Site icon Vistara News

Balipa Narayana Bhagavata : ಬಲಿಪ ಪರಂಪರೆಯ ಬಲಿಷ್ಠ ಕೊಂಡಿ, ಯಕ್ಷ ಲೋಕದ ದಂತ ಕಥೆ ಬಲಿಪ ನಾರಾಯಣ ಭಾಗವತರು

Balipa Narayana Bhagavata

#image_title

– ಎಂ.ಶಾಂತರಾಮ ಕುಡ್ವ, ಯಕ್ಷ ಸಂಗಮ ಮೂಡಬಿದಿರೆ
ಬಲಿಪ ನಾರಾಯಣ ಭಾಗವತರು (Balipa Narayana Bhagavata) ಯಕ್ಷ ರಂಗದ ಭೀಷ್ಮ, ಯಕ್ಷರಂಗದ ದಂತಕತೆ ಎಂದೇ ಪ್ರಸಿದ್ಧರು. ಯಕ್ಷರಂಗದ ಎಲ್ಲಾ ಒಳ – ಹೊರಗು ತಿಳಿದ ಭಾಗವತರು. 60 ವರ್ಷಗಳ ಸುದೀರ್ಘ ಕಾಲ ಭಾಗವತಿಕೆ ಮಾಡಿದ ಅನುಭವಿಗಳು. ಯಕ್ಷಗಾನದ ಪೂರ್ವರಂಗದ ಸಂಪೂರ್ಣ ಸಂಗೀತವನ್ನು ಹಾಗೂ ಯಕ್ಷಗಾನ ಪ್ರಸಂಗಗಳ ನಡೆಯನ್ನು ʻಇದಮಿತ್ಥಂʼ ಎಂದು ನಿಖರವಾಗಿ ಹೇಳುವ ಸಾಮರ್ಥ್ಯವಿರುವ ಏಕೈಕ ಭಾಗವತರಾಗಿದ್ದರು. ಸುಮಾರು 60ಕ್ಕಿಂತಲೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ಪುಸ್ತಕ ನೋಡದೇ ಕಂಠ ಪಾಠದಲ್ಲೇ ಹಾಡುವ ಅಪರೂಪದ ಭಾಗವತರು.

ಬಲಿಪ ನಾರಾಯಣ ಭಾಗವತರು ೧೯೩೮ರ ಮಾರ್ಚ್‌ ೧೩ರಂದು ಬಲಿಪ ಮಾಧವ ಭಟ್ – ಸರಸ್ವತೀ ದಂಪತಿಗಳ ಸುಪುತ್ರರಾಗಿ ಕಾಸರಗೋಡಿನ ಪಡ್ರೆ ಎಂಬಲ್ಲಿ ಜನಿಸಿದರು. ʻಬಲಿಪʼ ಮನೆತನವೆಂದರೆ ಭಾಗವತರ ಮನೆ ಎಂದೇ ಖ್ಯಾತಿ ಹೊಂದಿದ ಕಾಲವದು. ಇವರ ಅಜ್ಜ ದಿ. ಬಲಿಪ ನಾರಾಯಣ ಭಾಗವತರು (ಅಂದಿನ ಹಿರಿಯ ಬಲಿಪರು) ಯಕ್ಷರಂಗದಲ್ಲಿ ಮೆರೆದ ದೊಡ್ಡ ಹೆಸರು. ತಮ್ಮ ಅಪಾರ ಸಾಧನೆಯಿಂದ ʻಬಲಿಪ ಮಟ್ಟುʼ ಎಂಬ ಶೈಲಿಯನ್ನು ಹುಟ್ಟು ಹಾಕಿದ ʻಭಾಗವತ ಪಿತಾಮಹʼರು.

ತಮ್ಮ ಅಜ್ಜನಲ್ಲಿ ಹಾಗೂ ತಂದೆಯವರಲ್ಲಿ ಭಾಗವತಿಕೆ ಕಲಿತ ಪುಟ್ಟ ಬಾಲಕ ನಾರಾಯಣ, ಮುಂದೆ ತಮ್ಮ ಅಜ್ಜನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದರು. ಏಳನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, ತಮ್ಮ 13ನೇ ವಯಸ್ಸಿನಲ್ಲೇ ʻಯಕ್ಷ ರಂಗ ಪ್ರವೇಶʼ ಮಾಡಿದರು.ತಮ್ಮ ಅಜ್ಜನ ʻಬಲಿಪ ಶೈಲಿʼಯನ್ನೇ ಮುಂದುವರಿಸಿಕೊಂಡು ಬಂದಿರುವ ಬಲಿಪರು ʻಕಂಚಿನ ಕಂಠದ ಭಾಗವತರುʼ ಎಂದೇ ಪ್ರಸಿದ್ಧರು.

ಕೈಯಲ್ಲಿ ಜಾಗಟೆ ಹಿಡಿದು, ತಲೆಗೆ ಮುಂಡಾಸು ಕಟ್ಟಿ, ಹಣೆಗೆ ತಿಲಕವಿಟ್ಟು ಭಾಗವತಿಕೆಗೆ ಬಲಿಪರು ಕುಳಿತುಕೊಳ್ಳುವುದನ್ನು ನೋಡುವುದೇ ಅಂದ. ಕಪ್ಪು ಮೂರು ಅಥವಾ ಬಿಳಿ ನಾಲ್ಕರ (ಕೆಲವೊಮ್ಮೆ ಬಿಳಿ ಐದು!!) ಏರು ಶ್ರುತಿಯಲ್ಲಿ ಹಾಡುವ ಬಲಿಪರ ಹಾಡನ್ನು ಕೇಳಲೆಂದೇ ಬರುವ ಅದೆಷ್ಟೋ ಲಕ್ಷಾಂತರ ಅಭಿಮಾನಿಗಳಿದ್ದರು. ಯುವ ಭಾಗವತರೂ ನಾಚುವಂತೆ ಅಥವಾ ಅನುಕರಿಸುವಂತೆ ಹಾಡಬಲ್ಲವರಾಗಿದ್ದರು. ಧ್ವನಿವರ್ಧಕ ವ್ಯವಸ್ಥೆ ಇಲ್ಲದ ಕಾಲದಲ್ಲೂ ರಾತ್ರಿ 9.30ರಿಂದ ಮುಂಜಾವಿನ ತನಕ ಒಬ್ಬರೇ ಭಾಗವತಿಕೆ ಮಾಡಿದ ಉದಾಹರಣೆಗಳು ಸಹಸ್ರಾರು.

ಪದ್ಯಗಳ ಕಂಠ ಪಾಠವಲ್ಲದೇ ಕಲಾವಿದರು ಜಾಸ್ತಿಯಿದ್ದಲ್ಲಿ, ಹೊಸ ಪಾತ್ರಗಳನ್ನು ಸೃಷ್ಟಿಸಿ ರಂಗಸ್ಥಳದಲ್ಲೇ ಆ ಪಾತ್ರಗಳಿಗೆ ʻಪದ್ಯʼ ಕೊಟ್ಟ ʻಆಶುಕವಿʼಗಳೂ ಹೌದು. ಎಲ್ಲಾ ಪ್ರಸಂಗಗಳ ʻನಡೆʼ ತಿಳಿದಿದ್ದು, ರಂಗದಲ್ಲೇ ನಿರ್ದೇಶನ ನೀಡಬಲ್ಲ ʻಅಸಾಮಾನ್ಯ ನಿರ್ದೇಶಕʼರೂ ಆಗಿದ್ದರು. ಯಕ್ಷಗಾನದ ಯಾವುದೇ ʻಜಿಜ್ಞಾಸೆʼಗಳಿಗೆ ಬಲಿಪರ ಮಾತು ʻಅಂತಿಮ ಮುದ್ರೆʼ ಎಂಬುದು ಸತ್ಯದ ವಿಷಯ . ಕೆಲವಾರು ಯಕ್ಷಗಾನೀಯ ವಿಷಯಗಳನ್ನು ಚರ್ಚಿಸಲು ವಿದ್ವಾಂಸರು, ಬಲಿಪರ ಮನೆಗೇ ಬರುವುದು ವಾಡಿಕೆಯಾಗಿತ್ತು.

ಸುಮಾರು 50 ಪ್ರಸಂಗ ರಚಿಸಿರುವ ಬಲಿಪರ ಪ್ರಸಂಗಗಳು ಇಂದಿಗೂ ಯಕ್ಷರಂಗದಲ್ಲಿ ಪ್ರದರ್ಶನಗೊಳ್ಳುತ್ತಿವೆ . ಇವುಗಳಲ್ಲಿ 30 ಪ್ರಸಂಗಗಳು ಈಗಾಗಲೇ ಮುದ್ರಣ ಕಂಡು ಯಕ್ಷಗಾನ ಆಸಕ್ತರಿಗೆ ಲಭ್ಯವಿದೆ.ಪಟ್ಲ ಪ್ರತಿಷ್ಠಾನದವರು ಬಲಿಪರ 14 ಅಪ್ರಕಟಿತ ಪ್ರಸಂಗಗಳ ಸಂಕಲನ ʻಜಯಲಕ್ಷ್ಮಿಯ ಯನ್ನು ಪ್ರಕಟಿಸಿದ್ದು , ಈ ಪುಸ್ತಕವು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಗಳಿಸಿತ್ತು.

5 ದಿನಗಳ ಕಾಲ ಆಡಬಲ್ಲ ಶ್ರೀ ದೇವಿಮಹಾತ್ಮೆ ಪ್ರಸಂಗ ರಚಿಸಿರುವ ಬಲಿಪರ ಕೃತಿ ಅತ್ಯಂತ ಶ್ರೇಷ್ಠ ಹಾಗೂ ಅಪರೂಪದ ಕೃತಿಯಾಗಿದೆ . ದುಃಶಾಸನ ವಧೆ, ಕುಮಾರ ವಿಜಯದಂಥ ಅಪರೂಪ ಹಾಗೂ ಕ್ಲಿಷ್ಟವಾದ ಪ್ರಸಂಗಗಳನ್ನು ಬಲಿಪರೇ ಹಾಡಬೇಕು ಎಂಬುದು ಯಕ್ಷಗಾನ ಅಭಿಮಾನಿಗಳ ಅಭಿಮತವಾಗಿತ್ತು.

ಯಕ್ಷಗಾನದ ಕೆಲವು ವಿಶಿಷ್ಟ ತಾಳಗಳು, ರಾಗಗಳು ಬಲಿಪರಿಗೆ ಮಾತ್ರ ಸೀಮಿತವೋ ಎಂಬಂಥಹ ಅಪೂರ್ವ ಸಿದ್ಧಿ ಬಲಿಪರದು . ಬಲಿಪರು ಇದ್ದಲ್ಲಿ ಯಾವುದೇ ಪ್ರಸಂಗಗಳ ಪ್ರದರ್ಶನ ಯಶಸ್ವಿಯಾಗುವುದು ಖಚಿತ ಎನಿಸಿತ್ತು.

ಕಲಾವಿದ ಗಣೇಶ ಗುಂಪಲಾಜೆ ಬರೆದ ಬಲಿಪರು ಹಾಡುವ ಚಿತ್ರ

ಆರು ದಶಕಗಳ ಕಲಾಸೇವೆ ನಡೆಸಿದ ಅಜಾತಶತ್ರು

ವೃತ್ತಿನಿರತ ಭಾಗವತರಾಗಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿರುವ ಬಲಿಪರು ಮೂಲ್ಕಿ, ಕೂಡ್ಲು, ಕುಂಡಾವು ಮತ್ತು ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ . ಕಟೀಲು ಮೇಳದಲ್ಲೇ ನಲ್ವತ್ತು ವರ್ಷಗಳ ದೀರ್ಘಕಾಲ ತಿರುಗಾಟ ನಡೆಸಿ, ಕಟೀಲು ಮೇಳದಲ್ಲಿರುವಾಗಲೇ ನಿವೃತ್ತರಾಗಿದ್ದರು.

ಪಡ್ರೆ ಜಠಾಧಾರಿ ಮೇಳ ಕಟ್ಟಿ ಮೇಳದ ಯಜಮಾನರಾಗಿಯೂ ಅನುಭವ ಪಡೆದವರು. ತಮ್ಮ ಆರು ದಶಕಗಳ ತಿರುಗಾಟದಲ್ಲಿ ಯಾರೊಂದಿಗೂ ವೈಷಮ್ಯ ಹೊಂದಿಲ್ಲದೇ ನಿಜಾರ್ಥದಲ್ಲಿ ʻಅಜಾತಶತ್ರುʼ ಎಂದೇ ಹೆಸರು ಗಳಿಸಿದ ಏಕೈಕ ಕಲಾವಿದರೆಂದರೆ ಬಲಿಪರು ಎಂದು ಧೈರ್ಯವಾಗಿ ಹೇಳಬಹುದು. ನೂರಾರು ಸಿ.ಡಿ. ಹಾಗೂ ಕ್ಯಾಸೆಟ್‌ಗಳಲ್ಲಿ ತಮ್ಮ ಕಂಠಸಿರಿಯನ್ನು ರಸಿಕರಿಗೆ ಉಣಬಡಿಸಿದ ಬಲಿಪರ ಹಾಡುಗಳು ಸಾವಿರಾರು ಅಭಿಮಾನಿಗಳ ಮೊಬೈಲ್ ಫೋನ್‌ಗಳಲ್ಲಿ ʻರಿಂಗ್ ಟೋನ್ʼ ಆಗಿ ನಿತ್ಯ ಅನುರಣಿಸುತ್ತಿವೆ.

ಸಂಪ್ರದಾಯಕ್ಕೂ ಸೈ, ಗಾನವೈಭವಕ್ಕೂ ಸೈ

ಬಲಿಪರು ಕೆಲವು ಅಪೂರ್ವ ರಾಗ, ತಾಳಗಳನ್ನು ಯಕ್ಷಗಾನಕ್ಕಾಗಿಯೇ ರೂಪಿಸಿದ್ದಾರೆ. ಅವುಗಳ ದಾಖಲೀಕರಣವನ್ನು ಉಜಿರೆ ಅಶೋಕ ಭಟ್ ಸಹಿತ ಹಲವಾರು ಆಸಕ್ತರು ಮಾಡಿಸಿಕೊಂಡಿದ್ದಾರೆ ಎಂಬುದು ಸಮಾಧಾನದ ಸಂಗತಿ . 5 ವರ್ಷಗಳ ಹಿಂದಿನ ತನಕ, ತಮ್ಮ 80ನೇ ವಯಸ್ಸಿನಲ್ಲೂ, ಯಕ್ಷಗಾನದ ಇತ್ತೀಚೆಗಿನ ಹೊಸ ಅವಿಷ್ಕಾರವಾದ ಗಾನವೈಭವಗಳಲ್ಲಿ, ಯುವ ಭಾಗವತರೊಂದಿಗೆ ಬಲಿಪರು ಭಾಗವಹಿಸುತ್ತಿದ್ದಾಗ ಹೆಚ್ಚಿನ ಮೆಚ್ಚುಗೆ ಗಳಿಸುತ್ತಿದ್ದು ಬಲಿಪರೇ ಎಂಬುದು ಇವರ ಅಸಾಮಾನ್ಯ ಸಾಧನೆಗೆ ಹಿಡಿದ ಕನ್ನಡಿ.

ಕೌಟುಂಬಿಕ ಬದುಕು, ಮರೆಯಲಾಗದ ಪುತ್ರಶೋಕ

ನಾಲ್ವರು ಮಕ್ಕಳನ್ನು ಹೊಂದಿರುವ ಬಲಿಪರ ಹಿರಿಯ ಮಗ ಮಾಧವರು ಹಿಮ್ಮೇಳವಾದನದಲ್ಲಿ ಪರಿಣತರು. ಎರಡನೇ ಮಗ ಶಿವಶಂಕರರು ಪ್ರಸ್ತುತ ಕಟೀಲು 2ನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದಾರೆ. ಮೂರನೇ ಮಗ ಶಶಿಧರರು ಕೃಷಿಕರಾಗಿದ್ದಾರೆ. ಕಿರಿಯ ಮಗ ಪ್ರಸಾದ ಬಲಿಪರು ಕಟೀಲು ಎರಡನೇ ಮೇಳದ ಪ್ರಧಾನ ಭಾಗವತರಾಗಿದ್ದು, ಕಳೆದ ವರ್ಷ ತಾನೇ ನಿಧನರಾಗಿದ್ದರು. ಈ ವೇದನೆ ಬಲಿಪರಿಗೆ ಮರೆಯಲಾಗದ ದುರಂತ ಕ್ಷಣವಾಗಿತ್ತು.

ದಕ್ಷಿಣ ಕನ್ನಡದ ಮೂಡಬಿದ್ರೆ ಸಮೀಪ ನೂಯಿ ಎಂಬ ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿದ್ದ ಬಲಿಪರು 5 ವರ್ಷಗಳ ಹಿಂದೆ ತಮ್ಮ ಧರ್ಮಪತ್ನಿಯಾದ ಶ್ರೀಮತಿ ಜಯಲಕ್ಷ್ಮಿಯವರನ್ನು ಕಳೆದುಕೊಂಡಾಗ ತುಂಬಾ ನೊಂದುಕೊಂಡಿದ್ದರು.

ಬಲಿಪರ ಹಾಡುವ ಭಂಗಿ ಇದು

ಬಲಿಪ ಭವನವೆಂಬ ಅಭಿಮಾನಿಗಳ ಕೊಡುಗೆ

ಬಲಿಪರ ಸಾಧನೆಯನ್ನು ಪರಿಗಣಿಸಿ ಅಭಿಮಾನಿಗಳು ಸಾವಿರಾರು ಕಡೆಗಳಲ್ಲಿ ಸಂಮಾನಿಸಿದ್ದಾರೆ . ಈ ಸಂಮಾನ ಪತ್ರಗಳೆಲ್ಲಾ 10 ವರ್ಷಗಳ ಹಿಂದೆ ಅವರ ಅಭಿಮಾನಿ ಬಳಗದವರಿಂದ ನಿರ್ಮಿಸಿದ ʻಬಲಿಪ ಭವನʼದಲ್ಲಿ ರಾರಾಜಿಸುತ್ತಿವೆ. ಬಲಿಪರಿಗೆ 75 ಸಂವತ್ಸರ ಪೂರ್ತಿಯಾದ ಸಂದರ್ಭದಲ್ಲಿ, ಅವರ ಅಭಿಮಾನಿಗಳು ಬಲಿಪರ ಸ್ವಗೃಹದ ಬಳಿ ಸುಮಾರು ರೂಪಾಯಿ 15 ಲಕ್ಷ ವೆಚ್ಚದಲ್ಲಿ ಈ ʻಬಲಿಪ ಭವನʼವನ್ನು ಬಲಿಪರಿಗೆ ಸಮರ್ಪಿಸಿದ್ದರು.

ಹತ್ತಾರು ಪ್ರಶಸ್ತಿಗಳ ಮಾಲೆ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ರಂಗದ ಅತ್ಯುನ್ನತ ಹಾಗೂ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಸಾಮಗ ಪ್ರಶಸ್ತಿ, ಶೇಣಿ ಪ್ರಶಸ್ತಿ, 2017ರ ಸಾಲಿನ ಪಟ್ಲ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ʻಜ್ಞಾನ ಪ್ರಶಸ್ತಿʼ, ʻಮುದ್ದಣ ಪುರಸ್ಕಾರʼ, ʻಕರ್ನಾಟಕ ಶ್ರೀʼ ಪ್ರಶಸ್ತಿ, ದುಬೈಯಲ್ಲಿ ನೀಡಿದ ಸಂಮಾನ, ʻಅಗರಿ ಪ್ರಶಸ್ತಿʼ, ʻಯಕ್ಷಸಂಗಮ – ಮೂಡಬಿದಿರೆ ಪ್ರಶಸ್ತಿʼಯಂಥಹ ನೂರಾರು ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿರುವ ಬಲಿಪರಿಗೆ ಇವೆಲ್ಲವೂ ಅವರ ಪ್ರತಿಭೆಗೆ ಅರ್ಹವಾಗಿಯೇ ದೊರಕಿದ್ದವು.

ಒಂದೂವರೆ ವರ್ಷದ ಹಿಂದೆ, ನನ್ನ ಮಿತ್ರರಾದ ದುಬೈಯ ಉದ್ಯಮಿ ಪದ್ಮರಾಜ ಎಕ್ಕಾರ್ ಅವರೊಂದಿಗೆ ಬಲಿಪರು ಹಾಗೂ ಅವರ ಸುಪುತ್ರ ದಿ.ಪ್ರಸಾದ್ ಬಲಿಪರನ್ನು ಅವರ ಮನೆಯಲ್ಲೇ ಸಂಮಾನಿಸಿದ್ದೆವು. ಆಗ ಬಲಿಪರು ತಮ್ಮ ಅತ್ಯಮೂಲ್ಯವಾದ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಯಕ್ಷಗಾನದ ಇತ್ತೀಚಿನ ಕೆಲವು ಅಪಸವ್ಯಗಳನ್ನು ತೀಕ್ಷ್ಣವಾಗಿ ಖಂಡಿಸಿದ್ದರು. ತೀರಾ ದಾಕ್ಷಿಣ್ಯದ ಸ್ವಭಾವದ ಬಲಿಪರು ಯಾರ ಮನಸ್ಸನ್ನೂ ನೋಯಿಸದ ಅಪರೂಪದ ಭಾಗವತರು ಹೌದಾದರೂ ಯಕ್ಷಗಾನದ ನಡೆ, ನಿಯಮ, ಪರಂಪರೆಯನ್ನು ಮೀರಿದರೆ, ಆ ಕಲಾವಿದರು ಎಷ್ಟೇ ಪ್ರಸಿದ್ಧರಾಗಿದ್ದರೂ ನೇರವಾಗಿ ಖಂಡಿಸುವ ಜಾಯಮಾನದವರು. ಯಕ್ಷಗಾನ ಕಮ್ಮಟ, ಗೋಷ್ಠಿಗಳಲ್ಲೂ ಯಕ್ಷಗಾನದ ಪರಂಪರೆ ಮೀರುವ ಬಗ್ಗೆ ಆಕ್ಷೇಪ ಮಾಡಿದ ಅದೆಷ್ಟೋ ಘಟನೆಗಳಿವೆ.

ಇದನ್ನೂ ಓದಿ : Balipa Narayana Bhagavatha : ತೆಂಕು ತಿಟ್ಟಿನ ಭಾಗವತ ಬಲಿಪ ನಾರಾಯಣ ಭಾಗವತ ನಿಧನ

Exit mobile version