ರಮೇಶ ದೊಡ್ಡಪುರ, ಬೆಂಗಳೂರು
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆಯೇ ಕರ್ನಾಟಕದತ್ತ ಗಮನ ಕೇಂದ್ರೀಕರಿಸಿರುವ ರಾಷ್ಟ್ರೀಯ ಬಿಜೆಪಿ ವರಿಷ್ಠರು ಕರ್ನಾಟಕದ ಪ್ರವಾಸ ಆರಂಭಿಸಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಡಿಸೆಂಬರ್ 15ಕ್ಕೆ ಕರ್ನಾಟಕಕ್ಕೆ ಆಗಮಿಸಿ, ರಾಜ್ಯದ 10 ಕಡೆಗಳಲ್ಲಿ ವರ್ಚುವಲ್ ರ‍್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಅಂದಿನ (2016) ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು. ಬಿಜೆಪಿ ಸದಸ್ಯತ್ವ ಅಭಿಯಾನದ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಎಲ್ಲ ಜಿಲ್ಲೆಗಳಲ್ಲೂ ಬಿಜೆಪಿಯ ಸ್ವಂತ ಕಚೇರಿ ಕಟ್ಟಡಗಳನ್ನು ಹೊಂದುವ ಗುರಿ ಹೊಂದಲಾಗಿತ್ತು.
ಅದರಂತೆ ಕರ್ನಾಟಕದ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ 34 ಕಟ್ಟಡಗಳನ್ನು ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಈಗಾಗಲೆ ಸ್ವಂತ ಕಟ್ಟಡ ಇರುವ ಜಿಲ್ಲೆಗಳನ್ನು ಹೊರತುಪಡಿಸಿ 11 ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಿಸುವ ಘೋಷಣೆ ಮಾಡಿ ಕೆಲಸ ಆರಂಭಿಸಲಾಗಿತ್ತು. ಇದೀಗ 11 ರಲ್ಲಿ 10 ಜಿಲ್ಲೆಗಳಲ್ಲಿ ಜಿಲ್ಲಾ ಬಿಜೆಪಿ ಕಚೇರಿಗಳ ನಿರ್ಮಾಣ ಸಂಫೂರ್ಣವಾಗಿದೆ. ಕಚೇರಿಗಳನ್ನು ಉದ್ಘಾಟಿಸುವ ಸಲುವಾಗಿ ಜೆ.ಪಿ. ನಡ್ಡಾ ಕೊಪ್ಪಳಕ್ಕೆ ಡಿ.15ರಂದು ಆಗಮಿಸಲಿದ್ದಾರೆ.
ವರ್ಚುವಲ್ ರ‍್ಯಾಲಿ
ಕೊಪ್ಪಳ ಸೇರಿ ಎಲ್ಲ 10 ಜಿಲ್ಲಾ ಕಾರ್ಯಾಲಯದಲ್ಲಿ ಡಿ.14ರಿಂದಲೇ ವಾಸ್ತು ಹೋಮ, ಗಣಪತಿ ಹೋಮ, ಗೋ ಪ್ರವೇಶಗಳನ್ನು ನೆರವೇರಿಸಲಾಗುತ್ತದೆ. ಬೀದರ್, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಹಾವೇರಿ, ಕೋಲಾರ ಹಾಗೂ ಚಾಮರಾಜನಗರ ಕಚೇರಿಗಳು ಉದ್ಘಾಟನೆ ಆಗಲಿವೆ.
ಪೂಜೆಯ ನಂತರ ಜೆ.ಪಿ. ನಡ್ಡಾ ಅವರು ಸಮೀಪದಲ್ಲೇ ಆಯೋಜಿಸಿರುವ ಮೈದಾನಕ್ಕೆ ತೆರಳಲಿದ್ದಾರೆ. ಸುಮಾರು 25 ಸಾವಿರ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ರೀತಿ ಉಳಿದ 9 ಜಿಲ್ಲೆಗಳಲ್ಲೂ ಬೃಹತ್ ಪರದೆಗಳನ್ನು ಅಳವಡಿಸುವ ಮೂಲಕ ಸಾವಿರಾರು ಕಾರ್ಯಕರ್ತರು ಭಾಷಣವನ್ನು ವೀಕ್ಷಿಸಲಿದ್ದಾರೆ ಎಂದು ಜಿಲ್ಲಾ ಕಾರ್ಯಾಲಯ ಭವನ ನಿರ್ಮಾಣ ರಾಜ್ಯ ಸಮಿತಿ ಸಂಚಾಲಕರಾದ ಪ್ರೊ. ಎಂ. ನಾಗರಾಜ್ ಅವರು ತಿಳಿಸಿದ್ದಾರೆ.
ಕಲಬುರಗಿ, ಯಾದಗಿರಿಯಲ್ಲಿ ಕಾರ್ಯಾಲಯ ನಿರ್ಮಾಣ ಈಗಾಗಲೆ ಚಾಲ್ತಿಯಲ್ಲಿದೆ. ಸದ್ಯದಲ್ಲೆ ಶಿರಸಿ, ಮಡಿಕೇರಿ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಬೆಳಗಾವಿ, ವಿಜಯನಗರದಲ್ಲೂ ಆರಂಭವಾಗಲಿದೆ. ಈ ಮೂಲಕ ಪಕ್ಷದ ಸಂಘಟನೆಯ ಚಟುವಟಿಕೆಯ ಕೇಂದ್ರಗಳು ರೂಪುಗೊಳ್ಳಲಿವೆ ಎಂದು ನಾಗರಾಜ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ ಸೇರಿ ಅನೇಕ ಮುಖಂಡರು ಭಾಗವಹಿಸಲಿದ್ದಾರೆ. ಇನ್ನೂ ಕಾರ್ಯಕ್ರಮದ ಅಂತಿಮ ರೂಪರೇಷೆ ಸಿದ್ಧವಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ʼಗುಜರಾತ್ ಮಾದರಿʼ ಜಪದಲ್ಲಿ ಕರ್ನಾಟಕ ಬಿಜೆಪಿ: ಕಾರ್ಯಕರ್ತರಲ್ಲಿ, ಹಿರಿಯರಲ್ಲಿ ಆತಂಕ