ಮಂಗಳೂರು: ಹೋಳಿ ಸಂಭ್ರಮದ ಭಾಗವಾಗಿ ಮಂಗಳೂರಿನಲ್ಲಿ ಆಯೋಜಿಸಿದ್ದ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರು ದಾಳಿ (Bajarang dal attack) ನಡೆಸಿದ್ದಾರೆ. ಅಲ್ಲಿನ ಎಲ್ಲ ಸಲಕರಣೆಗಳು, ಅಲಂಕಾರಿಕ ಸಾಮಗ್ರಿಗಳನ್ನು ಕಿತ್ತೆಸೆಯಲಾಗಿದೆ.
ಮಂಗಳೂರು ನಗರದ ಮರೋಳಿ ಎಂಬಲ್ಲಿನ ಸಾರ್ವಜನಿಕ ಮೈದಾನಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದು ರಂಗ್ ದೇ ಬರ್ಸಾ ಹೆಸರಿನಲ್ಲಿ ಹೋಲಿ ಆಚರಣೆ ಆಯೋಜಿಸಿತ್ತು. ಇದಕ್ಕೆ ಸಾರ್ವಜನಿಕವಾಗಿ ಪ್ರಚಾರ, ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಕೂಡಾ ಹಾಕಲಾಗಿತ್ತು.
ಭಾನುವಾರ ಈ ಕಾರ್ಯಕ್ರಮ ಆರಂಭವಾಗಿ ಸ್ವಲ್ಪ ಹೊತ್ತಿನಲ್ಲೇ ಬಜರಂಗದಳ ಕಾರ್ಯಕರ್ತರು ಅಲ್ಲಿಗೆ ನುಗ್ಗಿ ಆಕ್ಷೇಪಿಸಿದರು ಮತ್ತು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಕಾರ್ಯಕ್ರಮ ಆಯೋಜಕರು ಮಾತನಾಡೋಣ ಎಂದು ಹೇಳಿದರೂ ಒಂದು ತಂಡ ಅಲ್ಲಿದ್ದ ವಸ್ತುಗಳನ್ನು ಕಿತ್ತೆಸೆಯಿತು, ಬ್ಯಾನರ್‌ಗಳನ್ನು ಹರಿದುಹಾಕಿತು.
ರಂಗ್ ದೇ ಬರ್ಸಾ ಎಂಬ ಕಾರ್ಯಕ್ರಮ ಇದಾಗಿದ್ದು, ಯುವಕ-ಯುವತಿಯರು ಡಿಜೆ ಪಾರ್ಟಿ ಜೊತೆಗೆ ಬಣ್ಣ ಎರಚಿ ಸಂಭ್ರಮಿಸುತ್ತಿದ್ದರು. ಇದರಲ್ಲಿ ಅಶ್ಲೀಲ ವರ್ತನೆ ನಡೆಯುತ್ತಿದೆ ಎಂದು ಆರೋಪಿಸಿ ಬಜರಂಗದಳ ದಾಳಿ ಮಾಡಿದೆ. ಮಾತ್ರವಲ್ಲ ಯುವತಿಯರು ಅನ್ಯಕೋಮಿನ ಯುವಕರ ಜೊತೆ ಹೋಳಿ ಆಚರಣೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದೆ. ಆದರೆ, ಆಯೋಜಕರು ಈ ಆರೋಪವನ್ನು ನಿರಾಕರಿಸಿ ಸಮಾಧಾನ ಮಾಡಲು ಯತ್ನಿಸಿದರೂ ಫಲ ಸಿಗಲಿಲ್ಲ.
ಹೋಳಿ ಸಂಭ್ರಮದ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನು ಪುಡಿಗೈದು ದಾಂಧಲೆ ಮಾಡಲಾಗಿದೆ. ಈ ವೇಳೆ ಭಜರಂಗದಳ ಕಾರ್ಯಕರ್ತರು ಮತ್ತು ಆಯೋಜಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಯೋಜಕರು ಮತ್ತು ಕೆಲವರ ಮೇಲೆ ಹಲ್ಲೆಗೂ ಬಜರಂಗ ದಳದ ಕಾರ್ಯಕರ್ತರು ಯತ್ನಿಸಿದರು.
ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಬಜರಂಗದಳ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಅಷ್ಟು ಹೊತ್ತಿಗೆ ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರೂ ಅಪಾಯವನ್ನು ಗ್ರಹಿಸಿ ಹೊರಟು ಹೋಗಿದ್ದರು. ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, 10 ಮಂದಿ ಅಸ್ವಸ್ಥ
ಕೊಪ್ಪಳ: ಪರೀಕ್ಷೆ ಬರೆಯಲು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ಹಿಂಡು ದಾಳಿ (Honeybee attack) ನಡೆಸಿ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಕೊಪ್ಪಳದಲ್ಲಿ ನಡೆಸಿದೆ. ಈ ವಿದ್ಯಾರ್ಥಿಗಳು ಆರ್‌ಎಂಎಸ್ ಪರೀಕ್ಷೆ ಬರೆಯಲು ಬಂದಿದ್ದರು.
ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ದಿ ಕ್ರೈಸ್ತ ಕಿಂಗ್ ಶಾಲೆಯಲ್ಲಿ ಘಟನೆ ನಡೆದಿದೆ. ತಾಲೂಕಿನ ತಳುವಗೆರಿ, ನಿಡಶೇಸಿ, ಹಿರೇಮನ್ನಾಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿದ್ದರು. ಈ ವೇಳೆ ಕಾಲೇಜಿನ ಆವರಣದಲ್ಲಿದ್ದ ಹೆಜ್ಜೇನುಗಳು ಎದ್ದು ದಾಳಿ ನಡೆಸಿದವು ಎನ್ನಲಾಗಿದೆ.
ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬಂದಿದ್ದರು. ಅವರಲ್ಲಿ ಹೆಚ್ಚಿನವರಿಗೆ ಹೆಜ್ಜೇನು ಕಚ್ಚಿದೆ. ಅವರಲ್ಲಿ 10 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಕುಷ್ಟಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳೊಂದಿಗೆ ಬಂದಿರುವ ಪಾಲಕರ ಮೇಲೆಯೂ ಜೇನುಹುಳಗಳ ದಾಳಿ ನಡೆದಿದೆ. ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಏಕಾಏಕಿ ನಡೆದ ದಾಳಿಯಿಂದ ಅವರೆಲ್ಲ ಕಂಗಾಲಾಗಿ ಹೋಗಿದ್ದಾರೆ.