Site icon Vistara News

Heart attack : ಕಾರಲ್ಲಿ ಕುಳಿತಲ್ಲೇ ಪ್ರಾಣಬಿಟ್ಟ ಆರೆಸ್ಸೆಸ್‌ ಮುಖಂಡ; ರಾತ್ರಿ ಇಡೀ ಹಾಗೇ ಇದ್ದರು!

RSS leader died after heart attack

ಬಾಗಲಕೋಟೆ: ಸಾವು ಎನ್ನುವುದು ಹೇಗೆ ಆವರಿಸಿಬಿಡುತ್ತದೆ ಎಂದು ಹೇಳುವುದೇ ಕಷ್ಟ. ಅವರು ಶುಕ್ರವಾರ ರಾತ್ರಿ ಕಾರಿಗೆ ಪೆಟ್ರೋಲ್‌ ಹಾಕಿಸಿದ್ದರು. ಪೆಟ್ರೋಲ್‌ ಪಂಪ್‌ನಿಂದ ಕಾರನ್ನು ಸ್ವಲ್ಪ ಮುಂದೆ ತಂದಿದ್ದರು. ಅಲ್ಲೇ ಕಾರನ್ನು ನಿಲ್ಲಿಸಿದ್ದರು. ಅಲ್ಲಿಂದ ಮುಂದೆ ಕಾರು ಚಲಿಸಲಿಲ್ಲ, ಅವರ ಬದುಕೂ ಸ್ತಬ್ಧವಾಗಿ ಹೋಗಿತ್ತು. ಆದರೆ, ಇದೆಲ್ಲ ಗೊತ್ತಾಗುವ ಹೊತ್ತಿಗೆ ಬೆಳಗಾಗಿ ಹೋಗಿತ್ತು. ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಾಗಲಕೋಟೆ ಜಿಲ್ಲಾ ಮುಖಂಡ ಸಿದ್ದು ಚಿಕ್ಕದಾನಿ (45) ಅವರು ಹೃದಯಾಘಾತದಿಂದ (Heart attack) ಪ್ರಾಣ ಕಳೆದುಕೊಂಡ ರೀತಿ.

ಸಿದ್ದು ಚಿಕ್ಕದಾನಿ ಅವರು ಬಾಗಲಕೋಟೆಯ ಆರೆಸ್ಸೆಸ್‌ ವಲಯದಲ್ಲಿ ಚಿರಪರಿಚಿತ ಹೆಸರು (RSS Leader). ಅವರು ವಾಸವಾಗಿರುವುದು ಲೋಕಾಪುರ ಪಟ್ಟಣದಲ್ಲಿ. ಶುಕ್ರವಾರ ರಾತ್ರಿ ಅವರು ತಮ್ಮ ಕಾರಿಗೆ ಪೆಟ್ರೋಲ್‌ ಹಾಕಿಸಲೆಂದು ಪಂಪ್‌ಗೆ ತೆರಳಿದ್ದರು. ಅದಾಗಲೇ ಪಂಪ್‌ ಮುಚ್ಚುವ ಹೊತ್ತಾಗಿತ್ತು.

ಪೆಟ್ರೋಲ್‌ ಹಾಕಿಕೊಂಡು ಹಣ ಕೊಟ್ಟು ಕಾರನ್ನು ಸ್ಟಾರ್ಟ್‌ ಮಾಡಿ ಸ್ವಲ್ಪ ಮುಂದೆ ಹೋಗಿ ಪೆಟ್ರೋಲ್‌ ಪಂಪ್‌ ಆವರಣದಲ್ಲೇ ಸೈಡಿಗೆ ನಿಲ್ಲಿಸಿದ್ದರು. ಶನಿವಾರ ಮುಂಜಾನೆ ಪೆಟ್ರೋಲ್‌ ಪಂಪ್‌ನ ಕಾರ್ಮಿಕರು ಬಂದು ನೋಡಿದರು. ಈ ಕಾರು ಯಾಕೆ ಇನ್ನೂ ಇಲ್ಲೇ ನಿಂತಿದೆ. ಸಿದ್ದು ಚಿಕ್ಕದಾನಿ ಅವರು ಏನು ಮಾಡುತ್ತಿದ್ದಾರೆ ಎಂದು ಹೋಗಿ ನೋಡಿದರೆ ಚಿಕ್ಕದಾನಿ ಅವರು ಅವರು ಕಾರಿನ ಡ್ರೈವಿಂಗ್‌ ಸೀಟಿನಲ್ಲಿ ಕುಳಿತವರು ಕುಳಿತ ಹಾಗೇ ಇದ್ದಾರೆ. ಆದರೆ, ಉಸಿರು ಮಾತ್ರ ಇರಲಿಲ್ಲ. ಕೂಡಲೇ ಎಲ್ಲ ಸಂಬಂಧಿಕರಿಗೆ ತಿಳಿಸಲಾಯಿತು.

ಬಹುಶಃ ಕಾರಿಗೆ ಪೆಟ್ರೋಲ್‌ ಹಾಕಿಸಿಕೊಂಡು ಮುಂದೆ ಸಾಗಿದ ಕೂಡಲೇ ಚಿಕ್ಕದಾನಿ ಅವರಿಗೆ ಎದೆ ಹಿಡಿದುಕೊಂಡಿದೆ. ಕೂಡಲೇ ಅವರು ಸಾವರಿಸಿಕೊಳ್ಳಲು ಕಾರನ್ನು ಸೈಡಿಗೆ ಹಾಕಿದ್ದಾರೆ. ಸ್ವಲ್ಪ ಹೊತ್ತು ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ, ಅದು ಅವರ ಕೈಯಲ್ಲಿ ಇರಲಿಲ್ಲ. ಆಗಲೇ ಹೃದಯಾಘಾತದಿಂದ ಪ್ರಾಣವೇ ಹೋಗಿದೆ.

ರಾತ್ರಿಯಾಗಿದ್ದರಿಂದ ಯಾರಿಗೂ ಕಾರಿನೊಳಗೆ ಯಾರೋ ಇದ್ದಾರೆ ಎನ್ನುವುದು ಗೊತ್ತಾಗಿಲ್ಲ. ಹೀಗಾಗಿ ಡ್ರೈವಿಂಗ್‌ ಸೀಟಿನಲ್ಲಿ ಕುಳಿತ ಸ್ಥಿತಿಯಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮುಧೋಳ ತಾಲೂಕಿನ ಲೋಕಾಪುರ ನಿವಾಸಿಯಾಗಿರುವ ಚಿಕ್ಕದಾನಿ ಅವರು ಸ್ವಲ್ಪ ದಪ್ಪಗಿದ್ದರು ಅನ್ನುವುದು ಬಿಟ್ಟರೆ ಆರೋಗ್ಯವಾಗಿಯೇ ಇದ್ದರು. ತುಂಬು ಚಟುವಟಿಕೆಯಲ್ಲಿದ್ದರು. ಹಾಗಿದ್ದರೂ 45ನೇ ವಯಸ್ಸಿಗೆ ಪ್ರಾಣ ಕಳೆದುಕೊಂಡಿದ್ದು ನೋಡಿ ಜನರು ಆತಂಕಿತರಾಗಿದ್ದಾರೆ.

ಇದನ್ನೂ ಓದಿ : Heart Attack : ಜೀವಾ ಕ್ಷಣಿಕ ಕಣೋ!; ಔಷಧ ಖರೀದಿಗೆ ಮೆಡಿಕಲ್‌ಗೆ ಬಂದಾಗಲೇ ಹೃದಯಾಘಾತ

ಕೋಲಾರದಲ್ಲಿ ಮೆಡಿಕಲ್ ಸ್ಟೋರ್‌ಗಳ ಮೇಲೆ ದಾಳಿ

ಕೋಲಾರ: ಸೈಬರ್ ಕ್ರೈಂ ಪೋಲೀಸರು ನಗರದ ಮೆಡಿಕಲ್ ಸ್ಟೋರ್ ಗಳ ಮೇಲೆ ದಾಳಿ ಮಾಡಿದ್ದಾರೆ.ಸ ವೈದ್ಯರ ಅನುಮತಿ ಇಲ್ಲದೆ ಮತ್ತೇರಿಸುವ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ದಾಳಿ ನಡೆದಿದೆ.

ಕೋಲಾರ ನಗರದ ಬಸ್ ನಿಲ್ದಾಣದ ಸಮೀಪದ ಶ್ರೀ ನಂಜುಂಡೇಶ್ವರ ಮೆಡಿಕಲ್ ಸ್ಟೋರ್ ಹಾಗೂ ಶ್ರೀ ಶ್ರೀಕಾರ್ ಮೆಡಿಕಲ್ ಸ್ಟೋರ್ ಗಳ ಮೇಲೆ ದಾಳಿ ಮಾಡಲಾಗಿದೆ. ಎಲ್ಲಿ ಏನೇನು ವಶವಾಗಿದೆ, ಏನಾದರೂ ಸಿಕ್ಕಿದೆಯಾ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ವೈದ್ಯರ ಅನುಮತಿ ಇಲ್ಲದೆ ಯುವಕರಿಗೆ ಮತ್ತೇರಿಸುವ ಮಾತ್ರೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದೆ. ಜತೆಗೆ ಇವುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿಯೂ ಇತ್ತು.

ಮತ್ತೇರಿಸಿಕೊಳ್ಳುತ್ತಿದ್ದ ಕೆಲವು ಯುವಕರನ್ನು ಸೈಬರ್ ಕ್ರೈಂ ಪೋಲೀಸರ ವಶಕ್ಕೆ ಪಡೆದ ಬಳಿಕ ಈ ದಾಳಿ ನಡೆದಿದೆ. ಅಂದರೆ ಈ ಯುವಕರು ಎಲ್ಲಿಂದ ಔಷಧ ಪಡೆಯುತ್ತಿದ್ದರು ಎಂಬುದನ್ನು ತಿಳಿದುಕೊಂಡೇ ದಾಳಿ ನಡೆಸಿದೆ. ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ.

Exit mobile version