ಬಾಗಲಕೋಟೆ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬಂದಿರುವ ಕಾರಣದಿಂದ ಪ್ರಧಾನಿ ಮೋದಿಯವರಿಗೆ ಸಂಪ್ರದಾಯದಂತೆ ಕರ್ನಾಟಕ ನೆನಪಾಗಿದೆ. ಹೀಗಾಗಿ ಮೇಲಿಂದ ಮೇಲೆ ರಾಜ್ಯಕ್ಕೆ ಸೈಕಲ್ ತುಳಿಯುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿಯವರು ರಾಜ್ಯದ ಕಡೆ ಮುಖ ಮಾಡುವ ವೇಳೆಗೆ ಬಿಜೆಪಿಯ ಸುಳ್ಳಿನ ಕಾರ್ಖಾನೆಯ ಕಾರ್ಮಿಕರು ಸುಳ್ಳುಗಳ ಉತ್ಪಾದನೆಯಲ್ಲಿ ಬಿರುಸಾಗಿದ್ದಾರೆ. ದೇಶದ ಆರ್ಥಿಕತೆ ಕುಸಿದಿರುವುದು, ಹಣದುಬ್ಬರ ಸೇರಿದಂತೆ ಪ್ರಧಾನಿ ಮೋದಿ ಅವರು ಆಡಳಿತಾತ್ಮಕವಾಗಿ ದೇಶವನ್ನು ಸೋಲಿಸಿದ್ದಾರೆ. ದೇಶದ ಜನ ಎರಡು ಬಾರಿ ಕೊಟ್ಟ ಬಹುಮತಕ್ಕೆ ಅನ್ಯಾಯ, ಅವಮಾನ ಮಾಡಿರುವ ಕೇಂದ್ರ ಸರ್ಕಾರ ತಮಗೆ ಮತ ಹಾಕಿದವರ ಬದುಕನ್ನೂ ಹೈರಾಣ ಮಾಡಿಟ್ಟು ಕೇವಲ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದಿಸುವ ಸುಳ್ಳಿನ ಆಧಾರದಲ್ಲಿ ತನ್ನ ಸಂಪ್ರದಾಯದಂತೆ ಜನರನ್ನು ಬಕ್ರಾ ಮಾಡಲು ಮುಂದಾಗಿದೆ ಎಂದರು.
ದೇಶದ ವಿದೇಶಿ ಸಾಲ 2013-14ರಲ್ಲಿ 409.4 ಬಿಲಿಯನ್ ಡಾಲರುಗಳಷ್ಟಿತ್ತು. 2014ರ ಮೇನಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು 58 ರೂಪಾಯಿಗಳಷ್ಟಿತ್ತು. ಹಾಗಾಗಿ ಅಂದು 23.74 ಲಕ್ಷ ಕೋಟಿಗಳಷ್ಟು ವಿದೇಶಿ ಸಾಲ ಇತ್ತು.
2022ರ ಜೂನ್‌ನಲ್ಲಿ ಆರ್‌ಬಿಐ ಪ್ರಕಟಿಸಿರುವಂತೆ ಭಾರತದ ವಿದೇಶಿ ಸಾಲ 619 ಬಿಲಿಯನ್ ಡಾಲರುಗೆ ಏರಿದೆ. ಈಗ ರೂಪಾಯಿಯ ಬೆಲೆ 82 ರೂ. ಆಗಿದೆ. ಆದ್ದರಿಂದ ಈಗ ವಿದೇಶಿ ಸಾಲ 50.76 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಹೊರ ದೇಶಗಳಲ್ಲಿ ಮಾಡಿದ ಸಾಲ 27 ಲಕ್ಷ ಕೋಟಿ ರೂಪಾಯಿಗಳು. ಆದರೆ, ಸುಳ್ಳಿನ ಕಾರ್ಖಾನೆಯಲ್ಲಿ, “ಮೋದಿಯವರು ದೇಶದ ಸಾಲ ತೀರಿಸಿದ್ದಾರೆ” ಎಂದು ಭಜನೆ ಮಾಡುತ್ತಿದ್ದಾರೆ. ಸತ್ಯ ಏನೆಂದರೆ ಮೋದಿಯವರು ಸಾಲ ತೀರಿಸಿಲ್ಲ ಬದಲಾಗಿ ಹಿಮಾಲಯದಂತೆ ಬೆಳೆಸಿದ್ದಾರೆ ಎಂದರು.
10 ವರ್ಷಗಳಲ್ಲಿ ಮನಮೋಹನ್ ಸಿಂಗರು 2 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದರು. ಅದರಲ್ಲಿ 1.9 ಕೋಟಿ ಮನೆಗಳಿಗೆ ಉಚಿತ ಸಂಪರ್ಕ ಕೊಟ್ಟಿದ್ದರು. ಭಾರತದ ಚರಿತ್ರೆಯಲ್ಲೇ ಮೊಸರು, ಮಜ್ಜಿಗೆ, ಹಾಲು, ಲಸ್ಸಿ, ಗೋಧಿ, ಬಾರ್ಲಿ, ಬೆಲ್ಲ, ಜೇನು ತುಪ್ಪ, ಮಕ್ಕಳ ಪೆನ್ನು, ಪುಸ್ತಕ, ಪೆನ್ಸಿಲ್ಲುಗಳಿಗೆ ತೆರಿಗೆ ಹಾಕಿದ ಉದಾಹರಣೆಗಳಿಲ್ಲ. ಆದರೆ ಮೋದಿ ಸರ್ಕಾರ ಇವಕ್ಕೆಲ್ಲಾ 5% ರಿಂದ 18% ತೆರಿಗೆ ಹಾಕಿದೆ. ಮತ್ತೊಂದು ಕಡೆ
ಅಂಬಾನಿ ಅದಾನಿ ಮುಂತಾದ ಕಾರ್ಪೊರೇಟ್ ಬಂಡವಾಳಿಗರ ಮೇಲಿನ ತೆರಿಗೆಯನ್ನು ಮೋದಿ ಇಳಿಸಿದ್ದಾರೆ. ಮನಮೋಹನಸಿಂಗರು ಶೇ.30 ರಷ್ಟು ತೆರಿಗೆಯನ್ನು ದೊಡ್ಡ ದೊಡ್ಡ ಬಂಡವಾಳಿಗರ ಮೇಲೆ ಹಾಕುತ್ತಿದ್ದರು. ಮೋದಿಯವರು ಅದನ್ನು ಶೇ.22 ಕ್ಕೆ ಇಳಿಸಿದರು.
ಮೋದಿಯವರ ಆಡಳಿತದ ಬಗ್ಗೆ ಶ್ರೀಮಂತ ಕಾರ್ಪೊರೇಟ್‌ಗಳು ಸೆಲೆಬ್ರೇಟ್ ಮಾಡಬೇಕೆ ಹೊರತು ಬಡ, ಹಿಂದುಳಿದ, ದಲಿತ, ಮಹಿಳಾ ಸಮುದಾಯಗಳ ಯುವಕ ಯುವತಿಯರು ಸಂಭ್ರಮಿಸುವುದರಲ್ಲಿ ಅರ್ಥವೇ ಇಲ್ಲ. ಬೆಂಕಿಯಲ್ಲಿ ಬಿದ್ದವರಿಗೆ ಸ್ವರ್ಗದಲ್ಲಿದ್ದೇವೆ ಎಂಬ ಭ್ರಮೆಯನ್ನು ವಾಟ್ಸಾಪ್ ವಿಶ್ವವಿದ್ಯಾಲಯ ಮತ್ತು ಇದೆ ಅಂಬಾನಿ, ಅದಾನಿಗಳು ನಡೆಸುತ್ತಿರುವ ಮೀಡಿಯಾಗಳು ಹುಟ್ಟಿಸುತ್ತಿವೆ. ಕನ್ನಡಿಗರು ಈ ಸುಳ್ಳು ಸುದ್ದಿಗಳನ್ನು ನಂಬಬಾರದು. ಯಾವುದನ್ನೆ ನಂಬಬೇಕಿದ್ದರೂ ಪರಿಶೀಲಿಸಿಯೆ ತೀರ್ಮಾನಿಸಬೇಕೆಂದು ವಿನಂತಿಸುತ್ತೇನೆ ಎಂದರು.
ಇದನ್ನೂ ಓದಿ | Karnataka Election : ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ: ಡಿ.ಕೆ. ಶಿವಕುಮಾರ್ ಸ್ಪಷ್ಟನೆ