Site icon Vistara News

Self Harming : 3 ಕಂದಮ್ಮಗಳ ಜತೆ ಬಾವಿಗೆ ಹಾರಿದರೂ ಬದುಕುಳಿದ ತಾಯಿ; ಮಕ್ಕಳು ಮೃತ್ಯು

Children death

ಬಾಗಲಕೋಟೆ: ಜಿಲ್ಲೆಯಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ಮೂರು ಮಕ್ಕಳನ್ನು ಕಟ್ಟಿಕೊಂಡು ಬಾವಿಗೆ (Mother jumps into well with three children) ಹಾರಿದ್ದಾಳೆ (Self Harming). ಆದರೆ ಅದೃಷ್ಟವೋ, ದುರದೃಷ್ಟವೋ ಆ ತಾಯಿ ಬದುಕುಳಿದಿದ್ದಾಳೆ. ಮೂವರು ಮಕ್ಕಳೂ ದಾರುಣವಾಗಿ ಪ್ರಾಣ ಕಳೆದುಕೊಂಡಿವೆ. ಈ ಮಕ್ಕಳಲ್ಲಿ ಒಂದು ಇನ್ನೂ 15 ದಿನದ ಪುಟ್ಟ ಹಸುಳೆ.

ಬಾಗಲಕೋಟೆ ಜಿಲ್ಲೆಯ ಕುಂಬಾರಹಳ್ಳ ಗ್ರಾಮದ ತೋಟದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಕುಂಬಾರಹಳ್ಳ ಗ್ರಾಮದ ಯಮನವ್ವ ಗುಡೆಪ್ಪಗೋಳ(28) ಎಂಬವರೇ ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿದವರು. ಮತ್ತು ಈತ ಪ್ರಾಣಾಪಾಯದಿಂದ ಪಾರಾದವರು.

ಯಮನವ್ವ ಗುಡೆಪ್ಪಗೋಳ ಅವರು ತನ್ನ 15 ದಿನದ ಹೆಣ್ಣು ಶಿಶು, 6 ವರ್ಷದ ಮಗ ಶ್ರೀಶೈಲ, 4 ವರ್ಷದ ಮಗಳು ಶ್ರಾವಣಿಯನ್ನು ಕರೆದುಕೊಂಡು ಹೋಗಿ ಬಾವಿಗೆ ಹಾರಿದ್ದಾರೆ. ಆದರೆ, ಅದು ಹೇಗೋ ತಾಯಿ ಮಾತ್ರ ಬಚಾವಾಗಿದ್ದಾರೆ.

ಈ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮನೆಯಲ್ಲಿನ ಕಿರಿಕಿರಿ, ಹಿಂಸೆಯಿಂದ ಈ ತಾಯಿ ನೊಂದಿದ್ದರು ಎಂದು ಹೇಳಲಾಗುತ್ತಿದೆ.

ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಸಿಪಿಐ ಮಲ್ಲಪ್ಪ‌ ಮಡ್ಡಿ, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ ಸಂಖ, ಭೇಟಿ ನೀಡಿದ್ದಾರೆ.

ಸ್ಥಳೀಯರ ನೆರವಿನ ಕಾರ್ಯಾಚರಣೆಯ ಮೂಲಕ ಬಾವಿಯಿಂದ ಮಕ್ಕಳ ಶವ ಹೊರ ತೆಗೆಯಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Self Harming : ಮಣ್ಣಾಗಿ ಹೋಯ್ತು ಶಿಕ್ಷಕನ ಕನಸು; ಸರ್ಕಾರದ ವಿರುದ್ಧ ಡೆತ್‌ ನೋಟ್‌ ಬರೆದಿಟ್ಟು ಯುವಕ ಆತ್ಮಹತ್ಯೆ

ಕೆರೆಗೆ ಹಾರಿ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಘಟನೆ ಕಾವೇರಿ (17) ಎಂಬ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಸರಿಯಾಗಿ ಓದು ಎಂದು ಪೋಷಕರು ಬೈಯ್ದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಯು ಪ್ರಥಮ ವರ್ಷದಲ್ಲಿ ಓದುತ್ತಿದ್ದ ಕಾವೇರಿ ಕಲಿಕೆ ಕಡೆಗೆ ಅಷ್ಟಾಗಿ ಗಮನ ಕೊಡದೆ ಇದ್ದಾಗ ಮನೆಯವರು ಬುದ್ಧಿವಾದ ಹೇಳಿದ್ದರು. ದಿನಾಲೂ ಕಾಲೇಜಿಗೆ ಹೋಗಿ ಚೆನ್ನಾಗಿ ಓದು ಎಂದು ಪೋಷಕರು ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡ ಆಕೆ ಈಗ ಸಾವಿಗೆ ಶರಣಾಗಿದ್ದಾಳೆ. ಗುರುವಾರ ರಾತ್ರಿ ಆಕೆ ಮನೆಯಿಂದ ಹೊರಗೆ ಹೋಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಳಗ್ಗೆ ಆಕೆ ಕಾಣದೆ ಇದ್ದಾಗ ಹುಡುಕಾಡಿದಾಗ ಆಕೆ ಕೆರೆಗೆ ಹಾರಿದ್ದು ಕಂಡುಬಂದಿದೆ. ಯಾಕಾದರೂ ಮಗಳಿಗೆ ಹೇಳಲು ಹೋದವೋ ಎಂದು ಮನೆಯವರು ಈಗ ಕಣ್ಣೀರು ಹಾಕುತ್ತಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version