ಬಾಗಲಕೋಟೆ: ಬಾಗಲಕೋಟೆಯ ಜಮಖಂಡಿ ತಾಲೂಕಿನ ರೆಹಮದ್ಪುರ್ ಗ್ರಾಮದಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಬಸ್ ಹಿಂಭಾಗಕ್ಕೆ ಕ್ರೂಸರ್ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟರೆ, ಐವರು ಗಂಭೀರ ಗಾಯಗೊಂಡಿದ್ದಾರೆ.
ಜಮಖಂಡಿ ತಾಲೂಕಿನ ರೆಹಮದ್ಪುರ್ ಗ್ರಾಮದಿಂದ ಮಹಾರಾಷ್ಟ್ರದ ತಾಜಗಾಂವಗೆ ಮದುವೆಗಾಗಿ ಕ್ರೂಸರ್ ವಾಹನದಲ್ಲಿ ಹೊರಟ್ಟಿದ್ದರು. ಕ್ರೂಸರ್‌ನಲ್ಲಿ ಸುಮಾರು 13 ಜನರಿದ್ದರು. ಮದುವೆ ಖುಷಿಯಲ್ಲಿದ್ದವರು ಮಸಣ ಸೇರಿದ್ದಾರೆ. ಮಹಾರಾಷ್ಟ್ರದ ಜತ್ತ ಸಮೀಪ ನಿನ್ನೆ ಬುಧವಾರ ದುರ್ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರೆಹಮದ್ಪುರ್ ಗ್ರಾಮದ ನಿವಾಸಿ ಭಾಗ್ಯಶ್ರೀ ಅಕ್ಕನ ಮದುವೆ ಎಂದು ಖುಷಿಯಲ್ಲಿದ್ದಳು. ಆದರೆ ಡಿಕ್ಕಿ ರಭಸಕ್ಕೆ ಭಾಗ್ಯಶ್ರೀ (18) ನರಳಾಡಿ ಪ್ರಾಣಬಿಟ್ಟಿದ್ದಾಳೆ. ಅನುಸೂಯ (55), ಉಜ್ವಲ (23)ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಿವೇದಿತಾ (22) ಸೇರಿ ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಗಾಯಾಳುಗಳನ್ನು ಮಿರಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕ್ರೂಸರ್ ಚಾಲಕನ ಅಜಾಗರೂಕತೆ ಕಾರಣ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ರೆಹಮದ್ಪುರ, ಅಡಿಹುಡಿ, ಲೋಕಾಪುರ ಮತ್ತಿ ಹಲಗಲಿ ಗ್ರಾಮದವರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Self Harming : ಮಕ್ಕಳಾಗಿಲ್ಲವೆಂದು ಕಿರುಕುಳ; ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಗೃಹಿಣಿ
ಸೈಕಲ್‌ಗೆ ಗುದ್ದಿದ ಕಾರು, ನರಳಾಡಿ ವ್ಯಕ್ತಿ ಸಾವು; ಹಿಟ್ ಆ್ಯಂಡ್ ರನ್‌ಗೆ ಬೈಕ್ ಸವಾರ ಬಲಿ
ಹಾಸನ: ಸೈಕಲ್‌ನಲ್ಲಿ ತೆರಳುತ್ತಿದ್ದ ವೃದ್ಧನಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಸನ ನಗರದ ಡೈರಿ ಸರ್ಕಲ್ ಬಳಿ ಅಪಘಾತ (Road Accident) ನಡೆದಿದೆ. ಶ್ರೀರಾಮನಗರದ ನಿವಾಸಿ ಆನಂದ್ (60) ಮೃತ ದುರ್ದೈವಿ.
ಕಾಟೀಹಳ್ಳಿ ಕಡೆಯಿಂದ ಬಂದ ಕಾರು ತಿರುವಿನಲ್ಲಿ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಹಾರಿ ಬಿದ್ದ ಆನಂದ್ ಅವರ ಮುಖವೇ ಅಪ್ಪಚ್ಚಿ ಆಗಿತ್ತು. ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆನೇಕಲ್‌ನಲ್ಲಿ ಹಿಟ್ ಆ್ಯಂಡ್ ರನ್‌ಗೆ ಬೈಕ್ ಸವಾರ
ಬೆಂಗಳೂರು ಹೊರವಲಯದ ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯ ಮಾಯಸಂದ್ರ ಬಳಿ ಹಿಟ್ ಆ್ಯಂಡ್ ರನ್‌ಗೆ ಬೈಕ್ ಸವಾರ ಬಲಿಯಾಗಿದ್ದಾರೆ. ಮಧುಸೂಧನ್ ಮೃತ ದುರ್ದೈವಿ. ಬುಧವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಮಧುಸೂಧನ್ ಕೆಲಸ ಮುಗಿಸಿಕೊಂಡು ಅತ್ತಿಬೆಲೆಯಿಂದ ಆನೇಕಲ್ ಕಡೆಗೆ ಬರುವಾಗ ಬೈಕ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ.
ಈ ವೇಳೆ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಮಧುಸೂದನ್‌ರನ್ನು ಕೂಡಲೇ ಸ್ಥಳೀಯರು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿ ಪರಾರಿ ಆಗಿರುವ ವಾಹನಕ್ಕೆ ಹುಡುಕಾಟ ನಡೆಸಿದ್ದಾರೆ.
ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಲಾರಿ
ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಕಂದಕಕ್ಕೆ ಬಿದ್ದಿದ್ದೆ. ಉತ್ತರಕನ್ನಡ ಜಿಲ್ಲೆಯ ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ಮಾನೀರು ಕ್ರಾಸ್ ಬಳಿ ಘಟನೆ ನಡೆದಿದೆ. ಕುಮಟಾದಿಂದ ಅಂಕೋಲಾದತ್ತ ಉಸುಕು ತುಂಬಿಕೊಂಡು ಲಾರಿ ಹೊರಟಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದ ತಡೆಗೋಡೆಗೆ ಗುದ್ದಿ ಕಂದಕಕ್ಕೆ ಬಿದ್ದಿದೆ.
ಲಾರಿ ಗುದ್ದಿದ ರಭಸಕ್ಕೆ ರಸ್ತೆಯ ತಡೆಗೋಡೆ ಕಿತ್ತುಹೋಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಂದಕ್ಕೆ ಬಿದ್ದ ಗಾಡಿಯನ್ನು ಮೇಲಕ್ಕೆತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ