ಬಾಗಲಕೋಟೆ: ರಾತ್ರಿ ಹೊತ್ತು ಕೆಲವೊಂದು ಏರಿಯಾದಲ್ಲಿ ಓಡಾಡಬೇಕಾದರೆ ಗುಂಡಿಗೆ ಗಟ್ಟಿ ಇರಬೇಕು. ಕಳ್ಳ-ಕಾಕರು, ಕೊಲೆಗಡುಕರು, ಸುಲಿಗೆಕೋರರು ಇರುತ್ತಾರೆ ಎಂಬ ಕಾರಣಕ್ಕಲ್ಲ, ಬದಲಿಗೆ ಬೀದಿ ನಾಯಿಗಳ ಕಾಟಕ್ಕೆ.. ಒಬ್ಬಂಟಿಯಾಗಿ ಓಡಾಡುವರನ್ನು ಕಂಡರೆ ಸಾಕು ರೊಚ್ಚಿಗೇಳುವ ಬೀದಿ ನಾಯಿಗಳು (Street Dog Attack ) ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ವಯೋವೃದ್ಧರು ಹಾಗೂ ಶಾಲಾ ಮಕ್ಕಳು ಒಬ್ಬೊಬ್ಬರೇ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಸದ್ಯ ಬಾಗಲಕೋಟೆಯ ಇಲಕಲ್ ನಗರದ ಗಾಂಧಿ ಚೌಕ್‌ನಲ್ಲಿ ಬೀದಿ ನಾಯಿಗಳು ಯುವಕನ ಮೇಲೆ ಎರಗಿ ಕಚ್ಚಿದೆ.
ಯುವಕನೊರ್ವ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುತ್ತಿದ್ದಾಗ, ಅಡ್ಡ ಹಾಕಿದ ಹತ್ತಕ್ಕೂ ಹೆಚ್ಚು ನಾಯಿಗಳು ಏಕಾಏಕಿ ಅಟ್ಯಾಕ್ ಮಾಡಿವೆ. ರಾತ್ರಿ ಹೊತ್ತು ಆಗಿದ್ದರಿಂದ ಯುವಕನ ರಕ್ಷಣೆಗೆ ಯಾರು ಇರಲಿಲ್ಲ. ಬೀದಿನಾಯಿಗಳ ಕೈಯಿಂದ ತಪ್ಪಿಸಿಕೊಳ್ಳಲು ಯುವಕ ಹರಸಾಹಸ ಪಟ್ಟಿದ್ದ. ಎಂಟತ್ತು ಬೀದಿ ನಾಯಿಗಳ ಡೇಂಜರಸ್ ಅಟ್ಯಾಕ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಏಪ್ರಿಲ್ 7ರ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಯುವಕ ಓಡಿ ಹೋಗಲು ಪ್ರಯತ್ನ ಪಟ್ಟರು ಬಿಡದ ನಾಯಿಗಳು ಅಟ್ಟಾಡಿಸಿಕೊಂಡು ಹೋಗಿವೆ. ಯುವಕನ ನೆಲಕ್ಕುರುಳಿಸಿ ಯುವಕನ ಕಾಲು-ಕೈ ಎಲ್ಲ ಕಚ್ಚಿ ಎಳೆದಿವೆ. ಇತ್ತ ಯುವಕ ಜೋರಾಗಿ ಕಿರುಚುತ್ತಾ ಈ ಬೀದಿನಾಯಿಗಳಿಂದ ಬಿಡಿಸಿಕೊಳ್ಳಲು ಮುಂದಾಗಿದ್ದಾನೆ. ಆದರೆ ಹುಚ್ಚು ಹಿಡಿದಂತೆ ವರ್ತಿಸುತ್ತಿದ್ದ ಬೀದಿ ನಾಯಿಗಳು ಮತ್ತಷ್ಟು ದಾಳಿ ಮಾಡಿ ಗಾಯಗೊಳಿಸಿದೆ. ಜೀವ ಕಾಪಾಡಿಕೊಳ್ಳಲು ಯುವಕ ಹರಸಾಹಸವನ್ನೇ ಪಟ್ಟಿದ್ದ.
ಯುವಕ ಕೊನೆಗೆ ಕಷ್ಟ ಪಟ್ಟು ಹೇಗೋ ಬೀದಿನಾಯಿಗಳನ್ನು ಕೊಂಚ ದೂರಕ್ಕೆ ಓಡಿಸಿ, ಸಣ್ಣ ಗಲ್ಲಿಯೊಳಗೆ ನುಗ್ಗಿದ್ದ. ಆತ ಓಡೋದನ್ನು ಕಂಡೊಡನೆ ವಾಪಸ್ ಬಂದ ಬೀದಿ ನಾಯಿಗಳು ಒಂದರ ಹಿಂದೆ ಒಂದು ಮತ್ತೆ ಯುವಕನನ್ನು ಅಟ್ಟಾಡಿಸಿದೆ. ಬೀದಿನಾಯಿಗಳು ದಾಳಿ ನಡೆಸಿದ ವಿಡಿಯೋ ವೈರಲ್ ಆಗಿದೆ. ಬೀದಿನಾಯಿಗಳ ದಾಳಿಗೆ ತುತ್ತಾದ ಯುವಕ ಯಾರು, ಆತನ ಆರೋಗ್ಯ ಹೇಗಿದೆ ಎಂಬುದು ತಿಳಿದು ಬಂದಿಲ್ಲ. ಈ ವಿಡಿಯೊ ನೋಡಿದ ನೆಟ್ಟಿಗರು ಬೀದಿನಾಯಿಗಳ ಹಾವಳಿ ತಪ್ಪಿಸಿ ಎಂದು ಮನವಿ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ