Site icon Vistara News

Shivamogga attack | ಬಜರಂಗ ದಳ ಸಹ ಸಂಚಾಲಕ ಸುನಿಲ್‌ ಹತ್ಯೆ ಯತ್ನ: ಜ. 10ರಂದು ಸಾಗರ ಬಂದ್‌ಗೆ ಕರೆ

Shivamogga- sunil sameer

ಸಾಗರ: ಇಲ್ಲಿನ ನೆಹರೂ ನಗರದ ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರ ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿ ಕೊಲೆಗೈಯಲು ವಿಫಲ ಯತ್ನ (Shivamogga attack) ನಡೆಸಲಾಗಿದ್ದು, ಇದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ, ಪರಿವಾರದ ಸಂಘಟನೆಗಳು ಜ. 10ರ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸಾಗರ ಬಂದ್‍ಗೆ ಕರೆ ನೀಡಿವೆ.

ನಗರದ ನೆಹರೂ ನಗರದ ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರು ಸೋಮವಾರ ಬೆಳಿಗ್ಗೆ ಬೈಕ್‍ನಲ್ಲಿ ತಮ್ಮ ಮನೆಯಿಂದ ಬಿ.ಎಚ್.ರಸ್ತೆಯ ಆಭರಣ ಜ್ಯುವೆಲರ್ಸ್ ಪಕ್ಕದ ಜಿಯೋ ಕಚೇರಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಅಂಗಡಿ ಎದುರು ಬೈಕ್ ನಿಲ್ಲಿಸುತ್ತಿದ್ದಾಗ ಒಬ್ಬ ಯುವಕ ಬೈಕ್ ನಲ್ಲಿದ್ದ ತಲ್ವಾರ್‌ನಿಂದ ಸುನೀಲ್‍ಗೆ ಬೀಸಿದ್ದಾರೆ. ಅದೃಷ್ಟವಶಾತ್ ಸುನೀಲ್ ಕೂದಲೆಳೆ ಅಂತರದಲ್ಲಿ ತಲ್ವಾರ್‌ನಿಂದ ತಪ್ಪಿಸಿಕೊಂಡಿದ್ದಾರೆ. ಈ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.

ಜಿಯೋ ಕಚೇರಿ ಎದುರು ಬೈಕ್ ನಿಲ್ಲಿಸುತ್ತಿದ್ದಾಗ ಸಮೀರ್ ಮತ್ತಿತರರು ನನ್ನ ಮೇಲೆ ತಲ್ವಾರ್‌ನಿಂದ ಹಲ್ಲೆಗೆ ಪ್ರಯತ್ನ ನಡೆಸಿದ್ದಾರೆ ಎಂದು ಸುನಿಲ್‌ ಅವರು ನಗರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸುನಿಲ್‌ ಮನೆಗೆ ಭೇಟಿ ನೀಡಿದರು.

ಸಾಗರ ಬಂದ್‍ಗೆ ಕರೆ
ಘಟನೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಬಜರಂಗ ದಳ ಮತ್ತು ಪರಿವಾರದ ಸಂಘಟನೆಗಳ ಕಾರ್ಯಕರ್ತರು ನಗರ ಠಾಣೆ ಎದುರು ಪ್ರತಿಭಟನೆ ನಡೆಸಿ, ಹಲ್ಲೆಗೆ ಯತ್ನ ನಡೆಸಿದವರ ವಿರುದ್ದ ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.
ಘಟನೆ ಹಿನ್ನೆಲೆಯಲ್ಲಿ ಶಾಸಕ ಹಾಲಪ್ಪ ಹರತಾಳು ಸೋಮವಾರ ಸುನೀಲ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಜೊತೆಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ತಪ್ಪಿತಸ್ಥರ ವಿರುದ್ದ ತಕ್ಷಣ ಕಾನೂನುಕ್ರಮ ಜರುಗಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ರವೀಶ್, ಸಾಗರದಲ್ಲಿ ಹಿಂದೂ ಧರ್ಮಿಯರ ಮೇಲೆ ಹಲ್ಲೆ ನಡೆಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಬಜರಂಗ ದಳದ ನಗರ ಸಂಚಾಲಕ ಸುನೀಲ್ ಅವರ ಮೇಲೆ ಹಲ್ಲೆಗೆ ನಡೆಸಲು ಮುಂದಾಗಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ತಕ್ಷಣ ತಲ್ವಾರ್ ಬೀಸಿದ ಸಮೀರ್ ಎಂಬ ಯುವಕನನ್ನು ಮತ್ತು ಅದಕ್ಕೆ ಸಾಥ್ ನೀಡಿದ ಆರೋಪಿಗಳನ್ನು ಬಂಧಿಸಬೇಕು. ಪದೇಪದೆ ಹಿಂದು ಧರ್ಮಿಯರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಖಂಡಿಸಿ ಜ. 10ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸಾಗರ್ ಬಂದ್‍ಗೆ ಕರೆ ನೀಡಲಾಗಿದೆ. ಸಾರ್ವಜನಿಕರು, ಸಂಘಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಬಂದ್‍ಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅ.ಪು.ನಾರಾಯಣಪ್ಪ, ಆರಗ ಚಂದ್ರಣ್ಣ, ಸುಧೀಂದ್ರ ಕೆ.ಎಚ್., ಸಂತೋಷ್ ಶಿವಾಜಿ, ಐ.ವಿ.ಹೆಗಡೆ, ರಾಘವೇಂದ್ರ ಕಾಮತ್, ಕೆ.ಎಸ್.ಪ್ರಶಾಂತ್, ಆದಿತ್ಯ, ಮಾಪು ಇಕ್ಕೇರಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಗಣೇಶಪ್ರಸಾದ್ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ | Shivamogga attack | ಸಾಗರದಲ್ಲಿ ಬಜರಂಗ ದಳ ಕಾರ್ಯಕರ್ತನ ಕೊಲೆ ಯತ್ನ: ಮಚ್ಚಿನಿಂದ ಕೊಚ್ಚಲು ಪ್ಲ್ಯಾನ್‌

Exit mobile version