ಶಶಿಧರ ಮೇಟಿ
ಬಳ್ಳಾರಿ : ಇದೊಂದು ಅಪರೂಪದ ತೀರ್ಪು. ಮಗನ ಸಾಕ್ಷಿಯಿಂದಲೇ ತಂದೆಗೆ ನಾಲ್ಕು ವರ್ಷ ಕಠಿಣ ಶಿಕ್ಷೆಯಾಗಿದೆ. ವ್ಯಕ್ತಿಯೊಬ್ಬ ಬಲವಂತವಾಗಿ ಹಂಡತಿಗೆ ವಿಷ ಕುಡಿಸಲು ಯತ್ನಿಸಿದ್ದ. ಇದನ್ನು ನೋಡಿ ಪ್ರಮುಖ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ನೀಡಿರುವ ಮಗನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ 2ನೇ ಬಳ್ಳಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ 4 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ, ಜು.27 ರಂದು ಮಹತ್ವ ತೀರ್ಪು ನೀಡಿದೆ.
ಕುಟುಂಬದ ಹಿನ್ನಲೆ ಏನು?
ಸುಜಾತಾ ಎಂಬುವರು ಬಳ್ಳಾರಿ ನಿವಾಸಿ ಪೆದ್ದಣ್ಣನವರನ್ನು ವಿವಾಹವಾಗಿದ್ದರು. ದಂಪತಿಗೆ 11 ವರ್ಷದ ಸುರೇಂದ್ರ ಎನ್ನುವ ಮಗ ಮತ್ತು 9 ವರ್ಷದ ಸ್ಫೂರ್ತಿ ಎನ್ನುವ ಮಗಳಾಗಿದ್ದಾಳೆ. ದಂಪತಿಗಳ ಮಧ್ಯೆ ವೈಷ್ಯಮ ಬೆಳೆದು ನಿತ್ಯದ ಜಗಳಕ್ಕೆ ಕಾರಣವಾಗಿತ್ತು.
ಹೆಂಡತಿಯನ್ನು ವಿಷ ಕೊಟ್ಟು ಸಾಯಿಸುವ ಯತ್ನ?
ಮಾನಸಿಕ ಮತ್ತು ದೈಹಿಕ ಕಿರುಕುಳ ಗಂಡನಿಂದ ಹೆಚ್ಚಾಯಿತು. ಮೇ 18, 2017ರಂದು ಸಂಜೆ 4 ಗಂಟೆಗೆ ಆರೋಪಿತನು ಬೇರೆ ಮಹಿಳೆಯೊಂದಿಗೆ ಮನೆಯಲ್ಲಿ ಇದ್ದಾಗ, ಇಬ್ಬರ ಮಧ್ಯೆ ಮಾತಿನ ಚಕಮಕಿಯಾಗಿದೆ.
ಕೊಲೆ ಯತ್ನದ ಪ್ರತ್ಯಕ್ಷ ಸಾಕ್ಷಿಯಾದ ಮಗ
ತಾನು ಬದುಕಿರಬೇಕಾದರೆ ಇನ್ನೊಬ್ಬಳನ್ನು ಮದುವೆಯಾಗಲು ಬಿಡುವುದಿಲ್ಲ ಎಂದು ಹೇಳಿದಾಗ, ಹೆಂಡತಿಯ ಮೇಲೆ ಹಲ್ಲೆ ಮಾಡಿ ಬಲವಂತಾಗಿ ವಿಷ ಕುಡಿಸಿ ಕೊಲೆ ಮಾಡಲು ಹೊರಟಿದ್ದಾನೆ. ಅದೇ ಸಮಯಕ್ಕೆ ಮಗ ಸುರೇಂದ್ರ ಬಂದಾಗ, ಬಿಟ್ಟು ಹೋಗಿದ್ದಾನೆ. ಅಸ್ವಸ್ಥಗೊಂಡ ಸುಜಾತಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಪೊಲೀಸರ ತಬಿಖೆಯಲ್ಲಿ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ಧ ಐಪಿಸಿ ಸೆಕ್ಷನ್ 504, 323,498(ಎ), 307ಅಡಿಯಲ್ಲಿ ಮಹಿಳಾ ಠಾಣೆಯ ಪಿಎಸ್ಐ ಬೀಬಿ ಮರೆಮ್ಮ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಸಿದ್ದರು.
ನ್ಯಾಯಾಲಯವು ಘಟನೆಯ ಪ್ರತ್ಯಕ್ಷದರ್ಶಿಯಾದ ಮಗ ಸುರೇಂದ್ರ, ದೂರುದಾರಳಾದ ಹೆಂಡತಿ ಸುಜಾತ ಸೇರಿದಂತೆ 8 ಸಾಕ್ಷಿಗಳ ವಿಚಾರಣೆ ನಂತರ, ಎರಡು ಕಡೆ ವಾದ ಆಲಿಸಿದ ಬಳ್ಳಾರಿಯ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ ಅವರು ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಪರಾಧಿಗೆ 4 ವರ್ಷ ಕಠಿಣ ಶಿಕ್ಷೆ ವಿಧಿಸಿ, ಮಹತ್ವದ ತೀರ್ಪು ನೀಡಿದ್ದಾರೆ.
ಸರಕಾರ ಪರವಾಗಿ ಸರಕಾರಿ ಅಭಿಯೋಜಕರಾದ ಎಂ.ಬಿ. ಸುಂಕಣ್ಣ, ಲಕ್ಷ್ಮಿದೇವಿ ಪಾಟೀಲ್ ಅವರು ಸಾಕ್ಷಿ ವಿಚಾರಣೆ ಮಾಡಿ ಅಭಿಯೋಜನೆ ಮಾಡಿ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ| 24 ವಾರಗಳ ಗರ್ಭ ತೆಗೆಸಲು ಅವಿವಾಹಿತ ಮಹಿಳೆಗೆ ಅನುಮತಿ ಕೊಟ್ಟ ಸುಪ್ರೀಂಕೋರ್ಟ್ !