Site icon Vistara News

Bahuroopi Rangotsava | ರಂಗಾಯಣದಲ್ಲಿ ಒಂದೇ ಸಿದ್ಧಾಂತವಾದಿಗಳ ಆರ್ಭಟ: ಅಡ್ಡಂಡ ಸಿ.ಕಾರ್ಯಪ್ಪ

Bahuroopi Rangotsava

ಮೈಸೂರು: ರಾಮಕೃಷ್ಣ ಹೆಗಡೆ ಅವರಿಂದ ರಂಗಾಯಣ ಆರಂಭವಾಯಿತು. ನಂತರ ಕಾಂಗ್ರೆಸ್ ಆಧಿಪತ್ಯ ಶುರುವಾಯಿತು.‌ ರಾಜೇಂದ್ರ ಅವರನ್ನು ಹೊರತುಪಡಿಸಿ ಎಲ್ಲರೂ ಎಡಪಂಥೀಯರು.‌ ವಲಸೆ ಧ್ಯೇಯ ತಂದು ಬಾಂಗ್ಲಾದೇಶದವರಿಗೆ ಕುಮ್ಮಕ್ಕು ನೀಡಿದರು. ನಕ್ಸಲ್, ಮಾವೋವಾದಿಗಳಿಗೆ ಬೆಂಬಲ ನೀಡಿ, ಒಂದೇ ಚಿಂತನೆ, ಸಿದ್ಧಾಂತಗಳ ಆಧಾರದ ಮೇಲೆ ರಂಗಾಯಣ (Bahuroopi Rangotsava) ಕಟ್ಟಿದರು ಎಂದು ರಂಗಾಯಣ ಹಿಂದಿನ ನಿರ್ದೇಶಕರ ವಿರುದ್ಧ ಹಾಲಿ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅಸಮಾಧಾನ ಹೊರಹಾಕಿದರು.

ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ನನ್ನನ್ನು ಚಡ್ಡಿ ಅಂತೆಲ್ಲ ಲೇವಡಿ ಮಾಡಿದರು.‌ ಆದರೆ, ರಂಗಾಯಣದಲ್ಲಿ ರಾಷ್ಟ್ರೀಯತೆ ಕಟ್ಟುವುದು ಹಾಗೂ ಸ್ವಚ್ಛ ರಂಗಾಯಣವೇ ನನ್ನ ಗುರಿಯಾಗಿದ್ದು, ರಾಷ್ಟ್ರೀಯವಾದವನ್ನು ಗಟ್ಟಿಗೊಳಿಸುವುದು ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.

ರಂಗಾಯಣದಲ್ಲಿ ಪಾರದರ್ಶಕತೆ ತಂದಿದ್ದು, ಪರ್ವ ನಾಟಕದಿಂದ 70 ಲಕ್ಷ ರೂಪಾಯಿ ಸಂಪಾದಿಸಿದ್ದೇವೆ. ಹೀಗಾಗಿ ಎಡಚರು ಉರಿಯಲ್ಲಿ ಕ್ಯಾಲೆಂಡರ್ ನೋಡುತ್ತಿದ್ದಾರೆ. ಟಿಪ್ಪು ನಿಜ ಕನಸುಗಳು ನಾಟಕ ಕೆಲವರಿಗೆ ಉರಿಯಾದರೆ ರಾಷ್ಟ್ರೀಯವಾದಿಗಳಿಗೆ ಪಾಂಚಜನ್ಯವಾಗಿದೆ. ಎರಡು ಎಕರೆ ಜಾಗವನ್ನು ಮಾಜಿ ಮುಖ್ಯಮಂತ್ರಿ ಹೆಸರಿ‌ನ ಟ್ರಸ್ಟ್ ಕಬಳಿಸಲು ನೋಡಿತ್ತು. ನಾನು ಅದಕ್ಕೆ ಕಾಂಪೌಂಡ್ ಹಾಕಿಸಿದ್ದೇನೆ. ಆ ಜಾಗವನ್ನು ಸರ್ಕಾರ ರಂಗಾಯಣಕ್ಕೆ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | Karnataka Elections | ಬಿಜೆಪಿಯಿಂದ ಮತ್ತೊಂದು ಮೆಗಾ ಸಮಾವೇಶ: ಡಿ. 18ರಂದು ನಾನಾ ಪ್ರಕೋಷ್ಠಗಳ ಶಕ್ತಿ ಸಂಗಮ

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮೈಸೂರು ರಂಗಾಯಣಕ್ಕೆ ಸಾಂಸ್ಕೃತಿಕ ರಾಯಭಾರಿ ಸ್ಥಾನ ಇದೆ. ರಂಗಾಯಣದಲ್ಲಿ ಕಲೆಯ ತರಬೇತಿ, ಪ್ರೋತ್ಸಾಹ ನೀಡಲಾಗುತ್ತಿದೆ. ವಿಶ್ವದ ರಂಗ ಸಂಸ್ಥೆ, ವಿಶ್ವವಿದ್ಯಾಲಯಗಳಲ್ಲಿ ವೈಚಾರಿಕ ಸಂಘರ್ಷಗಳು ನಡೆಯುತ್ತಿವೆ. ನನ್ನ ಪ್ರಕಾರ ವೈಚಾರಿಕ ಸಂಘರ್ಷಗಳು ನಡೆಯಬೇಕು. ಹೊಸ ಚಿಂತನೆಗಳು, ಸಂಘರ್ಷಗಳಿಂದ ನಾವು ಪಾಠ ಕಲಿತಿರುತ್ತೇವೆ. ಹೊಸ ಪೀಳಿಗೆಗೆ ಪೂರಕವಾದ ವಾಸ್ತವ ಸತ್ಯವನ್ನು ತಿಳಿಸುವ ಕೆಲಸ ಆಗಬೇಕು ಎಂದು ಹೇಳಿದರು.

ನಾಟಕ ಅಭಿನಯದ ಮೂಲಕ ಸಂದೇಶ ರವಾನಿಸುವ ಮಾಧ್ಯಮ. ನಮ್ಮ ಬದುಕಿನಲ್ಲೇ ಸಹಜವಾಗಿ ಇರುವುದಿಲ್ಲ. ನಾನು ಮುಖ್ಯಮಂತ್ರಿ, ಇದನ್ನು ಮಾತನಾಡಬಾರದು. ಹೀಗೆ ಇರಬೇಕು, ಹೀಗೆ ಇರಬಾರದು ಎಂದು ಜಾಗೃತರಾಗಿ ಇರುತ್ತೇವೆ. ಆದರೆ, ಮುಗ್ಧತೆ ಉಳಿಸಿಕೊಳ್ಳುವುದು ಕಷ್ಟ. ಮುಗ್ಧತೆ ಮಾಯವಾಗಿದೆ, ಕೃತಕವಾದ ಭಾವನೆಗಳನ್ನು ತುಂಬಿದ್ದೇವೆ. ಸಮಾಜ, ಜನರಿಗೋಸ್ಕರ ಕೃತಕವಾಗಿ ಇರುತ್ತೇವೆ. ಸಾಧಕರಿಗೆ ಮಾತ್ರ ಮುಗ್ಧತೆ ಉಳಿಸಿಕೊಳ್ಳುತ್ತಾರೆ. ಆತ್ಮಸಾಕ್ಷಿಗೆ ನಡೆದುಕೊಳ್ಳುವುದು ಕಷ್ಟ. ಆದರೆ ನಟ ರಮೇಶ್ ಅರವಿಂದ್ ಮೊದಲಿನಿಂದಲೂ ಹಾಗೆಯೇ ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಂಗಾಯಣದಲ್ಲಿ ಮಾನವೀಯತೆ ಮೇಲೆ ಪ್ರಯೋಗ ಆಗಬೇಕು. ವಾಸ್ತವಾಂಶಗಳ ಮೇಲೆ ನಾಟಕ ಮಾಡಬೇಕು. ಗೊಂದಲ ನಿವಾರಿಸಲು ಸ್ಪಷ್ಟತೆ, ನಿಷ್ಠುರತೆಯನ್ನು ನಾಟಕದ ಮೂಲಕ ತರಬೇಕು. ಭಾರತೀಯತೆಯ ಆತ್ಮವನ್ನು ಬಹುರೂಪಿಯಲ್ಲಿ ತರಬೇಕು ಎಂದು ಹೇಳಿದರು.

ನಟ, ನಿರ್ದೇಶಕ ರಮೇಶ್ ಅರವಿಂದ್ ಮಾತನಾಡಿ, ನಟನ ಜೀವನ ನೂರಾರು ಬದುಕುಗಳ ಆಗರ. ಮೈಸೂರು ರಂಗಾಯಣದ ಕೊಡುಗೆ ಏನು ಅಂತ ನನಗೆ ಗೊತ್ತಿದೆ. ರಂಗಾಯಣ ರಘು, ಅರುಣ್ ಸಾಗರ್ ಸೇರಿ ಅನೇಕರನ್ನು ನಾನು ನೋಡಿದ್ದೇನೆ. ಮನುಷ್ಯನ ರಕ್ತಕ್ಕಿಂತ ಅಮೂಲ್ಯವಾದದ್ದು ಯಾವುದೂ ಇಲ್ಲ. ಯಾವುದೇ ಕಾರಣಕ್ಕೂ ಅದನ್ನು ಚೆಲ್ಲಲು ಬಿಡಬಾರದು. ಅದೇ ಮಾನವೀಯತೆ, ಅದೇ ಭಾರತೀಯತೆ. ರಂಗಾಯಣ ಚಳವಳಿ ಆಗಲಿ, ಅದರ ಕೇಂದ್ರ ರಂಗಾಯಣವಾಗಲಿ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ, ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಮತ್ತಿತರರು ಇದ್ದರು.

ಇದನ್ನೂ ಓದಿ | Kalyana Kranti Samavesha | ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕದ ಬಾಕಿ ಬ್ಯಾಕ್‌ಲಾಗ್‌ ಹುದ್ದೆ ಭರ್ತಿ: ಸಿದ್ದರಾಮಯ್ಯ

Exit mobile version