ಕೋಲಾರ : ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ (Road Accident) ಸಂಭವಿಸಿದೆ. ಜವರಾಯನ ಅಟ್ಟಹಾಸಕ್ಕೆ ವಿದ್ಯಾರ್ಥಿ ಮಸಣ ಸೇರಿದ್ದಾನೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.
ತಮಟಂಪಲ್ಲಿ ಗ್ರಾಮದ ಭಾರ್ಗವ್ ರೆಡ್ಡಿ (18) ಮೃತ ದುರ್ದೈವಿ. ಭಾರ್ಗವ್ ಚಿಂತಾಮಣಿ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಬಸ್ ಮಿಸ್ ಆದ ಕಾರಣ ದ್ವಿಚಕ್ರ ವಾಹನದಲ್ಲಿ ಅಡ್ಡಗಲ್ ಗ್ರಾಮಕ್ಕೆ ಬರುತ್ತಿದ್ದ. ಈ ವೇಳೆ ಬಸ್‌ವೊಂದು ಬೈಕ್‌ಗೆ ಗುದ್ದಿದೆ. ಪರಿಣಾಮ ಕೆಳಗೆ ಬಿದ್ದ ಭಾರ್ಗವ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
ಮಗನ ಮೃತ ದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಇದನ್ನೂ ಓದಿ: Love case : ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ; ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ
ಹಿಟ್ ಆ್ಯಂಡ್ ರನ್ ಮಾಡಿ ಎಸ್ಕೇಪ್ ಆದ ಬೈಕ್ ಸವಾರ
ಬೆಂಗಳೂರು: ಮಕ್ಕಳನ್ನು ರಸ್ತೆಯಲ್ಲಿ ಆಟವಾಡಲು ಬಿಡುವ ಪೋಷಕರೇ ಎಚ್ಚರವಾಗಿರಿ. ಯಾಕೆಂದರೆ ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಿಟ್ ಆ್ಯಂಡ್ ರನ್ ಮಾಡಿ ಎಸ್ಕೇಪ್ ಆಗಿದ್ದಾನೆ. ಸೈಕಲ್ ತುಳಿಯುತ್ತಾ ಆಟವಾಡುತ್ತಿದ್ದ ಬಾಲಕನಿಗೆ ಗುದ್ದಿ ಕಾಲ್ಕಿತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರಿನ ಬನಶಂಕರಿ 6ನೇ ಹಂತದಲ್ಲಿ ಈ ಅಪಘಾತ ನಡೆದಿದೆ. ನಂಬರ್ ಪ್ಲೇಟ್ ಇಲ್ಲದ ಆರ್‌ಎಕ್ಸ್ ಬೈಕ್‌ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಮನೆಯ ಮುಂಭಾಗದ ರಸ್ತೆಯಲ್ಲಿ ಸೈಕಲ್ ತುಳಿಯುತ್ತಿದ್ದ ಬಾಲಕನಿಗೆ ವೇಗವಾಗಿ ಬಂದು ಗುದ್ದಿದ್ದಾನೆ.
ಬಾಲಕ ರಸ್ತೆಯಲ್ಲೇ ಬಿದ್ದು ಅಳುತ್ತಿದ್ದರು ಬೈಕ್ ಸವಾರ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕಳೆದ ಆಗಸ್ಟ್ 1ರ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಆರೋಪಿಗಾಗಿ ದಕ್ಷಿಣ ವಿಭಾಗದ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕುರಿಗಳ ಮೇಲೆ ಹರಿದ ಲಾರಿ, ಸ್ಥಳದಲ್ಲೇ 33 ಕುರಿಗಳ ಮಾರಣ
ಲಾರಿಯೊಂದು ಹರಿದ ಪರಿಣಾಮ ಸ್ಥಳದಲ್ಲೇ 33 ಕುರಿಗಳು ಮೃತಪಟ್ಟಿವೆ. ಬಾಗಲಕೋಟೆಯ ಕಡಪಟ್ಟಿ ಫಾರ್ಮ್ ಹೌಸ್ ಬಳಿ ನಸುಕಿನ ವೇಳೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಳಕಲ್ಲನ ಎನ್‌ಹೆಚ್ 50 ರಲ್ಲಿರುವ ಕಡಪಟ್ಟಿ ಫಾರ್ಮ್ ಹೌಸ್‌ನಿಂದ ಹುನಗುಂದದಿಂದ ಹನುಮಸಾಗರ ಕಡೆ ಹೊರಟಿದ್ದಾಗ ಅಪಘಾತ ನಡೆದಿದೆ. ಹುನಗುಂದದಿಂದ ಕುಷ್ಟಗಿ ಕಡೆ ಹೊರಟಿದ್ದ ಲಾರಿಯು ಹಿಂದಿನಿಂದ ವೇಗವಾಗಿ ಬಂದು ಕುರಿಗಳ ಹರಿದಿದೆ. ಕುರಿಗಾಹಿ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ನುಜ್ಜುಗುಜ್ಜಾದ 33 ಕುರಿಗಳು, 30ಕ್ಕೂ ಹೆಚ್ಚು ಕುರಿಗಳಿಗೆ ಗಾಯವಾಗಿದೆ.
ರಾಯಣ್ಣ ಮಲ್ಲಪ್ಪ ಕೊಡೆಕಲ್ಲ (30) ಕುರಿಗಾಹಿ ಮಾಲಿಕ ಗಾಯಗೊಂಡಿದ್ದಾನೆ. ರಾಯಣ್ಣ ಮೂಲತಃ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿಯಾಗಿದ್ದಾನೆ. ಹರಿಯಾಣ ಪಾಸಿಂಗ್ ಇದ್ದು, ರಾಜಸ್ಥಾನ ಮೂಲದ ಅತ್ತಾರಖಾನ್ (25) ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಳಕಲ್ಲ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ