮೊನ್ನೆ ಮೊನ್ನೆವರೆಗೂ ಒಂದು ನೋಟಿಫಿಕೇಷನ್ ಹೊರಡಿಸಲು ಸಾಧ್ಯವಾಗಿರಲಿಲ್ಲ.
ಇಂದು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೆ ಹೋಗಿದೆ. ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ ಡೀಸೆಲ್ ಬೆಲೆ 54 ರೂ. ಇತ್ತು, ಇಂದು 96 ರೂ. ಆಗಿದೆ. ಪೆಟ್ರೋಲ್ ಬೆಲೆ 76 ರೂ. ಇತ್ತು, ಇಂದು 102 ರೂ. ಆಗಿದೆ. ಗ್ಯಾಸ್ ಬೆಲೆ 414 ರೂ. ಇತ್ತು, ಈಗದು 1150 ರೂ. ಆಗಿದೆ. ಮೋದಿ ಅವರು ಅಚ್ಚೇದಿನ್ ಆಯೇಗಾ ಎಂದು ಹೇಳಿ ಜನರನ್ನು ಲೂಟಿ ಮಾಡಿದ್ದಾರೆ.
ಬೊಮ್ಮಾಯಿ ಅವರ ಸರ್ಕಾರ 40% ಕಮಿಷನ್ ಸರ್ಕಾರ. ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಒಬ್ಬೊಬ್ಬ ಅಭ್ಯರ್ಥಿಯಿಂದ 70, 80 ಲಕ್ಷದವರೆಗೆ ಲಂಚ ತಿಂದಿದ್ದಾರೆ. ನೇಮಕಾತಿ ವಿಭಾಗದ ಎಡಿಜಿಪಿ ಅಧಿಕಾರಿಯೊಬ್ಬರು ಜೈಲು ಸೇರಿದ್ದಾರೆ. ಇವರ ಜೊತೆ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದ ಮಂತ್ರಿಗಳು ಯಾರಾದರೂ ಜೈಲು ಸೇರಿದ್ದಾರ? ನಮ್ಮ ಪಕ್ಷದ ನಾಯಕರಾದ ಕಾಶಪ್ಪನವರು ನಿರಾಣಿಯವರ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಂದು ತನಿಖಾ ಸಮಿತಿಯನ್ನು ರಚನೆ ಮಾಡಿ, ಯಾರ ಮೇಲೆಲ್ಲಾ ಆರೋಪಗಳಿವೆ ಅದನ್ನು ತನಿಖೆ ಮಾಡಿಸಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಬಿಜೆಪಿಯ ನಾಲ್ಕು ವರ್ಷಗಳ ದುರಾಡಳಿತ, ಭ್ರಷ್ಟಾಚಾರ, ಮಹಿಳೆಯರ ಮೇಲೆ ದೌರ್ಜನ್ಯ, ನಿರುದ್ಯೋಗ ಸಮಸ್ಯೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದಲ್ಲಿ ಎಲ್ಲ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಜನಜಾಗೃತಿ ಹಮ್ಮಿಕೊಂಡಿದೆ.
ಬಿಜೆಪಿ ಸರ್ಕಾರ ಯಾವ ರೀತಿಯ ಆಡಳಿತವನ್ನು ಕೊಟ್ಟಿದೆ ಎಂದು ಅಗ್ನಿ ಪರೀಕ್ಷೆಯಾಗಿರುವ ಈ ಚುನಾವಣೆಯಲ್ಲಿ ಸರ್ಕಾರ ಎಲ್ಲಿ ವಿಫಲವಾಗಿದೆ, ಎಲ್ಲಿ ಜನ ವಿರೋಧಿ ನೀತಿ ತಾಳಿದ್ದಾರೆ ಎಂದು ಈ ಕಾರ್ಯಕ್ರಮದ ಮೂಲಕ ಜನರ ಮುಂದೆ ಇಡಲಾಗುತ್ತಿದೆ.
ನೀವು ರಸ್ತೆ, ನೀರು, ಚರಂಡಿ, ಮಹಿಳೆಯರ ಸುರಕ್ಷತೆ ವಿಚಾರವಾಗಿ ಮಾತನಾಡಬೇಡಿ, ಲವ್ ಜಿಹಾದ್, ಘರ್ ವಾಪಸಿ, ಕಬರಸ್ಥಾನ್ ಶಂಶಾನ್ ಬಗ್ಗೆ ಮಾತನಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳುತ್ತಾರೆ. ಈ ಗಾಂಪರ ಮೂರ್ಖರಿಗೆ ನೀವು ಬುದ್ಧಿ ಕಲಿಸದಿದ್ದರೆ ಇವರು ಸಂವಿಧಾನವನ್ನೇ ಬದಲಿಸುತ್ತಾರೆ. ಅಂಬೇಡ್ಕರ್ ಅವರು ಎಲ್ಲರೂ ಸಮಾನರು ಎಂಬ ಸಂವಿಧಾನ ನೀಡಿದರೆ ಅದನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ. 75 ವರ್ಷಗಳ ಕಾಲ ಸ್ವತಂತ್ರ್ಯವಾಗಿ ಜೀವನ ಮಾಡಿದ್ದ ನೀವು ಅದನ್ನು ಮುಂದುವರಿಸಬೇಕಾದರೆ, ಪ್ರಜಾಪ್ರಭುತ್ವ ಸಂವಿಧಾನ, ಜಾತ್ಯಾತೀತ ತತ್ವವನ್ನು ಕಾಪಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ | Prajadhwani Yatre : ಬಿಜೆಪಿ ನಾಯಕರ ವಿಡಿಯೋ ರಕ್ಷಣೆಗೆ ಡ್ರಗ್ಸ್ ದಾಳಿ ನಡೆಸಲಾಗಿತ್ತು: ಸರ್ಕಾರದ ವಿರುದ್ಧ ಸುರ್ಜೆವಾಲ ಆರೋಪ