Site icon Vistara News

Elephant Balarama: ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ

Balarama, who carried the ambari 14 times during Mysuru Dasara, is no more

Balarama, who carried the ambari 14 times during Mysuru Dasara, is no more

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ (67) ಆನೆ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದೆ. ಸೌಮ್ಯ ಸ್ವಭಾವದ ಆನೆ ಬಲರಾಮ ಇತ್ತೀಚೆಗೆ ತೀವ್ರ ಅಸ್ವಸ್ಥಗೊಂಡಿತ್ತು. ಆದರೆ, ವೈದ್ಯರ ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಕೊನೆಯುಸಿರೆಳೆದಿದೆ.

ಬಲರಾಮನ ಬಾಯಿಯಲ್ಲಿ ಹುಣ್ಣಾಗಿದ್ದರಿಂದ ಆಹಾರ ಸೇವಿಸಲು ಹಾಗೂ ನೀರು‌ ಕುಡಿಯಲು ಆಗದೇ ಅಸ್ವಸ್ಥಗೊಂಡಿತ್ತು. ಹೀಗಾಗಿ ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬಲರಾಮ ಭಾನುವಾರ ಕೊನೆಯುಸಿರೆಳೆಯಿತು.

ಸೌಮ್ಯ ಸ್ವಭಾವ, ಉದ್ದದ ದಂತ, ನೀಳ ಕಾಯ ಹೊಂದಿದ್ದ ಜಂಬೂ ಸವಾರಿಯ ಹಿರಿಯಣ್ಣ ಬಲರಾಮ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ. ಇದಕ್ಕೆ ಕಾಣಿಸುತ್ತಿದ್ದದ್ದು ಒಂದು ಕಣ್ಣು ಮಾತ್ರ. ಆದರೂ ಯಶಸ್ವಿಯಾಗಿ ಅಂಬಾರಿ ಹೊತ್ತು ಗಜಪಡೆ ನಾಯಕತ್ವ ವಹಿಸಿದ್ದ ಅಪರೂಪದ ಆನೆ ಇದಾಗಿದೆ.

ಬಲರಾಮನಿಗೆ ಕ್ಷಯ (ಟಿ.ಬಿ) ಇರಬಹುದು ಎಂದು ವೈದ್ಯರು ಶಂಕಿಸಿದ್ದರು. ಎಷ್ಟೇ ಪ್ರಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಬಲರಾಮನನ್ನು ಬದುಕಿಸಲು ಸಾಧ್ಯವಾಗಿಲ್ಲ. ಈ ಆನೆಯ ಅಗಲಿಕೆಯಿಂದ ಭೀಮನಕಟ್ಟೆ ಆನೆ ಶಿಬಿರದ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ದುಃಖತಪ್ತರಾಗಿದ್ದಾರೆ.

ಇದನ್ನೂ ಓದಿ | Road Accident : ತುಮಕೂರು ಬಳಿ ರಸ್ತೆ ಅಪಘಾತ; ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ದುರ್ಮರಣ

ಈ ಹಿಂದೆ‌ 2022ರ ಡಿಸೆಂಬರ್ ತಿಂಗಳಲ್ಲಿ ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರದ ಸಮೀಪದ ಜಮೀನಿಗೆ ಬಲರಾಮ ಹೋಗಿದ್ದಾಗ ಸುರೇಶ್‌ ಎಂಬಾತ ಗುಂಡು ಹೊಡೆದಿದ್ದ. ಈ ವೇಳೆ ಆನೆಯ ತೊಡೆ, ಕಾಲು ಸೇರಿ ವಿವಿಧೆಡೆ ಗುಂಡು ಹೊಕ್ಕಿ ಗಂಭೀರ ಗಾಯಗಳಾಗಿದ್ದವು. ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದ್ದರು. ಅದಾದ ಬಳಿಕ ಬಲರಾಮ ಆನೆ ಚೇತರಿಸಿಕೊಂಡಿತ್ತು. ಗುಂಡು ಹಾರಿಸಿದ್ದ ಆರೋಪಿ ಸುರೇಶ್‌ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು.

ಬಲರಾಮ ಸಾವಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬಲರಾಮನ ಸಾವು ನೋವು ತಂದಿದೆ: ಶಾಸಕ ದಿನೇಶ್‌ ಗೂಳಿಗೌಡ

ಮೈಸೂರು ದಸರಾ ಎಂದರೆ ನಮ್ಮ ನಾಡಿಗೆ ಹೆಮ್ಮೆ. ಈ ದಸರಾ ಮಹೋತ್ಸವದಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಎಂದರೆ ಅಂಬಾರಿ ಆನೆ ಹಾಗೂ ಗಜಪಡೆಗಳ ಪಯಣವಾಗಿದೆ. ಇಂತಹ ವಿಶ್ವ ವಿಖ್ಯಾತ ಮೈಸೂರು ದಸರೆಯಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಭಾನುವಾರ ಕೊನೆಯುಸಿರೆಳೆದಿರುವುದು ನಿಜಕ್ಕೂ ದುಃಖಕರ ವಿಷಯವಾಗಿದೆ. ಇದು ನಮಗೆ ಅತೀವ ನೋವನ್ನು ತಂದಿದೆ ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ತೀವ್ರ ಅಸ್ವಸ್ಥಗೊಂಡಿದ್ದ ಬಲರಾಮ ಗುಣಮುಖನಾಗಿ ಬರಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಿತ್ತು. ಆದರೆ, ಕೊನೆಗೂ ಬಾರದ ಲೋಕಕ್ಕೆ ಹೋಗಿರುವುದು ಬೇಸರದ ಸಂಗತಿಯಾಗಿದೆ. 14 ಬಾರಿ ಅಂಬಾರಿಯನ್ನು ಹೊತ್ತಿದ್ದ ಬಲರಾಮ ಒಬ್ಬ ಇದ್ದರೆ ಸಾಕು ಎಂಬ ಧೈರ್ಯ ನಮ್ಮೆಲ್ಲರಲ್ಲಿ ಇತ್ತು. ಸೌಮ್ಯ ಸ್ವಭಾವದ ಆನೆ ಎಂದೇ ಖ್ಯಾತಿಯಾಗಿದ್ದ ಬಲರಾಮನನ್ನು ಸಾಕಷ್ಟು ಆನೆಗಳನ್ನು ಪಳಗಿಸುವಲ್ಲಿಯೂ ಬಳಸಿಕೊಳ್ಳಲಾಗುತ್ತಿತ್ತು. ಅನೇಕ ಕಡೆಗಳಲ್ಲಿ ಕಾಡಾನೆಗಳು ಪುಂಡಾಟ ನಡೆಸಿದಾಗ ಅವುಗಳ ಸೆರೆ ಕಾರ್ಯಾಚರಣೆಗೂ ಬಲರಾಮ ನೇತೃತ್ವ ವಹಿಸಿಕೊಳ್ಳುತ್ತಿತ್ತು. ಆದರೆ, ಈಗ ನಮ್ಮ ನಡುವೆ ಬಲರಾಮ ಇಲ್ಲ ಎನ್ನುವುದು ನೋವಿನ ಸಂಗತಿಯಾಗಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version